Advertisement
ಚಿಂಚೋಳಿ 2008ರಿಂದ ಎಸ್ಸಿ ಮೀಸಲು ಕ್ಷೇತ್ರವಾಗಿದ್ದು, ಯಾವ ವರ್ಗದವರು ಎಷ್ಟು ಮತದಾರರಿದ್ದಾರೆ ಎನ್ನುವ ಚರ್ಚೆಯೇ ಕ್ಷೇತ್ರದಲ್ಲಿ ಬಲವಾಗಿ ಕೇಳಿ ಬರುತ್ತಿದೆ. ಇಂತಹ ವರ್ಗದ ಬೆಂಬಲ ಇಂತಹದ್ದೇ ಪಕ್ಷಕ್ಕೆ ಎನ್ನುವ ಮಾತುಗಳೇ ಕೇಳಿ ಬರುತ್ತಿವೆ. ಮುಖ್ಯವಾಗಿ ಸಮುದಾಯಗಳ ಮನವೊಲಿಕೆ ಹೇಗೆ ಎನ್ನುವ ಕಾರ್ಯತಂತ್ರಕ್ಕೆ ಕಾರ್ಯಸೂಚಿಯನ್ನು ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ರೂಪಿಸುತ್ತಿವೆ.
Related Articles
Advertisement
ರವಿಕುಮಾರ್-ಸೋಮಣ್ಣ ಉಸ್ತುವಾರಿ: ಬಿಜೆಪಿ ಅಭ್ಯರ್ಥಿ ಲಂಬಾಣಿ ಸಮಾಜದವರಾಗಿದ್ದರಿಂದ ಇನ್ನುಳಿದಂತೆ ಹೆಚ್ಚಿನ ಮತದಾರರಿರುವ ಲಿಂಗಾಯತ ಹಾಗೂ ಕಬ್ಬಲಿಗ ಸಮಾಜದ ಮತಗಳನ್ನು ಸೆಳೆಯುವ ನಿಟ್ಟಿನಲ್ಲಿ ಬಿಜೆಪಿ ಉಸ್ತುವಾರಿಗಳನ್ನು ನಿಯೋಜಿಸುವಲ್ಲೂ ಜಾತಿಯ ಜಾಣ್ಮೆ ಮೆರೆದಿದೆ.
ಕಲಬುರಗಿ ಲೋಕಸಭಾ ಕ್ಷೇತ್ರದ ಉಸ್ತುವಾರಿಯಾಗಿದ್ದ ಕೋಲಿ ಸಮಾಜದ ಎನ್. ರವಿಕುಮಾರ್ ಹಾಗೂ ವೀರಶೈವ-ಲಿಂಗಾಯತ ಸಮುದಾಯದ ಮುಖಂಡ, ಮಾಜಿ ಸಚಿವ ವಿ. ಸೋಮಣ್ಣ ಅವರನ್ನು ಉಸ್ತುವಾರಿಗಳನ್ನಾಗಿ ನೇಮಿಸಲಾಗಿದೆ. ಈ ಮೂಲಕ ಲಿಂಗಾಯತ ಮತ್ತು ಕಬ್ಬಲಿಗ ಸಮುದಾಯದ ಮತಗಳನ್ನು ಹಿಡಿದಿಡುವ ತಂತ್ರಗಾರಿಕೆ ರೂಪಿಸಿದೆ.
ವಲ್ಯಾಪುರೆ ಬೆಂಬಲಿಗರ ಪ್ರತಿಭಟನೆ: ಮಾಜಿ ಸಚಿವ ಸುನೀಲ ವಲ್ಯಾಪುರೆ ಅವರಿಗೆ ಚಿಂಚೋಳಿ ಕ್ಷೇತ್ರದಲ್ಲಿ ಬಿಜೆಪಿಯಿಂದ ಟಿಕೆಟ್ ಕೈ ತಪ್ಪಿದ್ದಕ್ಕೆ ಜಿಲ್ಲಾ ಭೋವಿ (ವಡ್ಡರ್) ಸಮಾಜದ ವತಿಯಿಂದ ಶುಕ್ರವಾರ ಸಂಜೆ ನಗರದಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಲಾಗಿದೆ.
ವಲ್ಯಾಪುರೆ ಎರಡು ಸಲ ಶಾಸಕರಾಗಿ, ಸಚಿವರಾಗಿ ಕೆಲಸ ಮಾಡಿದ್ದಲ್ಲದೇ ಹಲವು ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಎರಡೂವರೆ ದಶಕಗಳಿಂದ ಪಕ್ಷಕ್ಕೆ ನಿಷ್ಠರಾಗಿದ್ದಾರೆ. ಈಗ ಅವರಿಗೆ ಟಿಕೆಟ್ ನೀಡದಿರುವುದು ಭೋವಿ ಸಮಾಜಕ್ಕೆ ಮಾಡಿದ ಅವಮಾನ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
* ಹಣಮಂತರಾವ ಭೈರಾಮಡಗಿ