Advertisement

72-73ರ ಕಾಮಗಾರಿ ಇನ್ನೂ ಮುಗಿದಿಲ್ಲ

11:15 AM Nov 21, 2019 | Naveen |

ಚಿಂಚೋಳಿ: ತಾಲೂಕಿನ ಕೆಳದಂಡೆ ಮುಲ್ಲಾಮಾರಿ ನೀರಾವರಿ ಯೋಜನೆ ಮುಖ್ಯ ಕಾಲುವೆ ಸಂಪೂರ್ಣ ಕಳಪೆಮಟ್ಟದ್ದಾಗಿದೆ. ಈ ಕುರಿತು ತನಿಖೆಗೆ ಒಳಪಡಿಸಬೇಕು ಮತ್ತು ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಮುಖಂಡರು ಚಿಮ್ಮಾಇದಲಾಯಿ ಗ್ರಾಮದ ಕ್ರಾಸ್‌ನಲ್ಲಿ ಬುಧವಾರ ರಸ್ತೆ ತಡೆ ನಡೆಸಿ, ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.

Advertisement

ಜಿಲ್ಲಾ ರೈತ ಮುಖಂಡ ಶರಣಬಸಪ್ಪ ಮಮಶೆಟ್ಟಿ ಮಾತನಾಡಿ, ತಾಲೂಕಿನ ನಾಗರಾಳ ಗ್ರಾಮ ಬಳಿ 1972-73ರಲ್ಲಿ ಪ್ರಾರಂಭವಾದ ಮುಲ್ಲಾಮಾರಿ ನೀರಾವರಿ ಯೋಜನೆ ಅಪೂರ್ಣವಾಗಿದ್ದು, ಇನ್ನೂ ಲೋಕಾರ್ಪಣೆಯಾಗಿಲ್ಲ. 80 ಕಿಲೋಮೀಟರ್‌ ಉದ್ದ ಕಾಲುವೆ ಇದಾಗಿದೆ. ಹೊಲಗಳಿಗೆ ಒಂದು ಹನಿ ನೀರೂ ಹರಿದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಯೋಜನೆ ಉಪ ಕಾಲುವೆ ಕಾಲುವೆ ಹಾಗೂ ಕಾಲುವೆಗಳ ಸ್ಥಿತಿ ತೀವ್ರ ಹದಗೆಟ್ಟಿದ್ದು, ಭೂಮಿಗೆ ಹನಿ ನೀರೂ ಹರಿದಿಲ್ಲ. ಪ್ರತಿಸಲ ಮುಖ್ಯ ಕಾಲುವೆ ದುರಸ್ತಿ ಹೆಸರಿನಲ್ಲಿ ಕೋಟಿ ಗಟ್ಟಲೆ ಹಣವನ್ನು ಲಪಟಾಯಿಸಲಾಗುತ್ತಿದೆ. ಯೋಜನೆ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಕೇವಲ ಕಾಗದ ಪತ್ರದಲ್ಲಿ ತೋರಿಸುತ್ತಿದ್ದಾರೆ.

ಗುತ್ತಿಗೆದಾರರ ಮೇಲೆ ಕ್ರಿಮಿನಲ್‌ ಪ್ರಕರಣ ಹಾಕಿ, ಕಪ್ಪು ಪಟ್ಟಿಗೆ ಸೇರಿಸಿ, ಎಂಜಿನಿಯರ್‌ ಗಳನ್ನು ಸೇವೆಯಿಂದ ಅಮಾನತುಗೊಳಿಸಿ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಶಿವಾನಂದ ಪಾಟೀಲ ಮಾತನಾಡಿ, ಮುಲ್ಲಾಮಾರಿ ಕೆಳದಂಡೆ ಯೋಜನೆ ತಾಲೂಕಿನಲ್ಲೇ ಅತಿ ದೊಡ್ಡ ಯೋಜನೆಯಾಗಿದೆ. ರಾಜ್ಯದಲ್ಲಿ ಯಾವುದೇ ಸರ್ಕಾರ ಬಂದರೂ ಮುಖ್ಯ ಕಾಲುವೆ ಕಾಮಗಾರಿ ಪೂರ್ಣಗೊಳ್ಳುತ್ತಿಲ್ಲ. ರೈತರ ಕನಸು ನನಸಾಗುತ್ತಿಲ್ಲ. ಮುಲ್ಲಾಮಾರಿ ನೀರಾವರಿ ಯೋಜನೆ ಒಟ್ಟು 9713 ಎಕರೆ ಜಮೀನಿಗೆ ನೀರು ಉಣಿಸುವ ಉದ್ದೇಶ ಹೊಂದಿದೆ. ಐನಾಪುರ ಏತ ನೀರಾವರಿ 10 ಸಾವಿರ ಎಕರೆ ಜಮೀನುಗಳಿಗೆ ನೀರು ಹರಿಸುವ ಉದ್ದೇಶ ಹೊಂದಿದೆ. ಆದರೆ ಸರ್ಕಾರ ಇದನ್ನು
ಸಾಕಾರಗೊಳಿಸಲು ಮುಂದಾಗುತ್ತಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು.

ಚಿಂಚೋಳಿ, ಚಿತ್ತಾಪುರ, ಸೇಡಂ ತಾಲೂಕಿನಲ್ಲಿ ಇರುವ ವಾಸವದತ್ತ, ಓರಿಯೆಂಟಲ್‌, ರಾಜಶ್ರೀ ಸಿಮೆಂಟ್‌, ಚಿಟ್ಟಿನಾಡು, ವಿಕಾಟ್‌ ಸಾಗರ್‌, ಕಲಬುರ್ಗಿ ಸಿಮೆಂಟ್‌ ಕಂಪನಿಗಳಿಗೆ ಶೇ. 60 ರಷ್ಟು ಮುಲ್ಲಾಮಾರಿ ನದಿ ಮೂಲಕ ನೀರು ಹರಿಸಲಾಗುತ್ತದೆ. ಬಲದಂಡೆ ಮುಖ್ಯ ಕಾಲುವೆ ಕಾಮಗಾರಿ ಸಿಮೆಂಟ್‌ ಕಾಂಕ್ರಿಟ್‌ಗೆ ಉಸುಕು ಕಡಿಮೆ ಬಳಸಿ 4. 5 ಇಂಚು ಕೆಲಸ ಮಾಡಿಸುವಂತೆ ಸರ್ಕಾರದ ಆದೇಶವಿದೆ. ಆದರೆ ಈಗಾಗಲೇ ಕೈಗೊಂಡ ಮುಖ್ಯ ಕಾಲುವೆ ಕಾಮಗಾರಿಯಲ್ಲಿ ಬಿರುಕು ಕಾಣಿಸಿಕೊಂಡಿದೆ ಎಂದು ಹೇಳಿದರು.

Advertisement

ಗಡಿನಿಂಗದಳ್ಳಿ ಮತ್ತು ಚನ್ನೂರು ಪುನರ್‌ ವಸತಿ ಕೇಂದ್ರಗಳಲ್ಲಿ ನಡೆಸಿದ ಕಾಮಗಾರಿಗಳು, ಸಿಸಿ ರಸ್ತೆ, ಮೂಲಭೂತ ಸೌಕರ್ಯಗಳು ಕಳಪೆ ಮಟ್ಟದ್ದಾಗಿವೆ. ಪುನರ್ವಸತಿ ಕೇಂದ್ರಗಳಲ್ಲಿ ಮೂಲ ಸೌಕರ್ಯಗಳ ಕಾಮಗಾರಿಗಳಲ್ಲಿ 19 ರಿಂದ 25 ಕೋಟಿ ರೂ. ಲಪಟಾಯಿಸಲಾಗಿದೆ ಎಂದು ರೈತ ಮುಖಂಡರು ಆಪಾದಿಸಿದರು.

ನಂತರ ವಿವಿಧ ಬೇಡಿಕೆಗಳ ಮನವಿ ಪತ್ರವನ್ನು ತಹಶೀಲ್ದಾರ್‌ ಅರುಣಕುಮಾರ ಕುಲಕರ್ಣಿಗೆ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಚೆನ್ನೂರ, ಗಡಿಲಿಂಗದಳ್ಳಿ, ನಾಗರಾಳ, ಯಲ್ಮಾಡಗಿ ಪುರ್ನವಸತಿ ಕೇಂದ್ರದ ರೈತರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next