Advertisement

ಅವ್ಯವಸ್ಥೆ ಮಧ್ಯೆ ನಾಡಕಚೇರಿ ಉತ್ತಮ ಸೇವೆ

11:37 AM Jan 09, 2020 | Naveen |

ಚಿಂಚೋಳಿ: ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ಜನಪರ ಆಡಳಿತ ಕೊಡುವ ದೃಷ್ಟಿಯಿಂದ ರಾಜ್ಯ ಸರಕಾರ ನಾಡ ಕಚೇರಿಗಳನ್ನು ಪ್ರಾರಂಭಿಸಿದೆ. ಆದರೆ ಕೆಲ ನಾಡ ಕಚೇರಿಗಳು ಮೂಲ ಸೌಕರ್ಯಗಳಿಂದ ವಂಚಿತವಾಗಿ ನರಳಾಡುತ್ತಿವೆ. ಇನ್ನು ಕೆಲವು ನಾಡ ಕಚೇರಿಗಳು ಸ್ವಂತ ಕಟ್ಟಡ ಇಲ್ಲದೇ ಬಾಡಿಗೆ ಕಟ್ಟಡಗಳಲ್ಲಿರುವ ಅವ್ಯವಸ್ಥೆ ಮಧ್ಯೆಯೇ ನಿತ್ಯ ಸಾರ್ವಜನಿಕರಿಗೆ ಸೇವೆ ನೀಡುತ್ತಿವೆ.

Advertisement

ತಾಲೂಕಿನ ಸುಲೇಪೇಟ, ಕೋಡ್ಲಿ, ಐನಾಪುರ ಹೋಬಳಿ ಪ್ರದೇಶಗಳಲ್ಲಿ ನಾಡ ಕಚೇರಿಗಳು ಕಳೆದ 25 ವರ್ಷಗಳಿಂದ ಕೆಲಸ ನಿರ್ವಹಿಸುತ್ತಿವೆ. ಆದರೆ ಕಚೇರಿಗಳಲ್ಲಿ ಮೂಲ ಸೌಕರ್ಯಗಳೇ ಇಲ್ಲ. ಸುಲೇಪೇಟ ಮತ್ತು ಐನಾಪುರ ಹೋಬಳಿಯಲ್ಲಿ ಸ್ವಂತ ಕಟ್ಟಡವಿದೆ. ಆದರೆ ಕೋಡ್ಲಿಯಲ್ಲಿ ಪ್ರತ್ಯೇಕ ಕಟ್ಟಡವಿಲ್ಲ. ಆದ್ದರಿಂದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಾಡ ಕಚೇರಿ ತನ್ನ ಕಾರ್ಯ ನಿರ್ವಹಿಸುತ್ತಿದೆ. ನಾಡ ಕಚೇರಿ ಸಿಬ್ಬಂದಿ ಸಮಸ್ಯೆ ಕೇಳುವವರೇ ಇಲ್ಲದಂತಾಗಿದೆ. ನಾಡ ಕಚೇರಿಗಳಲ್ಲಿ ಕುಡಿಯುವ ನೀರು, ಶೌಚಾಲಯ, ವಿದ್ಯುತ್‌ ಉಪಕರಣಗಳ ಅವ್ಯವಸ್ಥೆ ಮಧ್ಯೆಯೇ ಜನ ಸಾಮಾನ್ಯರಿಗೆ ಸಿಬ್ಬಂದಿ ಉತ್ತಮ ಸೇವೆ ನೀಡುತ್ತಿದ್ದಾರೆ.

ಸುಲೇಪೇಟ ನಾಡ ಕಚೇರಿಯು ಶಿಕ್ಷಣ ಇಲಾಖೆಗೆ ಒಳಪಟ್ಟಂತಹ ಸಿಆರ್‌ಸಿ ಕೇಂದ್ರದಲ್ಲಿ ಕಳೆದ 15 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ. ಐನಾಪುರ ನಾಡ ಕಚೇರಿ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ಖಾಸಗಿ ಕಟ್ಟಡದಲ್ಲಿ ಕೆಲಸ ನಿರ್ವಹಿಸುತ್ತಿದೆ.

ತಾಲೂಕಿನ ಎಲ್ಲ ನಾಡ ಕಚೇರಿಗಳಲ್ಲಿ ಸಾರ್ವಜಕನಿಕರು ಕುಳಿತುಕೊಳ್ಳಲು ಫ್ಯಾನ್‌, ಕುರ್ಚಿಗಳ ವ್ಯವಸ್ಥೆ ಇಲ್ಲ. ಸರ್ಕಾರದ ವಿವಿಧ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಲು ಆಗಮಿಸುವ ಸಾರ್ವಜನಿಕರು ನಿಂತುಕೊಂಡೇ ಅರ್ಜಿ ನಮೂನೆ ತುಂಬಬೇಕು. ಕಚೇರಿ ಸಿಬ್ಬಂದಿ ಊಟಕ್ಕೆ ಹೋದರೆ ಅವರಿಗಾಗಿ ತಾಸು ಗಟ್ಟಲೆ ನಿಲ್ಲಬೇಕು. ಇಲ್ಲವೇ ಕಚೇರಿ ಎದುರೇ ಕುಳಿತುಕೊಳ್ಳುವಂತಾಗಿದೆ. ಆದ್ದರಿಂದ ಕಚೇರಿಗೆ ಆಗಮಿಸುವ ಜನರಿಗೆ ಕುರ್ಚಿಗಳ ವ್ಯವಸ್ಥೆ ಮಾಡಬೇಕು ಎಂದು ಸಾಮಾಜಿಕ ಕಾರ್ಯಕರ್ತ ಅಂಬರೀಶ ಗೋಣಿ ಒತ್ತಾಯಿಸಿದ್ದಾರೆ.

ನಾಡ ಕಚೇರಿಗಳಲ್ಲಿ ವಿದ್ಯುತ್‌ ಸಂಪರ್ಕ ಸಮಸ್ಯೆ ಹೆಚ್ಚಾಗಿದೆ. ವಿದ್ಯುತ್‌ ಸಂಪರ್ಕ ಕಡಿತವಾದರೆ ಕಚೇರಿ ಕೆಲಸಗಳು ಸ್ಥಗಿತಗೊಳ್ಳುತ್ತವೆ. ನಾಡ ಕಚೇರಿಗಳಲ್ಲಿ ವಿವಿಧ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸಲು ಜನರು ನಿತ್ಯ ಸಾಲುಗಟ್ಟಿ ನಿಲ್ಲುತ್ತಾರೆ. ವಿದ್ಯುತ್‌ ಸಂಪರ್ಕ ಕಡಿತವಾದರೆ ದಿನವಿಡಿ ಕಾಯುವಂತಾಗುತ್ತಿದೆ. ಇದರಿಂದ 30-40 ಕಿ.ಮೀ ದೂರದಿಂದ ಬರುವ ಜನರು ನಿರಾಶೆ ಪಡುವಂತಾಗುತ್ತದೆ. ಇಷ್ಟೆಲ್ಲ ಸಮಸ್ಯೆಗಳಿದ್ದರೂ ಕಂದಾಯ ಇಲಾಖೆ ಅ ಧಿಕಾರಿಗಳು ಮತ್ತು ಶಾಸಕರು, ಸಂಸದರು ಗಮನ ಹರಿಸುತ್ತಿಲ್ಲ ಎಂದು ಐನಾಪುರ ಗ್ರಾಮದ ಶಿವಾನಂದ ಪಾಟೀಲ ದೂರಿದ್ದಾರೆ.

Advertisement

ನಾಡ ಕಚೇರಿಯಲ್ಲಿ ವಿದ್ಯುತ್‌ ಉಪಕರಣಗಳು ಕೆಟ್ಟು ತೊಂದರೆ ಆಗುತ್ತಿದೆ. ವಿದ್ಯುತ್‌ ಸಮಸ್ಯೆ ಆದರೆ ಅಗತ್ಯ ದಾಖಲೆ ಸರಿಯಾದ ಸಮಯಕ್ಕೆ ಪಡೆಯಲಾಗದೇ ರೈತರು, ಕೃಷಿ ಕೂಲಿಕಾರರು, ಕಾರ್ಮಿಕರು, ಶಾಲೆ-ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ. ಕಂದಾಯ ಇಲಾಖೆ ಅಧಿಕಾರಿಗಳು ಗಮನ ಹರಿಸಿ ನಾಡಕಚೇರಿಗಳಲ್ಲಿ ಬ್ಯಾಟರಿಗಳನ್ನು ಅಳವಡಿಸಿ ಸಮಸ್ಯೆ ಬಗೆಹರಿಸಬೇಕು.
ಭೀಮಶೆಟ್ಟಿ ಎಂಪಳ್ಳಿ,
ಜಿಲ್ಲಾ ಪ್ರಾಂತ ಕೃಷಿ ಕೂಲಿಕಾರರ ಸಂಘದ ಜಿಲ್ಲಾಧ್ಯಕ್ಷ

ನಾಡ ಕಚೇರಿಯಲ್ಲಿ ಯುಪಿಎಸ್‌ ಬ್ಯಾಟರಿಗಳು ಹಾಳಾಗಿರುವ ಕುರಿತು ಗಮನಕ್ಕೆ ಬಂದಿದೆ. ಜಿಲ್ಲಾಧಿಕಾರಿ ಗಮನಕ್ಕೆ ತರಲಾಗಿದೆ. ಶೀಘ್ರವೇ ಎಲ್ಲ ನಾಡ ಕಚೇರಿಗಳಲ್ಲಿ ಯುಪಿಎಸ್‌ ಬ್ಯಾಟರಿ ವ್ಯವಸ್ಥೆ ಮಾಡಿ, ಸಾರ್ವಜನಿಕರಿಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲಾಗುವುದು.
ಅರುಣಕುಮಾರ ಕುಲಕರ್ಣಿ,
ತಹಶೀಲ್ದಾರ್‌

„ಶಾಮರಾವ ಚಿಂಚೋಳಿ

Advertisement

Udayavani is now on Telegram. Click here to join our channel and stay updated with the latest news.

Next