ಶಾಮರಾವ ಚಿಂಚೋಳಿ
ಚಿಂಚೋಳಿ: ತಾಲೂಕಿನ ಜಟ್ಟೂರು ಗ್ರಾಮದ ಬಳಿ ಹರಿಯುವ ಮುಲ್ಲಾಮಾರಿ ಕಾಗಿಣಾ ನದಿಗೆ ನಿರ್ಮಿಸಲಾಗುತ್ತಿರುವ ಬಾಂದಾರ್ (ಬ್ರಿಡ್ಜ್ ಕಂ ಬ್ಯಾರೇಜ್) ಪೂರ್ಣಗೊಳ್ಳುವ ಹಂತಕ್ಕೆ ತಲುಪಿದೆ. ಜಟ್ಟೂರ ಗ್ರಾಮದ ಬಳಿಯಿರುವ ಮುಲ್ಲಾಮಾರಿ ಮತ್ತು ಕಾಗಿಣಾ ನದಿ ಮಳೆಗಾಲದಲ್ಲಿ ತುಂಬಿ ಹರಿಯುತ್ತದೆ. ಈ ವೇಳೆ ಜಟ್ಟೂರ ಗ್ರಾಮಸ್ಥರು ನೆರೆಯ ತೆಲಂಗಾಣ ರಾಜ್ಯದ ತಾಂಡೂರ ಮತ್ತು ಬಶಿರಾಬಾದ ನಗರ ಪ್ರದೇಶಗಳಿಗೆ ವ್ಯಾಪಾರಕ್ಕಾಗಿ, ಆಸ್ಪತ್ರೆಗೆ ತೆರಳಲು ತುಂಬಿ ಹರಿಯುವ ನದಿಯನ್ನೇ ದಾಟಿ ಇಲ್ಲವೇ ಈಜಿಕೊಂಡು ಹೋಗುವ ಪರಿಸ್ಥಿತಿ ಇತ್ತು.
ಮಳೆಗಾಲದಲ್ಲಿ ಅನಿವಾರ್ಯವಾಗಿ ವ್ಯಾಪಾರ ಮಾಡುವುದಕ್ಕೆ ಹೋಗುವ ಸಂದರ್ಭದಲ್ಲಿ ಕೆಲವರು ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿರುವ ಘಟನೆಗಳು ನಡೆದಿವೆ. ಜಟ್ಟೂರ, ಹಲಕೋಡಾ, ಪೋತಂಗಲ್ ಗ್ರಾಮಸ್ಥರು ಅನುಭವಿಸುತ್ತಿರುವ ಸಂಕಷ್ಟಕ್ಕೆ ಕೇಂದ್ರ ಮಾಜಿ ಸಚಿವ ಡಾ| ಮಲ್ಲಿಕಾರ್ಜುನ ಖರ್ಗೆ ಮತ್ತು ಸೇಡಂ ಕ್ಷೇತ್ರದ ಮಾಜಿ ಶಾಸಕ ಡಾ| ಶರಣಪ್ರಕಾಶ ಪಾಟೀಲ ಪರಿಶ್ರಮದಿಂದಾಗಿ 26.6 ಕೋಟಿ ರೂ. ಗಳ ಬ್ರಿಡ್ಜ್ ಕಂ ಬ್ಯಾರೇಜ್ ಮಂಜೂರಿ ಆಗಿತ್ತು.
ಈ ಕಾಮಗಾರಿ ಈಗ ಪೂರ್ಣಗೊಳ್ಳುವ ಹಂತಕ್ಕೆ ತಲುಪಿದೆ. ತಾಲೂಕಿನ ಗಡಿಗ್ರಾಮ ಜಟ್ಟೂರು ಮತ್ತು ತೆಲಂಗಾಣ ರಾಜ್ಯದ ಜೀವಣಗಿ ಗ್ರಾಮಗಳ ಮಧ್ಯೆ ಹರಿಯುವ ಮುಲ್ಲಾಮಾರಿ ನದಿಗೆ ನಿರ್ಮಾಣಗೂಳ್ಳುತ್ತಿರುವ ಸೇತುವೆಯಿಂದ ಸಾಕಷ್ಟು ಉಪಯೋಗ ಆಗಲಿದೆ. 192 ಮೀಟರ್ ಉದ್ದ, ಏಳು ಮೀಟರ್ ಎತ್ತರದ ಸೇತುವೆ ಇದಾಗಲಿದೆ. ಬಾಂದಾರ್‌ನಲ್ಲಿ 3 ಮೀಟರ್ ಎತ್ತರದ ವರೆಗೆ ನೀರು ಸಂಗ್ರಹಿಸಲು ಉದ್ದೇಶಿಸಲಾಗಿದೆ. ಒಟ್ಟು 70 ಗೇಟುಗಳನ್ನು ಇದು ಹೊಂದಿದೆ. ಬಾಂದಾರ ನಿರ್ಮಾಣದಿಂದಾಗಿ ಜಟ್ಟೂರ ಗ್ರಾಮದಿಂದ 5.75 ಕಿ.ಮೀ ವರೆಗೆ ಹಿನ್ನೀರು ಸಂಗ್ರಹವಾಗಲಿದೆ. ಅಲ್ಲದೇ ಒಟ್ಟು 1408.7 ಎಕರೆ ಜಮೀನು ನೀರಾವರಿಗೆ ಒಳಪಡಲಿದೆ. 26.6 ಕೋಟಿ ರೂ. ಟೆಂಡರ್‌ದಲ್ಲಿ 23.66 ಕೋಟಿ ರೂ. ಮೊತ್ತಕ್ಕೆ ಬೆಂಗಳೂರಿನ ಅಮೃತಾ ಕಂಪನಿ ಗುತ್ತಿಗೆ ಪಡೆದಿದೆ. 18 ತಿಂಗಳಲ್ಲಿ ಈ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣವಾಗುತ್ತಿದೆ. ಇದರಿಂದಾಗಿ ತಾಲೂಕಿನ ಜಟ್ಟೂರ, ಕರ್ಚಖೇಡ, ಚತ್ರಸಾಲ ಗ್ರಾಮಗಳ ರೈತರು ಹಾಗೂ ತೆಲಂಗಾಣ ರಾಜ್ಯದ ರೈತರಿಗೆ ನೀರಾವರಿ ಬೆಳೆ ಹೆಚ್ಚಿನ ನೆರವಾಗಲಿದೆ. ಬ್ಯಾರೇಜ್ ನಿರ್ಮಾಣದಿಂದ ತಾಂಡೂರ, ಬಶೀರಾಬಾದ ನಗರ ಪ್ರದೇಶಗಳಿಗೆ ಸಂಚರಿಸಲು ಅನುಕೂಲವಾಗಲಿದೆ ಎಂದು ಶಿರೋಳಿ ತಾ.ಪಂ ಸದಸ್ಯ ವೆಂಕಟರೆಡ್ಡಿ ಪಾಟೀಲ ಜಟ್ಟೂರ ಹರ್ಷ ವ್ಯಕ್ತಪಡಿಸಿದ್ದಾರೆ.
ಜಟ್ಟೂರ ಗ್ರಾಮದ ಬಳಿ ಹರಿಯುವ ಮುಲ್ಲಾಮಾರಿ ನದಿಗೆ ಬಾಂದಾರು ಸೇತುವೆ ನಿರ್ಮಿಸಬೇಕು ಎನ್ನುವುದು ಮಾಜಿ ಮುಖ್ಯಮಂತ್ರಿ ದಿ| ವೀರೇಂದ್ರ ಪಾಟೀಲ ಅವರ ಕನಸಾಗಿತ್ತು. ಮಾಜಿ ಸಚಿವ ದಿ| ವೈಜನಾಥ ಪಾಟೀಲ ಮತ್ತು ಮಾಜಿ ಶಾಸಕ ಕೃಲಾಶನಾಥ ಪಾಟೀಲ ಪ್ರಯತ್ನ ನಡೆಸಿದ್ದರೂ ಫಲ ನೀಡಿರಲಿಲ್ಲ. ಬಾಂದಾರ ನಿರ್ಮಾಣದಿಂದಾಗಿ ತೆಲಂಗಾಣದ ಜೀವಣಗಿ, ಕ್ಯಾದಗೇರಾ, ಬಶೀರಾಬಾದ ಮತ್ತು ಕರ್ನಾಟಕದ ಜಟ್ಟೂರು, ಪೋತಂಗಲ್, ಹಲಕೋಡಾ ಛತ್ರಸಾಲ್, ಕರ್ಚಖೇಡ, ನಿಡಗುಂದಾ ಗ್ರಾಮಗಳ ನೀರಾವರಿಗೆ ಅನುಕೂಲವಾಗಲಿದೆ. ಅನೇಕ ವರ್ಷಗಳಿಂದ ನೀರಾವರಿಗಾಗಿ ರೈತರು ಕಂಡಿದ್ದ ಕನಸು ಇದೀಗ ಪೂರ್ಣಗೊಳ್ಳಲಿದ್ದು, ರೈತರಲ್ಲಿ ಮತ್ತು ಗ್ರಾಮಸ್ಥರಲ್ಲಿ ಸಂತಸವನ್ನುಂಟು ಮಾಡಿದೆ.
ಜಟ್ಟೂರ ಗ್ರಾಮದ ಬಾಂದಾರ ನಿರ್ಮಾಣಕ್ಕೆ ಮಂಜೂರಾತಿ ಜೊತೆಗೆ ತೆಲಂಗಾಣ ರಾಜ್ಯದಿಂದ ಎದುರಾಗಿದ್ದ ತೊಡಕುಗಳನ್ನು ನಿವಾರಿಸುವಲ್ಲಿ ಮಾಜಿ ಸಚಿವ ಡಾ| ಶರಣಪ್ರಕಾಶ ಪಾಟೀಲ ಸತತವಾಗಿ ಯತ್ನಿಸಿದ್ದರು. ಈ ಹಿನ್ನೆಲೆಯಲ್ಲಿ ಬಾಂದಾರ್ ನಿರ್ಮಾಣ ಕಾಮಗಾರಿ ಭರದಿಂದ ನಡೆಯುತ್ತಿದ್ದು, ಇನ್ನೆರಡು ತಿಂಗಳಲ್ಲಿ ಪೂರ್ಣಗೊಳ್ಳುವ ಹಂತಕ್ಕೆ ತಲುಪಿದೆ.
ನಾಗಪ್ಪ , ಎಇ,
ಕೃಷ್ಣ ಭಾಗ್ಯ ಜಲನಿಗಮ