Advertisement

ಬೆಳ್ಳಿ ಬೆಳಕು ಕಾಲೋನಿಯಲ್ಲಿ ಅಭಿವೃದ್ಧಿ ಕತ್ತಲು

11:12 AM Oct 21, 2019 | Naveen |

ಶಾಮರಾವ ಚಿಂಚೋಳಿ
ಚಿಂಚೋಳಿ:
ಪುರಸಭೆ ವ್ಯಾಪ್ತಿಯ ಚಂದಾಪುರ ನಗರದ ಬೆಳ್ಳಿ ಬೆಳಕು ಕಾಲೋನಿ, ಅಂಬೇಡ್ಕರ್‌ ನಗರ ನಿವಾಸಿಗಳು ಸರಕಾರದಿಂದ ಸಿಗುವ ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದಾರೆ. ಇಲ್ಲಿನ ನಿವಾಸಿಗಳಿಗೆ ಮೂಲಸೌಕರ್ಯ ಒದಗಿಸಿಕೊಡುವಲ್ಲಿ ಪುರಸಭೆ ಸದಸ್ಯರು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಸಾರ್ವಜನಿಕರು ದೂರುತ್ತಿದ್ದಾರೆ.

Advertisement

ಚಂದಾಪುರ ನಗರದ ಬೆಳ್ಳಿ ಬೆಳಕು ಮತ್ತು ಅಂಬೇಡ್ಕರ್‌ ನಗರ ಕಾಲೋನಿಗಳಲ್ಲಿ 300ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿವೆ. ಬೆಳ್ಳಿ ಬೆಳಕು ಕಾಲೋನಿಗಳಲ್ಲಿ ಉತ್ತಮ ರಸ್ತೆಗಳಿಲ್ಲ. ಶುದ್ಧ ನೀರು ಪೂರೈಕೆ ಇಲ್ಲ. ಅಲ್ಲದೇ ನೀರು ಶುದ್ಧೀಕರಣ ಘಟಕಗಳು, ಚರಂಡಿಗಳು ಇಲ್ಲ. ಕೆಲವು ಕಡೆಗಳಲ್ಲಿ ಇದ್ದ ಚರಂಡಿಗಳಲ್ಲಿ ತುಂಬಿದ ಹೊಲಸು ಗಬ್ಬು ನಾರುತ್ತಿದ್ದರೂ ಅದನ್ನು ಶುಚಿಗೊಳಿಸದೇ ಇರುವುದರಿಂದ ಸೊಳ್ಳೆಗಳು ವಿಪರೀತವಾಗಿ ಕಾಣಿಸಿಕೊಳ್ಳುತ್ತಿವೆ.ಪುರಸಭೆದಿಂದ ಫಾಗಿಂಗ್‌ ಮಾಡಿಲ್ಲ. ಹೀಗಾಗಿ ಸೊಳ್ಳೆ ಕಾಟದಿಂದ ಜನರು ತೊಂದರೆ ಪಡುವಂತಾಗಿದೆ.

ಪುರಸಭೆ ವತಿಯಿಂದ ಬೆಳ್ಳಿ ಬೆಳಕು ಕಾಲೋನಿಯಲ್ಲಿ ಮಹಿಳೆಯರಿಗೆ ಮತ್ತು ಪುರುಷರಿಗೋಸ್ಕರ ಕೆಕೆಆರ್‌ಡಿಬಿ ವತಿಯಿಂದ 8 ಲಕ್ಷ ರೂ. ವೆಚ್ಚದಲ್ಲಿ ಶೌಚಾಲಯ ನಿರ್ಮಿಸಲಾಗಿದೆ. ಆದರೆ ಕಳೆದ ಮೂರು ವರ್ಷಗಳಿಂದ ಪೂರ್ಣಗೊಳಿಸಿಲ್ಲ. ಹೀಗಾಗಿ ಮಹಿಳೆಯರಿಗೆ ಬಯಲು ಶೌಚಾಲಯವೇ ಗತಿಯಾಗಿದೆ. ಮುಖ್ಯರಸ್ತೆಗಳು ಹದಗೆಟ್ಟಿವೆ. ಜನರು ಕೆಸರಿನಲ್ಲಿಯೇ ಹಗಲು-ರಾತ್ರಿ ನಡೆದಾಡುವಂತೆ ಆಗಿದೆ. ಕುಡಿಯುವ ನೀರು ಪೂರೈಕೆ ಪೈಪುಗಳು ಚರಂಡಿಯಲ್ಲಿ ಹಾಯ್ದು ಹೋಗಿವೆ. ಚರಂಡಿ ನೀರು ಪೈಪ್‌ನಲ್ಲಿ ಸೇರಿಕೊಳ್ಳುತ್ತಿದೆ. ಇಂತಹ ಅಶುದ್ಧ ನೀರು ಅನಿವಾರ್ಯವಾಗಿ ಕುಡಿಯಬೇಕಾಗಿದೆ.

ಸಾರ್ವಜನಿಕ ನಳಗಳ ಪೈಪ್‌ ಒಡೆದು ವರ್ಷಗಳೇ ಗತಿಸಿವೆ. ಆದರೂ ಹೊಸ ಪೈಪ್‌ ಜೋಡಿಸಿಲ್ಲ. ಅನಾವಶ್ಯಕವಾಗಿ ನೀರು ಸೋರಿಕೆಯಿಂದಾಗಿ ಓಣಿಯಲ್ಲಿ ಜನರಿಗೆ ನೀರು ಸಮರ್ಪಕವಾಗಿ ಸಿಗುತ್ತಿಲ್ಲ ಎಂದು ಮಜೀದ ಕಾಲೋನಿ, ಭವಾನಿ ನಗರ ಮಹಿಳೆಯರು ದೂರುತ್ತಾರೆ. ಬೆಳ್ಳಿ ಬೆಳಕು ಮತ್ತು ಅಂಬೇಡ್ಕರ್‌ ಕಾಲೋನಿಗಳ ಹತ್ತಿರ ಖಾಸಗಿ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆ, ಕಾಲೇಜು ಇರುವುದರಿಂದ ಹದಗೆಟ್ಟಿರುವ ರಸ್ತೆಯಲ್ಲಿ ಚಿಕ್ಕಮಕ್ಕಳು ನಡೆದುಕೊಂಡು ಹೋಗುವಂತ ಪರಿಸ್ಥಿತಿ ಇಲ್ಲಿನದಾಗಿದೆ. ಕೆಲವು ಮುಖ್ಯರಸ್ತೆಗಳಲ್ಲಿ ವಿದ್ಯುತ್‌ ದೀಪಗಳಿಲ್ಲ. ರಾತ್ರಿ ಹೊತ್ತಿನಲ್ಲಿ ವಿಷಜಂತುಗಳ ಭಯ ಹೆಚ್ಚುತ್ತಿದೆ. ಶಾಸಕ ಡಾ| ಅವಿನಾಶ ಜಾಧವ ಚಂದಾಪುರ ನಗರದ ಕಾಲೋನಿಗಳಿಗೆ ಭೇಟಿ ನೀಡಿ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಬಡಾವಣೆ ನಿವಾಸಿ ಬಕ್ಕಪ್ಪ ಬೊಮ್ಮನಳ್ಳಿ ಮನವಿ ಮಾಡಿದ್ದಾರೆ.

ಪುರಸಭೆ ಮುಖ್ಯಾ ಧಿಕಾರಿಗಳು ಬೆಳ್ಳಿ ಬೆಳಕು. ಅಂಬೇಡ್ಕರ್‌ ಕಾಲೋನಿಗಳಿಗೆ ಭೇಟಿ ನೀಡಿ ಪರಿಶೀಲಿಸಿ ಸರಕಾರದಿಂದ ಮೂಲ ಸೌಕರ್ಯ ಒದಗಿಸಿಕೊಡಬೇಕು ಎಂದು ದಲಿತ ಮುಖಂಡ ಜಗನ್ನಾಥ ಅಣವಾರಕರ ಒತ್ತಾಯಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next