Advertisement

ಮುಲ್ಲಾಮಾರಿ ನಿರಾಶ್ರಿತರ ನರಕಯಾತನೆ

03:00 PM Dec 18, 2019 | Naveen |

ಶಾಮರಾವ ಚಿಂಚೋಳಿ
ಚಿಂಚೋಳಿ:
ಕೆಳದಂಡೆ ಮುಲ್ಲಾಮಾರಿ ನೀರಾವರಿ ಯೋಜನೆ ವ್ಯಾಪ್ತಿಯ ಮುಳುಗಡೆ ಪುನರ್ವಸತಿ ಕೇಂದ್ರಗಳಲ್ಲಿ ವಾಸಿಸುವ ಜನರಿಗಾಗಿ ಕೈಗೊಂಡಿರುವ ಕಾಮಗಾರಿಗಳನ್ನು ಕಳಪೆ ಮಟ್ಟದಲ್ಲಿ ನಿರ್ಮಿಸಲಾಗಿದ್ದು. ಸಂತ್ರಸ್ತರು ಇವುಗಳನ್ನು ಉಪಯೋಗಿಸುವ ಮೊದಲೇ ಹಾಳಾಗಿವೆ.

Advertisement

ಇದರಿಂದ ಸರ್ಕಾರ ನೀಡಿರುವ ಕೋಟ್ಯಂತರ ರೂ. ವ್ಯರ್ಥವಾಗಿದೆ. ತಾಲೂಕಿನ ಕೆಳದಂಡೆ ಮುಲ್ಲಾಮಾರಿ ನೀರಾವರಿ ಯೋಜನೆಯಲ್ಲಿ ಚೆನ್ನೂರ, ಗಡಿಲಿಂಗದಳ್ಳಿ, ಯಲ್ಮಡಗಿ ಗ್ರಾಮಗಳು ಸಂಪೂರ್ಣ ಮುಳುಗಡೆ ಆಗಿವೆ. ಈ ಗ್ರಾಮಸ್ಥರಿಗೆ ಅನುಕೂಲಕ್ಕೆ ತಕ್ಕಂತೆ ಒಟ್ಟು ಏಳು ಪುನರ್ವಸತಿ ಕೇಂದ್ರಗಳನ್ನು ನಿರ್ಮಿಸಲಾಗಿದೆ. ಆದರೆ ಪುನರ್ವಸತಿ ಕೇಂದ್ರಗಳಿಗೆ ನಿರ್ಮಿಸಿದ ಶೆಡ್‌ಗಳಲ್ಲಿ ಕಳೆದ ಮೂರು ದಶಕಗಳಿಂದ ವಾಸಿಸುತ್ತಿರುವ ನಿರಾಶ್ರತರಿಗೆ ಮೂಲ ಸೌಕರ್ಯಗಳನ್ನು ಒದಗಿಸಿಲ್ಲ. ಇದರಿಂದ ನಿರಾಶ್ರಿತರು ಪರದಾಡುವಂತೆ ಆಗಿದೆ.

ಸಂತ್ರಸ್ತರಿಗೆ ಕರ್ನಾಟಕ ನೀರಾವರಿ ನಿಗಮದಿಂದ ಕೋಟ್ಯಂತರ ರೂ. ಬಿಡುಗಡೆ ಮಾಡಿ ಡಾಂಬರೀಕರಣ ರಸ್ತೆ, ಕುಡಿಯುವ ನೀರು, ಚರಂಡಿ, ಶೌಚಾಲಯ, ಸಮುದಾಯ ಭವನ, ಶಾಲೆ ಕೋಣೆ, ದೇವಾಲಯ, ಮಸೀದಿ, ಕಲ್ಯಾಣ ಮಂಟಪಗಳನ್ನು ನಿರ್ಮಿಸಲಾಗಿದೆ. ಆದರೆ ಇವೆಲ್ಲ ಸೌಲಭ್ಯಗಳನ್ನು ಬಳಕೆ ಮಾಡುವ ಮೊದಲೇ ಕೆಟ್ಟು ಹೋಗಿವೆ.

ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷ ಅಧಿ ಕಾರದಲ್ಲಿದ್ದಾಗ ಆಗಿನ ಶಾಸಕ ಡಾ| ಉಮೇಶ ಜಾಧವ ಮನವಿ ಮೇರೆಗೆ ಜಲ ಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ವೈದ್ಯಕೀಯ ಶಿಕ್ಷಣ ಸಚಿವರಾಗಿದ್ದ ಡಾ| ಶರಣಪ್ರಕಾಶ ಪಾಟೀಲ, ಜಲ ಸಂಪನ್ಮೂಲ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಕೇಶಸಿಂಗ್‌ ಕೆಳದಂಡೆ ಮುಲ್ಲಾಮಾರಿ ನೀರಾವರಿ ಯೋಜನೆಯ ಮುಳುಗಡೆ ಪ್ರದೇಶದ ಯಲ್ಮಾಡಗಿ ಪುನರ್ವಸತಿ ಕೇಂದ್ರ 2ಕ್ಕೆ ನವೆಂಬರ್‌ 2016ರಂದು ಭೇಟಿ ನೀಡಿದಾಗ, ಅಲ್ಲಿನ ಸಂತ್ರಸ್ತರ ಸಮಸ್ಯೆಗೆ ಸ್ಪಂದಿಸಿದ್ದ ಜಲ ಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ಯೋಜನೆ ಎಇಇ ಅವರೊಂದಿಗೆ ಚರ್ಚಿಸಿ 19 ಕೋಟಿ ರೂ. ಅನುದಾನ ಬಿಡುಗಡೆಗೊಳಿಸಿದ್ದರು. ಅಲ್ಲದೇ ಯೋಜನೆ ಆಧುನೀಕರಣಕ್ಕಾಗಿ 39 ಕೋಟಿ ರೂ. ನೀಡಿದ್ದರು.

ಮುಳುಗಡೆ ಸಂತ್ರಸ್ತರಿಗೆ ಮೂಲ ಸೌಕರ್ಯಕ್ಕಾಗಿ ನೀಡಿದ ಅನುದಾನದಲ್ಲಿ ಚರಂಡಿ, ರಸ್ತೆ ಡಾಂಬರೀಕರಣ, ಶೌಚಾಲಯ, ಸಮುದಾಯ ಭವನಗಳು, ವಿದ್ಯುತ್‌ ಸಂಪರ್ಕದ ಕಂಬಗಳನ್ನು ನೆಡುವ ಕೆಲಸಗಳನ್ನು ಕಳಪೆಯಾಗಿ ಮಾಡಲಾಗಿದೆ ಎಂದು ನಿರಾಶ್ರಿತರು ದೂರಿದ್ದಾರೆ.

Advertisement

ಡಾಂಬರೀಕರಣ ರಸ್ತೆ ವಾಹನಗಳು ಸಂಚರಿಸುವ ಮೊದಲೇ ಕಿತ್ತುಹೋಗಿ, ಅನೇಕ ಕಡೆಗಳಲ್ಲಿ ತೆಗ್ಗು ಬಿದ್ದಿವೆ. ಚರಂಡಿಗಳಲ್ಲಿ ಕಲ್ಲುಗಳೇ ತುಂಬಿಕೊಂಡಿವೆ. ಕೆಲವೆಡೆ ಕಿತ್ತು ಹೋಗಿವೆ. ಮೂಲ ಸೌಕರ್ಯಗಳ ಕಾಮಗಾರಿಗಳೆಲ್ಲವೂ ಸಂಪೂರ್ಣ ಕಳಪೆಮಟ್ಟದಿಂದ ಕೂಡಿವೆ. ನಮ್ಮ ಹಿರಿಯರು ಗಳಿಸಿದ ಆಸ್ತಿಯನ್ನು ಯೋಜನೆಗೆ ನೀಡಿ ನಮ್ಮ ಜೀವನ ಹಾಳು ಮಾಡಿಕೊಂಡಿದ್ದೇವೆ ಎನ್ನುತ್ತಾರೆ ನಿರಾಶ್ರಿತರು.

Advertisement

Udayavani is now on Telegram. Click here to join our channel and stay updated with the latest news.

Next