ಚಿಂಚೋಳಿ: ತಾಲೂಕಿನಲ್ಲಿ ಶುಕ್ರವಾರ ರಾತ್ರಿಯಿಡಿ ಸುರಿದ ಬಿರುಸಿನ ಮಳೆಯಿಂದ ಅನೇಕ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆಗಳು ನೀರಿನಲ್ಲಿ ಮುಳುಗಿದ್ದು, ರಸ್ತೆ ಮೇಲೆ ಭಾರಿ ಪ್ರಮಾಣದಲ್ಲಿ ನೀರು ಹರಿದಿದೆ.
ಪಟ್ಟಣದ ಸುತ್ತಮುತ್ತ ರಾತ್ರಿಯಿಡಿ 122 ಮಿ.ಮೀ ದಾಖಲೆ ಮಳೆ ಬಿದ್ದಿದೆ. ತೆಲಂಗಾಣ ಗಡಿಯಲ್ಲಿ ವ್ಯಾಪಕವಾಗಿ ಮಳೆ ಸುರಿದ ಪರಿಣಾಮವಾಗಿ ತಾಲೂಕಿನ ಕುಂಚಾವರಂ ವನ್ಯಜೀವಿಧಾಮ ಅರಣ್ಯಪ್ರದೇಶದಲ್ಲಿ ಇರುವ ಎತ್ತಪೋತಾ ಜಲಧಾರೆ ಮೈದುಂಬಿ ಹರಿಯುತ್ತಿದೆ. ಮಾಣಿಕಪುರ ಜಲಪಾತವೂ ಉಕ್ಕಿ ಹರಿಯುತ್ತಿದೆ. ಪಟ್ಟಣದಲ್ಲಿ ವ್ಯಾಪಕ ಮಳೆ ಆಗಿರುವುದರಿಂದ ಪಟೇಲ್ ಕಾಲೋನಿಯಲ್ಲಿ 20ಕ್ಕೂ ಹೆಚ್ಚು ಹೆಚ್ಚು ಮನೆಗಳಿಗೆ ನಾಲೆ ನೀರು ನುಗ್ಗಿ ಮನೆಯಲ್ಲಿದ್ದ ಆಹಾರ ಧಾನ್ಯ, ಬಟ್ಟೆ ಹಾಗೂ ಬೆಲೆ ಬಾಳುವ ವಸ್ತುಗಳು ಹಾಳಾಗಿವೆ. ಗಣಾಪುರ ಗ್ರಾಮದ ಬಳಿ ಇರುವ ಸಣ್ಣ ಸೇತುವೆ ಮೇಲಿಂದ ನೀರು ಬೆಳಗಿನ ಜಾವದ ವರೆಗೆ ಹರಿದಿರುವುದರಿಂದ ವಾಹನಗಳ ಸಂಪರ್ಕ ಕಡಿತವಾಗಿದೆ. ಕಲ್ಲುಗಣಿ ಮತ್ತು ಸಿಮೆಂಟ್ ಲಾರಿಗಳು ರಸ್ತೆ ಮೇಲೆ ನಿಂತಿವೆ. ನಾಲೆಯಲ್ಲಿ ಮಳೆ ನೀರು ತುಂಬಿ ಪಕ್ಕದಲ್ಲಿ ಇರುವ ಹೊಲಗಳಿಗೆ ನೀರು ನುಗ್ಗಿದ್ದರಿಂದ ಮುಂಗಾರು ಬೆಳೆಗಳಾದ ತೊಗರಿ, ಹೆಸರು, ಉದ್ದುಬೆಳೆ ಕೊಚ್ಚಿಕೊಂಡು ಹೋಗಿವೆ ಎಂದು ಗಣಾಪುರ ಗ್ರಾಮದ ವಿನೋದ ಚಾಂಗ್ಲೇರ ತಿಳಿಸಿದ್ದಾರೆ.
ಚಂದಾಪುರ ಬಸವ ನಗರಕ್ಕೆ ಹೋಗುವ ದಾರಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಚರಂಡಿ ನೀರು ಉಕ್ಕಿ ಹರಿದ ಪರಿಣಾಮವಾಗಿ 10 ಮನೆಗಳಿಗೆ ನೀರು ಹೊಕ್ಕಿದೆ . ಇದರಿಂದಾಗಿ ಜನರ ಓಡಾಟಕ್ಕೆ ತೀವ್ರ ತೊಂದರೆ ಆಗಿದೆ ಎಂದು ನಿವಾಸಿ ಶಿವನಾಗಯ್ಯ ಸ್ವಾಮಿ, ಪುರಸಭೆ ಮಾಜಿ ಅಧ್ಯಕ್ಷ ರಾಮಶೆಟ್ಟಿ ಪವಾರ ತಿಳಿಸಿದ್ದಾರೆ.ಚಂದಾಪುರ ಆಶ್ರಯ ಕಾಲೋನಿಯ ರಾಜಕುಮಾರ ಸಾಯಪ್ಪ, ವೆಂಕಟೇಶ, ಶ್ರೀನಿವಾಸ ಸಾಯಪ್ಪ, ಮಹಿಬೂಬಖಾನ್, ಇಬ್ರಾಹಿಂ, ಅಜಿಮೋದ್ದೀನ್, ಬಾಬುಮಿಯಾ ಸೇರಿದಂತೆ ಇನ್ನಿತರರ ಮನೆಗಳಿಗೆ ಮಧ್ಯರಾತ್ರಿ ನೀರು ನುಗ್ಗಿರುವುದರಿಂದ ದವಸ ಧಾನ್ಯಗಳಿಗೆ ಹಾನಿಯಾಗಿದೆ. ಮನೆಯಲ್ಲಿ ಒಮ್ಮೆಲೆ ನೀರು ಬಂದಿರುವುದರಿಂದ ಗಾಢ ನಿದ್ರೆಯಲ್ಲಿದ್ದವರು ಎಚ್ಚೆತ್ತುಕೊಂಡು ಹೊರಗೆ ಬಂದು ಕುಳಿತುಕೊಳ್ಳುವಂತಾಗಿತ್ತು. ಸೋಮಲಿಂಗದಳ್ಳಿ ಮತ್ತು ಕಲ್ಲೂರ ಗ್ರಾಮಗಳ ಹತ್ತಿರ ಇರುವ ಸಣ್ಣ ನಾಲೆಗಳು ತುಂಬಿ ಹರಿದಿವೆ. ಶಿವರಾಮಪುರ-ಶಹಾಪುರ ರಾಜ್ಯಹೆದ್ದಾರಿಯ ಶಾದೀಪುರ ಹತ್ತಿರದ ಮುಖ್ಯ ರಸ್ತೆ ಮೇಲೆ ಅಪಾರ ಪ್ರಮಾಣದಲ್ಲಿ ನೀರು ಹರಿದಿರುವುದರಿಂದ ಕುಂಚಾವರಂ, ಭಿಕ್ಕುನಾಯಕ ತಾಂಡಾ, ಜಿಲವರ್ಷಾ ತಾಂಡಾ ವಾಹನಗಳ ಓಡಾಟ ಸ್ಥಗಿತವಾಗಿತ್ತು.
ಕುಂಚಾವರಂ, ಪೋಚಾವರಂ, ಮೊಗದಂಪುರ, ಶಿವರೆಡ್ಡಿಪಳ್ಳಿ, ಲಚಮಾಸಾಗರ, ವೆಂಕಟಾಪುರ, ಸಂಗಾಪುರ ಗಡಿಗ್ರಾಮಗಳಲ್ಲಿ ವ್ಯಾಪಕ ಮಳೆ ಸುರಿದಿದೆ. ಸಂಗಾಪುರ-ಗೋಪುನಾಯಕ ತಾಂಡಾಗಳ ಮಧ್ಯೆ ಇರುವ ಸೇತುವೆ ಮೇಲಿಂದ ನೀರು ಹರಿದ ಪರಿಣಾಮವಾಗಿ ತೆಲಂಗಾಣಕ್ಕೆ ಹೋಗಲು ಪ್ರಯಾಣಿಕರು ಹರಸಾಹಸ ಪಡಬೇಕಾಯಿತು ತಾಲೂಕಿನಲ್ಲಿ ಬಿದ್ದ ಭಾರಿ ಮಳೆಯಿಂದಾಗಿ ನೀರಿಲ್ಲದೇ ಬತ್ತಿ ಹೋಗಿದ್ದ ಸಣ್ಣ ನೀರಾವರಿ ಕೆರೆಗಳಿಗೆ ಜೀವ ಬಂದಂತಾಗಿದೆ.
ತುಮಕುಂಟಾ ಕೆರೆಗೆ 4ಅಡಿ, ಚಿಕ್ಕನಿಂಗದಳ್ಳಿ ಕೆರೆಗೆ 5 ಅಡಿ,ನಾಗಾಇದಲಾಯಿ ಕೆರೆಗೆ 4 ಅಡಿ, ಸಾಲೇಬೀರನಳ್ಳಿ ಕೆರೆಗೆ ಅಡಿ, ಧರ್ಮಸಾಗರ, ಕೊಳ್ಳೂರ, ಚಿಂದಾನೂರ, ಜಿಲವರ್ಷ ಕೆರೆಗಳಿಗೆ ನೀರು ಹರಿದು ಬಂದಿದೆ ಎಂದು ಜಲ ಸಂಪನ್ಮೂಲ ಇಲಾಖೆ ಎಇಇ ಶಿವಶರಣಪ್ಪ ಕೇಶ್ವರ ತಿಳಿಸಿದ್ದಾರೆ. ಚಂದ್ರಂಪಳ್ಳಿ ಜಲಾಶಯಕ್ಕೆ ಒಂದೇ ರಾತ್ರಿ 12 ಅಡಿ ನೀರು ಸಂಗ್ರಹಣೆ ಆಗಿದೆ ಎಂದು ಎಇಇ ಸಿದ್ರಾಮ ತಿಳಿಸಿದ್ದಾರೆ. ಅಲ್ಲದೇ ಜಲಾಶಯ ಬಳಿ ಕಾವಲುಗಾರರಿಗೆ ಎಚ್ಚರಿಕೆಯಿಂದ ಇರಲು ಸೂಚಿಸಿದ್ದಾರೆ. ಕೆಳದಂಡೆ ಮುಲ್ಲಾಮಾರಿ ಜಲಾಶಯಕ್ಕೆ ಒಂದು ಅಡಿ ನೀರು ಹರಿದು ಬಂದಿದೆ ಎಂದು ಎಇಇ ಹಣಮಂತರಾವ ಪೂಜಾರಿ ತಿಳಿಸಿದ್ದಾರೆ.