Advertisement

ಚಿಂಚೋಳಿ, ಕುಂದಗೋಳದಲ್ಲಿ “ಕೈ’, “ಕಮಲ’ದ ಕಲರವ

11:26 PM May 11, 2019 | Lakshmi GovindaRaj |

ಆಡಳಿತಾರೂಢ ಮೈತ್ರಿ ಪಕ್ಷಗಳು ಹಾಗೂ ಪ್ರತಿಪಕ್ಷ ಬಿಜೆಪಿ ಪಾಲಿಗೆ ಪ್ರತಿಷ್ಠೆಯ ಕಣವಾಗಿರುವ ಕುಂದಗೋಳ ಹಾಗೂ ಚಿಂಚೋಳಿ ಕ್ಷೇತ್ರಗಳಲ್ಲಿ ಪ್ರಚಾರದ ಭರಾಟೆ ಜೋರಾಗಿದೆ. ಕುಂದಗೋಳದಲ್ಲಿ ಶನಿವಾರ ಬಿಜೆಪಿ ಅಭ್ಯರ್ಥಿ ಪರ ಬಿಎಸ್‌ವೈ, ಶ್ರೀರಾಮುಲು ಭರ್ಜರಿ ಪ್ರಚಾರ ನಡೆಸಿದರೆ, ಸಚಿವರಾದ ಸತೀಶ್‌ ಜಾರಕಿಹೊಳಿ ಹಾಗೂ ಡಿ.ಕೆ.ಶಿವಕುಮಾರ್‌ ಅವರು ಕಾಂಗ್ರೆಸ್‌ ಅಭ್ಯರ್ಥಿ ಪರ ಮತ ಕೋರಿದರು. ಇದೇ ವೇಳೆ, ಚಿಂಚೋಳಿಯಲ್ಲಿ ಬಿಜೆಪಿ ಪರ ಶೋಭಾ ಕರಂದ್ಲಾಜೆ, “ಕೈ’ ಅಭ್ಯರ್ಥಿ ಪರ ಸಿದ್ದರಾಮಯ್ಯ, ಈಶ್ವರ್‌ ಖಂಡ್ರೆ, ಅಮರೇಗೌಡ ಬಯ್ನಾಪುರ, ಗೃಹ ಸಚಿವ ಎಂ.ಬಿ.ಪಾಟಿಲ್‌, ಸಿಎಂ ಇಬ್ರಾಹಿಂ ಭರ್ಜರಿ ಪ್ರಚಾರ ನಡೆಸಿ, ಮತದಾರರ ಮನಗೆಲ್ಲುವ ಯತ್ನ ನಡೆಸಿದರು.

Advertisement

ದುಡ್ಡು-ಅಧಿಕಾರಕ್ಕಾಗಿ ಜಾಧವ ಬಿಜೆಪಿ ಸೇರ್ಪಡೆ: ಸಿದ್ದು
ಕಲಬುರಗಿ: “ವೈದ್ಯ ವೃತ್ತಿ ಬಿಡಿಸಿಕೊಂಡು ಬಂದು ಟಿಕೆಟ್‌ ನೀಡಿ ಶಾಸಕನಾಗಿ ಮಾಡಿದ್ದಲ್ಲದೇ, ಹಲವು ಅಧಿಕಾರ ನೀಡಿದ್ದರೂ ಡಾ| ಉಮೇಶ ಜಾಧವ ದುಡ್ಡಿನ ಆಸೆ ಹಾಗೂ ಅಧಿಕಾರದ ಸಲುವಾಗಿ ಬಿಜೆಪಿಗೆ ಹೋಗಿದ್ದಾನೆ. ಈಗ ಸ್ವಾಭಿಮಾನದ ತೇಪೆ ಹಚ್ಚುವ ಕೆಲಸ ಮಾಡುತ್ತಿದ್ದಾನೆ’ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ಧಾಳಿ ನಡೆಸಿದ್ದಾರೆ.

ಚಿಂಚೋಳಿ ಮತಕ್ಷೇತ್ರದ ಅರಣಕಲ್‌, ಕೊಡ್ಲಿ ಹಾಗೂ ಇತರ ಕಡೆಗಳಲ್ಲಿ ಕಾಂಗ್ರೆಸ್‌ ಪ್ರಚಾರ ಸಭೆಯಲ್ಲಿ ಮಾತನಾಡಿ, ಉಮೇಶ ಜಾಧವ ಕಾಂಗ್ರೆಸ್‌ ಬಿಡಲು ಯಾವುದೇ ಕಾರಣವಿರಲಿಲ್ಲ. ಪಕ್ಷ ಬಿಡುವಾಗ ಸೌಜನ್ಯಕ್ಕಾಗಿ ಕಾರ್ಯಕರ್ತರನ್ನು ಕೇಳಲಿಲ್ಲ. ಪ್ರಧಾನಿ ಮೋದಿ ಸರ್ವಾಧಿಕಾರಿ. ಆನೆ ನಡೆದಿದ್ದೇ ದಾರಿ ಎಂದು ತಿಳಿದುಕೊಂಡಿದ್ದಾರೆ.

ಬಿಜೆಪಿಗೆ ಅಹಿಂದ ವರ್ಗದವರು ಬೇಕಾಗಿಲ್ಲ. ರಾಜ್ಯದ 27 ಲೋಕಸಭೆ ಸೀಟುಗಳಲ್ಲಿ ಒಂದೇ ಒಂದು ಸೀಟು ಹಿಂದುಳಿದ ವರ್ಗದವರಿಗೆ ನೀಡಲಿಲ್ಲ ಎಂದರು. ಚಿಂಚೋಳಿಯಲ್ಲಿ ಜನರು ಈ ಸಲವೂ ಗೆಲ್ಲಿಸಲು ನಿರ್ಧರಿಸಿದ್ದರಿಂದ ಸೂರ್ಯ ಪೂರ್ವದಲ್ಲಿ ಹುಟ್ಟುವುದು ಹೇಗೆ ಸತ್ಯವೋ ಹಾಗೆ ಸುಭಾಷ ರಾಠೊಡ ಗೆಲುವು ಅಷ್ಟೇ ಸತ್ಯ ಎಂದರು.

ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಿದ್ದು ನಾವು. ಸಂತ ಸೇವಾಲಾಲ ಜಯಂತಿ ಸರ್ಕಾರದಿಂದ ಆಚರಣೆ ಹಾಗೂ ಬಂಜಾರ ಸೇವಾ ಅಭಿವೃದ್ಧಿ ನಿಗಮ ಹೀಗೆ ಹತ್ತಾರು ಕಾರ್ಯಗಳನ್ನು ರೂಪಿಸಿದ್ದು ನಮ್ಮ ನೇತೃತ್ವದ ಕಾಂಗ್ರೆಸ್‌ ಸರ್ಕಾರ. ಆದರೆ, ಬಿಜೆಪಿ ಏನು ಮಾಡಿದೆ ಎನ್ನುವುದನ್ನು ಜನ ಅರಿತುಕೊಳ್ಳಬೇಕು. ಲೋಕಸಭೆಯಲ್ಲಿ ಡಾ| ಉಮೇಶ ಜಾಧವ ಸೋಲ್ತಾನೆ. ಈಗ ಚಿಂಚೋಳಿಯಲ್ಲಿ ಅವರ ಮಗ ಡಾ| ಅವಿನಾಶ ಜಾಧವನನ್ನು ಸೋಲಿಸಿ.
-ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ.

Advertisement

ಮೇ 23ರ ನಂತರ ಬಿಜೆಪಿ ಒಡೆಯುತ್ತೆ. ಆವಾಗ ಬಿಜೆಪಿಯವರೇ ಕಾಂಗ್ರೆಸ್‌ಗೆ ಬರಲಿದ್ದಾರೆ. ಪ್ರಧಾನಿ ಮೋದಿ ಅಧಿಕಾರದಿಂದ ಕೆಳಗಿಳಿಯಲಿದ್ದಾರೆ. ಬಿಜೆಪಿಯವರು ಅಧಿಕಾರ ಸಿಗುವವರೆಗೂ ಹಿಂದೂ ಎನ್ನುತ್ತಾರೆ. ಅಧಿಕಾರ ಸಿಗುವಾಗ ಸಂತೋಷ ಮುಂದೆ, ಬಿಎಸ್‌ವೈ ಹಿಂದೆ ಆಗುತ್ತಾರೆ. ಇದನ್ನು ವೀರಶೈವರು ತಿಳಿದುಕೊಳ್ಳಬೇಕು. ವೀರೇಂದ್ರ ಪಾಟೀಲಗೆ ಜನ್ಮ ಕೊಟ್ಟ ಚಿಂಚೋಳಿಯಲ್ಲಿ ಅನ್ಯಾಯಕ್ಕೆ ಶಿಕ್ಷೆಯಾಗಲಿ.
-ಸಿ.ಎಂ. ಇಬ್ರಾಹಿಂ, ಕೇಂದ್ರದ ಮಾಜಿ ಸಚಿವ

ಉಮೇಶ ಜಾಧವ ಅವರನ್ನು ವೈದ್ಯ ವೃತ್ತಿಯಿಂದ ಬಿಡಿಸಿ ಶಾಸಕರನ್ನಾಗಿ ಮಾಡಿದರೂ ಪಕ್ಷ ಏಕೆ ಬಿಟ್ಟರು. ಬಿಡುವಾಗ ಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕ್‌ ಖರ್ಗೆ ಮೇಲೆ ಆಪಾದನೆ ಹೊರಿಸಿದರು. ಈಗ ಅವರ ಮಗ ಬಿಜೆಪಿ ಸದಸ್ಯತ್ವ ಪಡೆದಿಲ್ಲ. ಒಂದು ದಿನವೂ ಬಿಜೆಪಿ ಸೇವೆ ಮಾಡಿಲ್ಲ. ಪರೀಕ್ಷೆ ಬರೆಯುವ ಹುಡುಗನನ್ನು ಕರೆ ತಂದು ನಿಲ್ಲಿಸಿದ್ದಾರೆ.
-ಎಂ.ಬಿ. ಪಾಟೀಲ, ಗೃಹ ಸಚಿವ.

ಬಿಜೆಪಿ ಸರ್ಕಾರ ಐದು ವರ್ಷದಲ್ಲಿ ಒಂದೂ ಜನಪಯೋಗಿ ಕೆಲಸ ಮಾಡಲಿಲ್ಲ. ಪ್ರಧಾನ ಮಂತ್ರಿ ಕೃಷಿ ವಿಮಾ ಯೋಜನೆ ಅಡಿ ರೈತರಿಂದ 2016-18ರಲ್ಲಿ 48 ಸಾವಿರ ಕೋಟಿ ರೂ.ಪ್ರಿಮಿಯಂ ತುಂಬಿಸಿಕೊಂಡಿದೆ. ಆದರೆ ದೇಶದಾದ್ಯಂತ ಬರಗಾಲ ಬಿದ್ದು, ಬೆಳೆ ಹಾನಿಯಾಗಿದ್ದರೂ ರೈತರಿಗೆ 20 ಸಾವಿರ ಕೋಟಿ ಮಾತ್ರ ಪರಿಹಾರ ನೀಡಲಾಗಿದೆ. ಇದೇನಾ ಮೋದಿ ರೈತರ ಬಗೆಗೆ ಹೊಂದಿರುವ ಕಾಳಜಿ?
-ಮಲ್ಲಿಕಾರ್ಜುನ ಖರ್ಗೆ, ಸಂಸದ.

ಅಗ್ನಿಪರೀಕ್ಷೆಯಲ್ಲಿ ಪಕ್ಷದ ವರಿಷ್ಠರು ಆಶೀರ್ವಾದ ಮಾಡಿ ಟಿಕೆಟ್‌ ನೀಡಿದ್ದಾರೆ. ಈಗ ಚಿಂಚೋಳಿ ಕ್ಷೇತ್ರದ ಜನರು ತಮ್ಮ ಸೇವಕ ಯಾರಾದರೆ ಚೆನ್ನ ಎನ್ನುವುದನ್ನು ಅರ್ಥ ಮಾಡಿಕೊಂಡು ಆಶೀರ್ವಾದ ಮಾಡಿದರೆ ಮನೆ ಮಗನಾಗಿ ಕೆಲಸ ಮಾಡುವೆ. ಸತ್ಯ ಹಾಗೂ ಸುಳ್ಳಿನ ನಡುವಿನ ಯುದ್ಧದಲ್ಲಿ ಸತ್ಯದ ಪರ ಜನ ನಿಂತರೆ ಅರ್ಥ ಬರುತ್ತದೆ.
-ಸುಭಾಷ ರಾಠೊಡ, ಚಿಂಚೋಳಿ ಕಾಂಗ್ರೆಸ್‌ ಅಭ್ಯರ್ಥಿ

Advertisement

Udayavani is now on Telegram. Click here to join our channel and stay updated with the latest news.

Next