Advertisement

ಕನ್ನಡದ ತೇರು ಎಳೆಯುತ್ತಿದೆ ಚಿಂಚಣಿ ಮಠ

04:53 PM Oct 31, 2022 | Team Udayavani |

ಚಿಕ್ಕೋಡಿ: ಧಾರ್ಮಿಕ ಕಾರ್ಯಕ್ರಮದ ಜೊತೆಗೆ ಕನ್ನಡತನದ ದಾಸೋಹ ಉಣಬಡಿಸುತ್ತಿರುವ ಗಡಿ ಕನ್ನಡಿಗರ ಬಳಗ, ಚಿಂಚಣಿ ಅಲ್ಲಮಪ್ರಭು ಸಿದ್ದಸಂಸ್ಥಾನಮಠ ನಿತ್ಯ ಗಡಿ ಭಾಗದಲ್ಲಿ ಕನ್ನಡ ಕೈಂಕರ್ಯವನ್ನು ಮುಂದುವರೆಸಿಕೊಂಡು ಬಂದಿದೆ. ನ.2 ರಂದು ಶ್ರೀಮಠದಲ್ಲಿ ನಡೆಯುವ ಕನ್ನಡ ರಾಜ್ಯೋತ್ಸವ ಅದ್ದೂರಿಯಾಗಿ ನಡೆಯಲಿದೆ.

Advertisement

ಚಿಕ್ಕೋಡಿ ನಗರದಿಂದ 6 ಕಿ.ಮೀ ದೂರದಲ್ಲಿ ಇರುವ ಚಿಂಚಣಿ ಎಂಬ ಪುಟ್ಟ ಗ್ರಾಮದಲ್ಲಿನ ಅಲ್ಲಮಪ್ರಭು ಸಿದ್ದಸಂಸ್ಥಾನ ಮಠವು ಕನ್ನಡದ ಕಾಯಕದ ಮೂಲಕ ಇಡೀ ನಾಡಿನಾದ್ಯಂತ ಚಿರಪರಿಚಿತವಾಗಿದೆ. ಇದರ ಪೀಠಾಧಿಪತಿಗಳಾದ ಅಲ್ಲಮಪ್ರಭು ಸ್ವಾಮೀಜಿ ಅವರು ಕನ್ನಡದ ಸ್ವಾಮೀಜಿ ಎಂದೇ ಖ್ಯಾತಿ ಹೊಂದಿದ್ದಾರೆ. ಕನ್ನಡ ನುಡಿ, ಗಡಿ, ಸಂಸ್ಕೃತಿ ಸಂರಕ್ಷಣೆ ಮತ್ತು ಸಂವರ್ಧನೆಯ ದೀಕ್ಷೆ ತೊಟ್ಟು ಕನ್ನಡದ ಅಸ್ಮಿತೆಯನ್ನು ಗಟ್ಟಿಗೊಳಿಸುವ ಕೈಂಕರ್ಯದಲ್ಲಿ ಅವರು ಕ್ರಿಯಾಶೀಲರಾಗಿದ್ದಾರೆ. ಪ್ರತಿ ವರ್ಷ ಕನ್ನಡ ರಾಜ್ಯೋತ್ಸವನ್ನು ಅರ್ಥಪೂರ್ಣವಾಗಿ ಆಚರಿಸುವ ಮೂಲಕ ಕನ್ನಡ ಜಾಗೃತಿಯುಂಟು ಮಾಡುತ್ತಿದ್ದಾರೆ. ಕನ್ನಡ ನಿತ್ಯೋತ್ಸವ ಆಗಬೇಕು ಎಂಬ ಕನಸನ್ನು ನನಸು ಮಾಡಿದ ಮಠವಿದು.

ಶ್ರೀಮಠದಿಂದ 45ಕ್ಕೂ ಹೆಚ್ಚು ಗ್ರಂಥಗಳ ಪ್ರಕಟಣೆ: ಅಲ್ಲಮಪ್ರಭು ಜನಕಲ್ಯಾಣ ಸಂಸ್ಥೆಯ ಕನ್ನಡ ಜಾಗೃತಿ ಪುಸ್ತಕ ಮಾಲೆಯ ಮೂಲಕ ಇದುವರೆಗೆ ಆಧುನಿಕ ಕರ್ನಾಟಕದ ಆತಂಕಗಳು, ಕನ್ನಡತನ ಮತು ಭಾರತೀಯತೆ, ಮಹಾಜನ ವರದಿ ಒಂದು ಅವಲೋಕನ, ಕನ್ನಡದ ಕೋಟೆ ಕೆಎಲ್‌ಇ ಸಂಪ್ರದಾಯದ ಇತಿಹಾಸ, ರಂಗಭೂಮಿ-ಕನ್ನಡದ ಸಂವೇಧನೆ, ನಮ್ಮ ನಾಡು, ನುಡಿ ಮತ್ತು ಗಡಿ ಕನ್ನಡದ ಕಟ್ಟೋಣ, ಕರ್ನಾಟಕ ಏಕೀಕರಣ ಚಳವಳಿ, ಕನ್ನಡ-ಕನ್ನಡಿಗ, ಕರ್ನಾಟಕ ಏಕೀಕರಣ ಚಳವಳಿ ಮತ್ತು ಮಹಿಳೆ, ಮಹಾದಾಯಿ ನೀರಿಗಾಗಿ ಹೋರಾಟ ಮತ್ತು ಕನ್ನಡಕ್ಕೆ ಕೈ ಎತ್ತು…ಮೊದಲಾದ 45 ಕ್ಕೂ ಹೆಚ್ಚು ಮೌಲಿಕ ಗ್ರಂಥಗಳನ್ನು ಪ್ರಕಟಿಸಲಾಗಿದೆ. ಮರಾಠಿಯ ಹಲವು ಕೃತಿಗಳನ್ನು ಕನ್ನಡಕ್ಕೆ ಅನುವಾದಿಸುವ ಮೂಲಕ ಕನ್ನಡ-ಮರಾಠಿ ಸಾಹಿತ್ಯ ಮತ್ತು ಸಂಸ್ಕೃತಿಕ ಬಾಂಧವ್ಯವನ್ನು ಹೆಚ್ಚಿಸಿದ್ದಾರೆ.

ಸ್ವಾಮೀಜಿಗಳು ಕನ್ನಡ ಪರವಾದ ಪುರಾತನ ದಾಖಲೆಗಳನ್ನು ಸಂಗ್ರಹಿಸುವಲ್ಲಿ ವಿಶೇಷ ಆಸಕ್ತಿ ಹೊಂದಿದ್ದಾರೆ. ಕನ್ನಡದ ಇತಿಹಾಸ ತಿಳಿಸುವ ಅಪರೂಪದ ದಾಖಲೆಗಳು ಅವರ ಬಳಿ ಇವೆ. ದೇಶ-ವಿದೇಶ ಕರೆನ್ಸಿಗಳ ಸಂಗ್ರಹವೂ ಇವೆ. ಬೋನ್ಸಾಯ್‌ ಸಸ್ಯ ಬೆಳೆಸುವ ಹವ್ಯಾಸ ಹೊಂದಿದ್ದಾರೆ.

ಕನ್ನಡದ ತೇರು: ಜಾತ್ರೆ-ಉತ್ಸವಗಳಲ್ಲಿ ರಥೋತ್ಸವ ನಡೆಸುವುದು ಸಾಮಾನ್ಯ. ಆದರೆ ಈ ಮಠದಲ್ಲಿ ಸ್ವಾಮೀಜಿ ಅವರು ಕನ್ನಡ ತೇರು ನಿರ್ಮಿಸಿ ಕಳೆದೊಂದು ದಶಕದಿಂದ ಸಿರಿಗನ್ನಡದ ತೇರು ಎಳೆಯುತ್ತಿದ್ದಾರೆ. ಅಪ್ಪಟ ಕನ್ನಡದ ರಥವಾಗಿರುವ ಇದರಲ್ಲಿ 32 ಸಾಹಿತಿಗಳ ಚಿತ್ರಗಳು ಮತ್ತು 16 ಕನ್ನಡದ ಘೋಷಣೆಗಳನ್ನು ಕೆತ್ತಲಾಗಿದೆ. ತೇರಿನ ಎಂಟು ಭಾಗಗಳಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಭಾವಚಿತ್ರ ಹಾಕಲಾಗಿದೆ. ಇದರ ನಡುವೆ ತಾಯಿ ಭವನೇಶ್ವರಿ ಮೂರ್ತಿಯನ್ನು ಇರಿಸಿ ಪ್ರತಿ ವರ್ಷ ಯುಗಾದಿ ಹಬ್ಬದಂದು ತೇರನ್ನು ಎಳೆಯಲಾಗುತ್ತದೆ.

Advertisement

ಕಳೆದ 20 ವರ್ಷದಿಂದ ಪ್ರತಿ ವರ್ಷ ಮಠದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡುತ್ತಾ ಬರಲಾಗಿದೆ. ನಾಡಿನ ಖ್ಯಾತ ಸಾಹಿತಿಗಳು ಮತ್ತು ಕನ್ನಡದ ವಿದ್ವಾಂಸರನ್ನು ಕರೆಯಿಸಿ ಶ್ರೀಮಠವು ಮಾಡುವ ಕನ್ನಡದ ಕಾಯಕವನ್ನು ಪರಿಚಯ ಮಾಡಲಾಗುತ್ತದೆ. ಗಡಿ ಭಾಗದಲ್ಲಿ ಕನ್ನಡ ನಾಡು, ನುಡಿ, ಸಂಸ್ಕೃತಿ ಜಾಗೃತಿ ಉಂಟು ಮಾಡಲು ಅಲ್ಲಮಪ್ರಭು ಸಿದ್ದಸಂಸ್ಥಾನ ಮಠ ಕೆಲಸ ಮಾಡುತ್ತಿದೆ.  -ಶ್ರೀ ಅಲ್ಲಪ್ರಭು ಸ್ವಾಮೀಜಿ, ಸಿದ್ದಸಂಸ್ಥಾನಮಠ ಚಿಂಚಣಿ

-ಮಹಾದೇವ ಪೂಜೇರಿ

Advertisement

Udayavani is now on Telegram. Click here to join our channel and stay updated with the latest news.

Next