Advertisement

ಕಣ್ಮನ ಸೆಳೆಯುತ್ತಿದೆ ಗೊಟ್ಟಂಗೊಟ್ಟ

11:35 AM Sep 04, 2019 | Naveen |

ಶಾಮರಾವ ಚಿಂಚೋಳಿ
ಚಿಂಚೋಳಿ: ತಾಲೂಕಿನ ಕುಂಚಾವರಂ ವನ್ಯಜೀವಿ ಧಾಮ ಅರಣ್ಯ ಪ್ರದೇಶದಲ್ಲಿ ಇತ್ತೀಚೆಯ ದಿನಗಳಲ್ಲಿ ಕಾಡು ಪ್ರಾಣಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ವಿವಿಧ ಹಕ್ಕಿಗಳ ಚಿಲಿಪಿಲಿ ಕಲರವ. ಜಲಪಾತಗಳ ಜುಳು ಜುಳು ನೀರಿನ ನೀನಾದ, ಹಚ್ಚ ಹಸಿರು ಬೆಟ್ಟಗಳ ಸೌಂದರ್ಯ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ.

Advertisement

ತಾಲೂಕಿನ ಸೇರಿಭಿಕನಳ್ಳಿ, ಚಿಕ್ಕನಿಂಗದಳ್ಳಿ, ಕುಸರಂಪಳ್ಳಿ, ಸಂಗಾಪುರ, ಧರ್ಮಸಾಗರ, ಭೋಗಾಲಿಂಗದಳ್ಳಿ, ಚಂದ್ರಂಪಳ್ಳಿ, ಸೋಮಲಿಂಗದಳ್ಳಿ, ಐನೋಳಿ ಗ್ರಾಮಗಳ ಹತ್ತಿರ ಬೆಳೆದಿರುವ ಕಾಡಿನಿಂದ ಮಲೆನಾಡಿನಂತ ವಾತಾವರಣ ನಿರ್ಮಾಣವಾಗಿದೆ. ಈ ಭಾಗ ಒಟ್ಟು 44 ಸಾವಿರ ಹೆಕ್ಟೇರ್‌ ಅರಣ್ಯಪ್ರದೇಶ ಒಳಗೊಂಡಿದೆ. ವನ್ಯಜೀವಿಧಾಮ ಅರಣ್ಯ ಪ್ರದೇಶದೊಳಗೆ ಇರುವ ಐತಿಹಾಸಿಕ ಗೊಟ್ಟಂಗೊಟ್ಟ ಅರಣ್ಯ ಪ್ರದೇಶದಲ್ಲಿ ಕಂಗೊಳಿಸುವ ಬಕ್ಕಪ್ರಭು ದೇವಸ್ಥಾನ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ.

ವನ್ಯಜೀವಿಧಾಮದಲ್ಲಿ ಇರುವ ಮಾಣಿಕಪುರ ಜಲಪಾತ, ಗೋಪುನಾಯಕ ತಾಂಡಾ ಬಳಿ ಹರಿಯುವ ‘ಎತ್ತಪೋತ’ ನೋಡಲು ತೆಲಂಗಾಣ, ಆಂಧ್ರಪ್ರದೇಶ ರಾಜ್ಯದ ಅನೇಕ ಜಿಲ್ಲೆಗಳಿಂದ ನೂರಾರು ಪ್ರವಾಸಿಗಳು ಆಗಮಿಸಿ ಧುಮ್ಮಿಕ್ಕಿ ಹರಿಯುವ ಜಲಪಾತ ನೋಡಿ ಆನಂದಿಸುತ್ತಿದ್ದಾರೆ.

ಚಂದ್ರಂಪಳ್ಳಿ ಪ್ರವಾಸಿ ತಾಣ ಎಲ್ಲರ ಅಚ್ಚುಮೆಚ್ಚಿನದ್ದಾಗಿದೆ. ಬೆಟ್ಟಗುಡ್ಡಗಳ ಮಧ್ಯೆ ನಿರ್ಮಿಸಿರುವ ಜಲಾಶಯವನ್ನು ಮಳೆಗಾಲದಲ್ಲಿ ನೋಡಲು ಪ್ರವಾಸಿಗರು ಆಗಮಿಸುತ್ತಾರೆ. ಕುಂಚಾವರಂ ವನ್ಯಜೀವಿಧಾಮದಲ್ಲಿ ಲಾಲ ತಲಾಬ, ಹಾಥಿ ಪಗಡಿ, ಮೋಟಿಮೋಕ ತಾಂಡಾ ಬಳಿ ಇರುವ ಕೋತ್ವಾಲ್ ನಾಲಾದಲ್ಲಿ ಬೆಳೆದಿರುವ ಸಾಗುವಾನಿ ಮರಗಳು ನಯನ ಮನೋಹರವಾಗಿ ಕಾಣಿಸುತ್ತವೆ.

ವನ್ಯಜೀವಿಧಾಮ ಅರಣ್ಯ ಪ್ರದೇಶದಲ್ಲಿ ಪ್ರಸಿದ್ಧ ಭೋಗಲಿಂಗೇಶ್ವರ ದೇವಾಲಯ, ಬಕ್ಕಪ್ರಭು ದೇವಸ್ಥಾನಗಳಿಗೆ ಹುಣ್ಣಿಮೆ, ಅಮವ್ಯಾಸೆ ದಿವಸ ಭಕ್ತರು ಆಗಮಿಸಿ, ನೈಸರ್ಗಿಕ ಸೊಬಗನ್ನು ಸವಿಯುತ್ತಾರೆ. ಕುಂಚಾವರಂ ಅರಣ್ಯಪ್ರದೇಶವನ್ನು 2011ರಲ್ಲಿ ವನ್ಯಜೀವಿಧಾಮವೆಂದು ಘೋಷಿಸಿದ ಬಳಿಕ ಕಾಡಿನಲ್ಲಿ ನವಿಲು, ಜಿಂಕೆ, ಕಾಡು ಕುರಿ, ಮೊಲ, ಕಾಡು ಹಂದಿ, ಚಿಪ್ಪು ಹಂದಿ, ಚುಕ್ಕೆ ಜಿಂಕೆ ಸಂಖ್ಯೆ ಹೆಚ್ಚಾಗುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next