ಚಿಂಚೋಳಿ: ರಾಜ್ಯದಲ್ಲಿ ಒಂದೆಡೆ ತೀವ್ರ ಬರ, ಇನ್ನೊಂದೆಡೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದರ ಮಧ್ಯದಲ್ಲೂ ರೈತನೊಬ್ಬ ಮೆಣಸಿನಕಾಯಿ ಬೆಳೆದು ಆರ್ಥಿಕವಾಗಿ ಸದೃಢರಾಗಿದ್ದಾರೆ.
ತಾಲೂಕಿನ ತೆಲಂಗಾಣ ರಾಜ್ಯದ ಗಡಿ ಪ್ರದೇಶಕ್ಕೆ ಹೊಂದಿಕೊಂಡಿರುವ ಹಲಕೋಡ ಗ್ರಾಮದ ಯುವಕ ಸಾಬಯ್ಯ ಗುತ್ತೇದಾರ ವೃತ್ತಿಯಲ್ಲಿ ಸಮೀಪದ ಭಾರತಿ ಸಿಮೆಂಟ್ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಪ್ರವೃತ್ತಿಯಲ್ಲಿ ತಮ್ಮ 20 ಎಕರೆ ಜಮೀನಿನಲ್ಲಿ ತೊಗರಿ 8 ಎಕರೆ, ಹತ್ತಿ 10 ಎಕರೆ ಹಾಗೂ ಸೋಲಾಲಿ ಮೆಣಸಿನಕಾಯಿಯನ್ನು ಎರಡು ಎಕರೆಯಲ್ಲಿ ಬೆಳೆಯುತ್ತಿದ್ದಾರೆ.
ಕಳೆದ ಏಪ್ರಿಲ್ನಲ್ಲಿ ಸೋನಾಲಿ ಮೆಣಸಿನಕಾಯಿ ಬೀಜವನ್ನು ತೆಗೆದುಕೊಂಡು ಬಂದು ತಮ್ಮ ತೋಟದಲ್ಲಿ ಹಾಕಿ ಲಾಭ ಪಡೆಯುತ್ತಿದ್ದಾರೆ. ಬೆಳೆದಂತ ಸೋನಾಲಿ ಮೆಣಸಿನಕಾಯಿಯನ್ನು ವಾರದಲ್ಲಿ ಎರಡು ಬಾರಿ ನಿಡಗುಂದಾ ಸಂತೆ, ತೆಲಂಗಾಣ ರಾಜ್ಯದ ಬಶೀರಾಬಾದ್ ಸಂತೆಗೆ ಹೋಗಿ ಮಾರಿ ಬರುತ್ತಿದ್ದಾರೆ.
ಮೆಣಸಿನಕಾಯಿ ಬೆಳೆಯುವಾಗ ನಿಯಮಬದ್ಧವಾಗಿ ಪ್ರತಿಯೊಂದು ಗಿಡಗಳಿಗೂ 1.5 ಮೀಟರ್ ಅಂತರ ಕಾಯ್ದುಕೊಳ್ಳಬೇಕಾಗುತ್ತದೆ. ಅಂದರೆ ಮಾತ್ರ ಅಧಿಕ ಇಳುವರಿ ಪಡೆಯಲು ಸಾಧ್ಯ ಎನ್ನುತ್ತಾರೆ ಸಾಬಯ್ಯ. ಒಂದು ಎಕರೆಗೆ 10 ರಿಂದ 12 ಕ್ವಿಂಟಾಲ್ ಮೆಣಸಿನಕಾಯಿ ಇಳುವರಿ ಬರುತ್ತಿದೆ. ಎರಡನೇ ಬಾರಿಗೆ 15 ರಿಂದ 20 ಕ್ವಿಂಟಲ್ ಇಳುವರಿ ಬರುತ್ತದೆ. ಸೋನಾಲಿ ಮೆಣಸಿನಕಾಯಿ ಸುಮಾರು ಹತ್ತಕ್ಕೂ ಅಧಿಕ ಬಾರಿ ಇಳುವರಿ ಬರುತ್ತದೆ. ಬೀಜ ಹಾಕಿದ ನಂತರ ಸೋನಾಲಿ ಮೆಣಸಿನಕಾಯಿ ತೋಟದಲ್ಲಿ ಸುಮಾರು ನಾಲ್ಕು ಬಾರಿ ಕಳೆ ತೆಗೆಯಲಾಗಿದೆ. ಮೂರು ಬಾರಿ ಎಣ್ಣೆ ಸಿಂಪಡಿಸಲಾಗಿದೆ ಹಾಗೂ ಒಂದು ಬಾರಿ ಡಿಎಪಿ ರಸಗೊಬ್ಬರ ಹಾಕಲಾಗಿದೆ.
ವಾಣಿಜ್ಯ ಬೆಳೆಯಾದ ಹತ್ತಿಯು ಫಲವತ್ತತೆ ಆಧಾರದ ಮೇಲೆ ಐದರಿಂದ ಆರು ಬಾರಿ ಬಿಡಿಸಬಹುದಾಗಿದೆ. ಹತ್ತಿಯೂ ಲಾಭ ತಂದುಕೊಡುವಂತ ನಿರೀಕ್ಷೆ ಇದೆ. ಕಳೆದ ಬಾರಿ ಕೂಡ ಹತ್ತಿ ಬೆಳೆ ಹಾಕಿ ಮೂರು ನಾಲ್ಕು ಬಾರಿ ಮಾತ್ರ ಬಿಡಿಸಿ ಮಾರುಕಟ್ಟೆಗೆ ಕಳಿಸಲಾಗಿದೆ. ಇನ್ನು ತೊಗರಿ ಒಂದು ಎಕರೆಗೆ ನಾಲ್ಕು ಚೀಲದಂತೆ ಫಸಲು ಬಂದರೆ ಸುಮಾರು 40 ಚೀಲ ತೊಗರಿ ಬೆಳೆಯುವ ನಿರೀಕ್ಷೆ ಇಟ್ಟುಕೊಂಡಿದ್ದೇನೆ.
•
ಸಾಬಯ್ಯ ಗುತ್ತೇದಾರ,
ಪ್ರಗತಿಪರ ರೈತ