ಬೀಜಿಂಗ್ : ಕಾಶ್ಮೀರ ಪ್ರಶ್ನೆಯನ್ನು ಭಾರತ ಮತ್ತು ಪಾಕಿಸ್ಥಾನ ಪರಸ್ಪರ ದ್ವಿಪಕ್ಷೀಯ ಮಾತುಕತೆಯ ಮೂಲಕವೇ ಬಗೆಹರಿಸಿಕೊಳ್ಳಬೇಕು ಎಂದು ಪಾಕಿಸ್ಥಾನದ ಸರ್ವ ಋತು ಮಿತ್ರನಾಗಿರುವ ಚೀನ ಪಾಕಿಗೆ ಬುದ್ಧಿವಾದ ಹೇಳಿದೆ.
ಕಾಶ್ಮೀರ ಕುರಿತ ವಿಶ್ವಸಂಸ್ಥೆಯ ಠರಾವನ್ನು ಅನುಷ್ಠಾನಿಸುವಂತೆ ಒತ್ತಾಯಿಸುವ ಇಸ್ಲಾಮಿಕ್ ರಾಷ್ಟ್ರಗಳ ಸಮೂಹದ ಕರೆಯನ್ನು ಚೀನ ತಿರಸ್ಕರಿಸಿದೆ.
ಪಾಕಿಸ್ಥಾನದ ಕೋರಿಕೆಯ ಮೇರೆಗೆ ಇಸ್ಲಾಮಿಕ್ ಸಹಕಾರ ಸಂಘಟನೆಯು ಈಚೆಗೆ ಕಾಶ್ಮೀರ ಪ್ರಶ್ನೆ ಕುರಿತಾದ ಠರಾವನ್ನು ವಿಶ್ವಸಂಸ್ಥೆ ಅನುಷ್ಠಾನಿಸಬೇಕು ಎಂದು ಒತ್ತಾಯಿಸಿತ್ತು.
ಇಸ್ಲಾಮಿಕ್ ಸಹಕಾರ ಸಂಘಟನೆಯ ಈ ಕರೆಗೆ ಪ್ರತಿಕ್ರಿಯಿಸಿರುವ ಚೀನದ ವಿದೇಶ ಸಚಿವಾಲಯದ ವಕ್ತಾರ ಲೂ ಕಾಂಗ್ ಅವರು “ಕಾಶ್ಮೀರ ಪ್ರಶ್ನೆಯನ್ನು ಭಾರತ ಮತ್ತು ಪಾಕಿಸ್ಥಾನ ಪರಸ್ಪರ ದ್ವಿಪಕ್ಷೀಯ ಮಾತುಕತೆಯ ಮೂಲಕವೇ ಬಗೆ ಹರಿಸಿಕೊಳ್ಳಬೇಕು’ ಎಂದು ಹೇಳಿದರು.
“ಚೀನವು ಕಾಶ್ಮೀರ ಪ್ರಶ್ನೆ ಕುರಿತಾದ ವರದಿಗಳನ್ನು ಗಮನಿಸಿದೆ; ಕಾಶ್ಮೀರ ವಿಷಯದಲ್ಲಿ ಭಾರತ – ಪಾಕಿಸ್ಥಾನ ದ್ವಿಪಕ್ಷೀಯ ಮಾತುಕತೆಯ ಮೂಲಕವೇ ಪರಿಹಾರ ಕಂಡುಕೊಳ್ಳಬೇಕು ಎನ್ನುವ ಚೀನದ ನಿಲುವ ಸ್ಫಟಿಕದಷ್ಟು ಸ್ಪಷ್ಟವಿದೆ’ ಎಂದು ಲೂ ಕಾಂಗ್ ಹೇಳಿದರು.