Advertisement

ಚಿಂಚೋಳಿಯಲ್ಲಿ ಗೆದ್ದ ಪಕ್ಷಕ್ಕೆ ರಾಜ್ಯದಲ್ಲಿ ಅಧಿಕಾರ!

11:55 PM Apr 25, 2019 | Sriram |

ಕಲಬುರಗಿ: ರಾಜ್ಯದ ಮೈತ್ರಿ ಸರ್ಕಾರಕ್ಕೆ ಅಗ್ನಿಪರೀಕ್ಷೆ ಎನಿಸಿರುವ ಚಿಂಚೋಳಿ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆ ಹಲವು ಕಾರಣಗಳಿಂದ ಮಹತ್ವ ಪಡೆದುಕೊಂಡಿದೆ. ಕಾಂಗ್ರೆಸ್‌ ಪಕ್ಷ ತನ್ನ ಸ್ಥಾನ ಉಳಿಸಿಕೊಳ್ಳಲು ಕಸರತ್ತು ನಡೆಸಿದ್ದರೆ, ಕಮಲ ಪಡೆ ಗೆದ್ದು ಬೀಗಲು ಸಿದ್ಧತೆ ಮಾಡಿಕೊಂಡಿದೆ. ಅಚ್ಚರಿಯ ವಿಷಯ ವೆಂದರೆ ಈ ಕ್ಷೇತ್ರದಲ್ಲಿ ಗೆದ್ದ ಪಕ್ಷವೇ ಅಧಿಕಾರಕ್ಕೆ ಬರುತ್ತದೆ.

Advertisement

ಕ್ಷೇತ್ರದ ಪ್ರತಿನಿಧಿಯಾಗಿದ್ದ ಡಾಣ ಉಮೇಶ ಜಾಧವ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಕಲಬುರಗಿ ಲೋಕಸಭೆಗೆ ಬಿಜೆಪಿ ವತಿಯಿಂದ ಸ್ಪರ್ಧಿಸಿದ್ದರಿಂದ ಈ ಕ್ಷೇತ್ರಕ್ಕೆ ಉಪಚುನಾವಣೆ ನಡೆಯುತ್ತಿದೆ. ಈ ಕ್ಷೇತ್ರದಲ್ಲಿ ಗೆದ್ದ ಪಕ್ಷವೇ ರಾಜ್ಯದ ಆಡಳಿತ ಚುಕ್ಕಾಣಿ ಹಿಡಿಯುತ್ತದೆ ಎನ್ನುವ ನಂಬಿಕೆ ಈ ಭಾಗದಲ್ಲಿದೆ. ಒಂದು ವೇಳೆ ಬಿಜೆಪಿ ಅಭ್ಯರ್ಥಿ ಗೆದ್ದರೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಗೆ ಪೂರಕವಾಗಬಹುದೇ? ಕಾಂಗ್ರೆಸ್‌ ಗೆದ್ದರೆ ಮೈತ್ರಿ ಸರ್ಕಾರ ಮುಂದುವರಿಯುವುದೇ ಎನ್ನುವ ಪ್ರಶ್ನೆ ಗರಿಗೆದರಿದೆ. ಲೋಕಸಭೆ ಚುನಾವಣೆ ಮುಗಿಯುತ್ತಿದ್ದಂತೆ ರಾಜ್ಯದಲ್ಲಿ ನಡೆಯುತ್ತಿರುವ ಕ್ಷಿಪ್ರ ರಾಜಕೀಯ ಬೆಳವಣಿಗೆ ಅವಲೋಕಿಸಿದರೆ ಚಿಂಚೋಳಿ ಉಪಚುನಾವಣೆ ಫಲಿತಾಂಶವೇ ಮುನ್ನುಡಿ ಆಗಬಹುದು ಎನ್ನಲಾಗುತ್ತಿದೆ.

ಲೋಕಸಭೆ ಚುನಾವಣಾ ಫಲಿತಾಂಶದೊಂದಿಗೆ ಚಿಂಚೋಳಿ ಫಲಿತಾಂಶ ಹೊರ ಬರಲಿದ್ದು, ಫಲಿತಾಂಶ ಬಂದ ದಿನವೇ ಮೈತ್ರಿ ಸರ್ಕಾರದ ಭವಿಷ್ಯ ನಿರ್ಧಾರವಾಗುತ್ತದೆ ಎಂದು ಬಲವಾಗಿ ಹೇಳಲಾಗುತ್ತಿದೆ. ಇವೆಲ್ಲ ಬೆಳವಣಿಗೆ ಗಮನಿಸಿದರೆ ಚಿಂಚೋಳಿ ಫಲಿತಾಂಶ ಎಲ್ಲ ಬೆಳವಣಿಗೆಗೂ ಸ್ಪಷ್ಟ ಕಾರಣವಾಗಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.

ಇತಿಹಾಸ ಹೇಗಿದೆ?: ಚಿಂಚೋಳಿ ವಿಧಾನಸಭೆ ಕ್ಷೇತ್ರ ಅಸ್ತಿತ್ವಕ್ಕೆ ಬಂದ 1957ರಿಂದ 2018ರವರೆಗೆ ಚಿಂಚೋಳಿಯಲ್ಲಿ ಗೆದ್ದ ಶಾಸಕರ ಪಕ್ಷವೇ ರಾಜ್ಯದ ಆಡಳಿತ ಚುಕ್ಕಾಣಿ ಹಿಡಿದಿದೆ. ಇದು ಪವಾಡವೋ ಕಾಕತಾಳೀಯವೋ ಗೊತ್ತಿಲ್ಲ. 62 ವರ್ಷಗಳಿಂದ ನಡೆದುಕೊಂಡು ಬಂದಿರುವ ಈ ಅಚ್ಚರಿ ಮೇ 19ರಂದು ನಡೆಯುತ್ತಿರುವ ಉಪ ಚುನಾವಣೆಯಲ್ಲಿ ಮುಂದುವರಿಯುತ್ತದೆಯೇ ಎನ್ನುವ ಪ್ರಶ್ನೆ ಕಾಡುತ್ತಿದೆ.

1957ರಲ್ಲಿ ಕಾಂಗ್ರೆಸ್‌ನ ವೀರೇಂದ್ರ ಪಾಟೀಲ ಗೆದ್ದಿದ್ದರು. ಆಗ ಕಾಂಗ್ರೆಸ್‌ನ ಬಿ.ಡಿ. ಜತ್ತಿ ಸರ್ಕಾರ ಆಡಳಿತ ನಡೆಸಿತ್ತು. 1962 ಹಾಗೂ 1967ರ ವಿಧಾನಸಭೆ ಚುನಾವಣೆಯಲ್ಲಿ ವೀರೇಂದ್ರ ಪಾಟೀಲ ಸತತವಾಗಿ ಹ್ಯಾಟ್ರಿಕ್‌ ಗೆಲುವು ಸಾಧಿಸಿದ್ದರು. ಆಗಲೂ ಕಾಂಗ್ರೆಸ್‌ ಸರ್ಕಾರವೇ ಆಡಳಿತದಲ್ಲಿತ್ತು. 1972 ಹಾಗೂ 1977ರಲ್ಲಿ ಚಿಂಚೋಳಿ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ದೇವೇಂದ್ರಪ್ಪ ಘಾಳೆಪ್ಪ ಗೆಲುವು ಸಾಧಿಸಿದ್ದರು. ಈ ಸಂದರ್ಭದಲ್ಲಿ ದೇವರಾಜು ಅರಸು ಸರ್ಕಾರವಿತ್ತು. ಮುಂದೆ 1983ರ ಚುನಾವಣೆಯಲ್ಲಿ ದೇವೇಂದ್ರಪ್ಪ ಘಾಳೆಪ್ಪ ಪುನರಾಯ್ಕೆಯಾಗಿದ್ದರು. ಆ ಸಮಯದಲ್ಲಿ ಆರ್‌.ಗುಂಡೂರಾವ್‌ ಸರ್ಕಾರವಿತ್ತು. 1989ರಲ್ಲಿ ವಿರೇಂದ್ರ ಪಾಟೀಲ ಮತ್ತೆ ಆಯ್ಕೆ ಯಾದರು. ಆಗ ಅವರೇ ಸಿಎಂ ಯಾದರು. 1994ರಲ್ಲಿ ವೈಜನಾಥ ಪಾಟೀಲ ಜನತಾ ದಳದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ಆಗ ಜನತಾದಳದ ಸರ್ಕಾರ ರಚನೆಯಾಗಿ ದೇವೇಗೌಡ
ಸಿಎಂ ಯಾಗಿದ್ದರು. 1999ರಲ್ಲಿ ಕಾಂಗ್ರೆಸ್‌ನ ಕೈಲಾಸನಾಥ ಪಾಟೀಲ ಆಯ್ಕೆ ಯಾದ ಸಂದರ್ಭದಲ್ಲಿ ಎಸ್‌.ಎಂ. ಕೃಷ್ಣ ನೇತೃತ್ವದಲ್ಲಿ ಕಾಂಗ್ರೆಸ್‌ ಸರ್ಕಾರ ರಚನೆಯಾಗಿತ್ತು.

Advertisement

2004ರಲ್ಲಿ ವೈಜನಾಥ ಪಾಟೀಲ ಜೆಡಿಎಸ್‌ ಶಾಸಕರಾದರೆ ಧರ್ಮ ಸಿಂಗ್‌ ನೇತೃತ್ವದಲ್ಲಿ ಜೆಡಿಎಸ್‌ ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರ, ತದನಂತರ ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್‌ ಬಿಜೆಪಿ ಸಮ್ಮಿಶ್ರ ಸರ್ಕಾರ ರಚನೆಯಾಗಿತ್ತು. 2008ರಲ್ಲಿ ಬಿಜೆಪಿಯಿಂದ ಸುನೀಲ ವಲ್ಯಾಪುರೆ ಮೀಸಲು ಕ್ಷೇತ್ರವಾಗಿ ಮಾರ್ಪಟ್ಟ ಚಿಂಚೋಳಿಯಿಂದ ಚುನಾಯಿತರಾದರು. ಆಗ ಯಡಿಯೂರಪ್ಪ ಮುಖ್ಯಮಂತ್ರಿಯಾದರು. 2013ರಲ್ಲಿ ಡಾಣ ಉಮೇಶ ಜಾಧವ ಕಾಂಗ್ರೆಸ್‌ ಪಕ್ಷದಿಂದ ಚುನಾಯಿತರಾದರು. ಆಗ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಅಸ್ತಿತ್ವಕ್ಕೆ ಬಂತು. 2018ರಲ್ಲಿ ಡಾಣ ಜಾಧವ ಪುನರಾಯ್ಕೆಯಾದರು. ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್‌ ಜೆಡಿಎಸ್‌ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ.

ಇತಿಹಾಸ ಮರುಕಳಿಸಬಹುದೇ?
1957ರಿಂದ 2018ರ ಚುನಾವಣೆ ಹಾಗೂ ಅಸ್ತಿತ್ವಕ್ಕೆ ಬಂದ ಸರ್ಕಾರಗಳನ್ನು ಅವಲೋಕಿಸಿದರೆ ಚಿಂಚೋಳಿಯಲ್ಲಿ ಗೆದ್ದ ಶಾಸಕರ ಪಕ್ಷವೇ ಆಡಳಿತಕ್ಕೆ ಬಂದಿವೆ. ಈಗ 2019ರಲ್ಲಿ ನಡೆಯುತ್ತಿರುವ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುತ್ತೋ, ಕಾಂಗ್ರೆಸ್‌ ಗೆಲ್ಲುತ್ತೋ ಎನ್ನುವುದರ ಜತೆಗೆ ಗೆದ್ದ ಪಕ್ಷದವರ ಸರ್ಕಾರ ಆಡಳಿತ ನಡೆದು ಇತಿಹಾಸ ಮರುಕಳಿಸಬಹುದೇ ಎಂಬುದನ್ನು ಅರಿಯಲು ತಿಂಗಳವರೆಗೂ ಕಾಯಬೇಕು.
ಏನೇ ಆದರೂ ಚಿಂಚೋಳಿ ಉಪಚುನಾವಣೆ ಫಲಿತಾಂಶ ಇತಿಹಾಸ ಸೃಷ್ಟಿಸುವುದು ಸ್ಪಷ್ಟ.

-ಹಣಮಂತರಾವ ಭೈರಾಮಡಗಿ

Advertisement

Udayavani is now on Telegram. Click here to join our channel and stay updated with the latest news.

Next