Advertisement

ಚಿಂಚೋಳಿ ಎಪಿಎಂಸಿ ಕಾಂಗ್ರೆಸ್‌ ಮಡಿಲು

07:33 AM Feb 08, 2019 | |

ಚಿಂಚೋಳಿ: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಗುರುವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದ ಬೆಂಬಲಿತ ನಿರ್ದೇಶಕರಾದ ರೇವಣಸಿದ್ದಪ್ಪ ಪೂಜಾರಿ ಅಧ್ಯಕ್ಷರಾಗಿ ಮತ್ತು ಚಂದ್ರು ಪವಾರ ಉಪಾಧ್ಯಕ್ಷರಾಗಿ ಗೆಲುವು ಸಾಧಿಸಿದ್ದಾರೆ.

Advertisement

ಪಟ್ಟಣದ ಎಪಿಎಂಸಿ ಕಚೇರಿಯಲ್ಲಿ ಗುರುವಾರ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಮಲ್ಲಿಕಾರ್ಜುನ ರೇವಣಸಿದ್ದಪ್ಪ ರುದನೂರ(ಬಿಜೆಪಿ) ಮತ್ತು ರೇವಣಸಿದ್ದಪ್ಪ ಮಲ್ಲಪ್ಪ ಪೂಜಾರಿ ಅಣವಾರ (ಕಾಂಗ್ರೆಸ್‌) ತಲಾ ಒಂದೊಂದು ನಾಮಪತ್ರ ಸಲ್ಲಿಸಿದ್ದರು. 

ಉಪಾಧ್ಯಕ್ಷ ಸ್ಥಾನಕ್ಕೆ ಅಣ್ಣಾರಾವ ಶಂಕರೆಪ್ಪ ಪೆದ್ದಿ ಕೋಡ್ಲಿ(ಬಿಜೆಪಿ) ಚಂದ್ರು ಚಿಂಗೂಶಾದೀಪುರ(ಕಾಂಗ್ರೆಸ್‌) ನಾಮಪತ್ರ ಸಲ್ಲಿಸಿದ್ದರು. ನಂತರ ನಡೆದ ಚುನಾವಣೆಯಲ್ಲಿ ಮಲ್ಲಿಕಾರ್ಜುನ ರುದನೂರ 7 ಮತ ಹಾಗೂ ರೇವಣಸಿದ್ದಪ್ಪ ಪೂಜಾರಿ 8 ಮತ ಪಡೆದರು. ಕೇವಲ ಒಂದು ಮತಗಳ ಅಂತರದಿಂದ ಮಲ್ಲಿಕಾರ್ಜುನ ರುದನೂರ ಸೋಲು ಅನುಭವಿಸಿದರು.

ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಣ್ಣಾರಾವ ಶಂಕರೆಪ್ಪ ಪೆದ್ದಿ ಕೋಡ್ಲಿ 6 ಮತ ಮತ್ತು ಚಂದ್ರು ಚೆಂಗೂ ಶಾದೀಪುರ 9 ಮತ ಪಡೆದರು. ಆದರೆ ಬಿಜೆಪಿ ಬೆಂಬಲಿತ ನಿರ್ದೇಶಕ ಅಣ್ಣಾರಾವ ಪೆದ್ದಿ ಕೇವಲ 3 ಮತಗಳ ಅಂತರದಿಂದ ಸೋಲು ಅನುಭವಿಸಿದರು. ಎಪಿಎಂಸಿ ಒಟ್ಟು 13 ನಿರ್ದೇಶಕರು ಹಾಗೂ 3 ನಾಮನಿರ್ದೇಶಿತ ಸದಸ್ಯರು ಒಳಗೊಂಡಂತೆ ಒಟ್ಟು 16 ನಿರ್ದೇಶಕರನ್ನು ಹೊಂದಿದೆ. ನಿರ್ದೇಶಕ ರಮೇಶ ಯಾಕಾಪುರ ಅವರು ಕೋರ್‌ಂ ಭರ್ತಿ ಆಗುವ ಸಂದರ್ಭದಲ್ಲಿ ಹಾಜರಾದರು. ಆದರೆ ಮತದಾನ ಮಾಡದೇ ಚುನಾವಣೆಯಿಂದ ದೂರ ಉಳಿದರು.

ಚುನಾವಣಾಧಿಕಾರಿ, ತಹಶೀಲ್ದಾರ್‌ ಪಂಡಿತ ಬಿರಾದಾರ ಚುನಾವಣಾ ಫಲಿತಾಂಶ ಘೋಷಿಸಿದರು. ಕಾರ್ಯದರ್ಶಿ ಸವಿತಾ ಗೋನಿ, ಸಿಬ್ಬಂದಿ ಖಾಲೀದ್‌ ಅಹೆಮದ್‌ ಮತ್ತು ರಶೀದಾ ಹಾಜರಿದ್ದರು.

Advertisement

ಕಾಂಗ್ರೆಸ್‌ ಕಾರ್ಯಕರ್ತರ ವಿಜಯೋತ್ಸವ: ಎಪಿಎಂಸಿ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರಿಂದ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಅನೀಲಕುಮಾರ ಜಮಾದಾರ ಮತ್ತು ಜಿಪಂ ಮಾಜಿ ಅಧ್ಯಕ್ಷ ಭೀಮರಾವ ತೇಗಲತಿಪ್ಪಿ ನೇತೃತ್ವದಲ್ಲಿ ವಿಜಯೋತ್ಸವ ಆಚರಿಸಲಾಯಿತು. ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರು ಮಾಜಿ ಸಚಿವ ಡಾ| ಶರಣಪ್ರಕಾಶ ಪಾಟೀಲ ಮತ್ತು ಜಿಲ್ಲಾ
ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ ಹೆಸರು ಬಳಸಿಕೊಂಡು ಜಯ ಘೋಷಣೆ ಕೂಗಿದರು. ಆದರೆ ಚಿಂಚೋಳಿ ಶಾಸಕ ಡಾ| ಉಮೇಶ ಜಾಧವ ಅವರ ಹೆಸರನ್ನು ಘೋಷಣೆಯಲ್ಲಿ ಬಳಸಲಿಲ್ಲ.  ಈ ಕುರಿತು ಎಪಿಎಂಸಿ ಮಾಜಿ ಅಧ್ಯಕ್ಷ ಚಂದ್ರಶೇಖರ ಕಂಬದ ಮತ್ತು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಅನೀಲಕುಮಾರ ಜಮಾದಾರ ಅವರನ್ನು ಪತ್ರಕರ್ತರು ಪ್ರಶ್ನಿಸಿದಾಗ ಜಾಧವ ಅವರು ಕಾಂಗ್ರೆಸ್‌ ಬಿಟ್ಟು ಬಿಜೆಪಿಗೆ ಸೇರಲಿದ್ದಾರೆ ಎಂಬ ವದಂತಿ ಹರಡಿದೆ. ಆದ್ದರಿಂದ ಅವರ ಹೆಸರು ಕೂಗಲಿಲ್ಲ ಎಂದು ತಿಳಿಸಿದರು.

ಕಾಂಗ್ರೆಸ್‌ ಮುಖಂಡರಾದ ಕೆ.ಎ. ಬಾರಿ, ಸೈಯ್ಯದ್‌ ಮಹೆಮೂದ್‌ ಪಟೇಲ್‌, ಚಂದ್ರಶೇಖರ ಸುಲ್ತಾನಪುರ, ಅಣವೀರಯ್ಯ ಸ್ವಾಮಿ, ಅಶೋಕ ಚವ್ಹಾಣ, ತಯಾಬ್‌ ಅಲಿ, ಭೀಮರಾವ ರಾಠೊಡ, ಸಂಗಯ್ಯ ಸ್ವಾಮಿ, ಸಂತೋಷ ಗುತ್ತೆದಾರ ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next