ನ್ಯೂಯಾರ್ಕ್: ಜಗದಗಲ ಕೋವಿಡ್ ಬಿತ್ತಿದ್ದು ಸಾಲದು ಎಂಬಂತೆ ಚೀನವು ಈಗ ಅಮೆರಿಕ, ಕೆನಡಾದಲ್ಲಿ “ರಹಸ್ಯ ಬೀಜ’ ಬಿತ್ತುವ ಪಿತೂರಿ ಆರಂಭಿಸಿದೆ. ಚೀನದಿಂದ ಅನುಮಾನಾಸ್ಪದ ಬೀಜಗಳ ಪ್ಯಾಕೆಟ್‌ಗಳು ಅಮೆರಿಕ, ಕೆನಡಾದ ಹಲವರ ಮನೆಗಳ ಅಂಚೆ ಡಬ್ಬಿಗಳಿಗೆ ಬಂದು ಬೀಳುತ್ತಿವೆ. ಪ್ಯಾಕೆಟ್ ಮೇಲಿನ ಚೀನ ವಿಳಾಸ ಕಂಡು ಅಲ್ಲಿನ ಜನತೆ ಗಾಬರಿಗೊಂಡಿದ್ದಾರೆ.
ಅಮೆರಿಕ- ಕೆನಡಾದ ಜನ ಆರ್ಡರ್ ಮಾಡದೇ ಇದ್ದರೂ ಚೀನದಿಂದ ರಾಶಿ ರಾಶಿ ಬೀಜ ಪಾಕೆಟ್‌ಗಳು ಬಂದು ಬೀಳುತ್ತಿವೆ. ಎಲ್ಲ ಪ್ಯಾಕೆಟ್‌ಗಳ ಮೇಲೂ ಚೀನ, ಹಾಂಕಾಂಗ್ ವಿಳಾಸವಿದ್ದು, ಚೀನ ಪೋಸ್ಟ್‌ನ ಸೀಲ್ ಒತ್ತಲಾಗಿದೆ. ಪಾರ್ಸೆಲ್ ಮೇಲೆ “ಜುವೆಲರಿ’ ಎಂದು ಬರೆಯಲಾಗಿದ್ದು, ಜನ ಆಸೆಯಿಂದ ಬಿಚ್ಚಿ ನೋಡಿ ಬೆಚ್ಚಿ ಬೀಳುತ್ತಿದ್ದಾರೆ.
ಅಮೆರಿಕ ಕಟ್ಟೆಚ್ಚರ: ಅಮೆರಿಕದ 8 ರಾಜ್ಯಗಳಲ್ಲಿ ಚೀನದ ಬೀಜಾಸುರ ಅಟ್ಟಹಾಸ ಮೆರೆಯುತ್ತಿದ್ದಾನೆ. ಕೆಲವು ಅಕ್ಕಿ, ಕಪ್ಪು ಧಾನ್ಯ, ಸೂರ್ಯಕಾಂತಿ ಬೀಜಗಳನ್ನು ಹೋಲುತ್ತಿವೆ. ಮತ್ತೆ ಕೆಲವು ಬೆಣಚು ಕಲ್ಲುಗಳಂತಿವೆ. ಅನುಮಾನಾಸ್ಪದ ಬೀಜದ ಪ್ಯಾಕೆಟ್‌ಗಳನ್ನು ಯಾರೂ ಒಡೆಯಬಾರದು. ಬಿತ್ತುವ ಧೈರ್ಯ ತೋರಬಾರದು. ಮನೆಯ ಹೊರಗೆ ಪ್ಲಾಸ್ಟಿಕ್ ಚೀಲದಲ್ಲಿ ಪ್ರತ್ಯೇಕವಾಗಿಟ್ಟು, ಇಲಾಖೆಗೆ ಕರೆ ಮಾಡುವಂತೆ ಅಮೆರಿಕ ಕೃಷಿ ಇಲಾಖೆ (ಯುಎಸ್‌ಡಿಎ) ಜನರಲ್ಲಿ ಮನವಿ ಮಾಡಿದೆ. ಸಮಗ್ರ ಪರಿಶೀಲನೆ ಕೈಗೆತ್ತಿಕೊಂಡಿದೆ. ಚೀನದ ವಿಳಾಸವಿರುವ ಅಂಚೆ ಪಾರ್ಸೆಲ್‌ಗಳನ್ನು ಸ್ವೀಕರಿಸಬಾರದು ಎಂದು ಅಂಚೆ ಇಲಾಖೆಗೆ ಟ್ರಂಪ್ ಸರಕಾರ ಆದೇಶಿಸಿದ್ದರೂ ಉಪಟಳ ಕಡಿಮೆಯಾಗಿಲ್ಲ.
ಕೆನಡಾಕ್ಕೂ ತಲೆಬಿಸಿ: ಕೆನಡಾದ ಒಂಟಾರಿಯೊ ಮಹಾ ನಗರದ ಸುತ್ತ ಮುತ್ತಲೂ ಚೀನದ ರಹಸ್ಯ ಬೀಜಗಳ ಪಾರ್ಸೆಲ್‌ಗಳು ಪ್ರತ್ಯಕ್ಷವಾಗಿವೆ. ಈ ಪ್ಯಾಕೆಟ್‌ಗಳನ್ನು ತೆರೆಯಬಾರದು, ಬಿತ್ತಲೂಬಾರದು ಎಂದು ಕೆನಡಾದ ಆಹಾರ ತಪಾಸಣ ಸಂಸ್ಥೆ ಸೂಚಿಸಿದೆ. ಬೀಜಗಳು ರಹಸ್ಯ ಆಕ್ರಮಣಕಾರಿ ಪ್ರಭೇದಗಳನ್ನು ಒಳಗೊಂಡಿರಬಹುದು. ಕೃಷಿ, ಪರಿಸರಗಳಿಗೆ ಹಾನಿ ತಂದೊಡ್ಡಬಹುದು. ವಿಷಕೀಟಗಳನ್ನು ಆಕರ್ಷಿಸಬಹುದು ಎಂದು ಎಚ್ಚರಿಸಿದೆ.
ಪ್ಯಾಕೆಟ್‌ಗಳ ಮೇಲಿನ ವಿಳಾಸಗಳು ಸುಳ್ಳು. ಚೀನದ ಅಂಚೆ ಇಲಾಖೆ ಎಲ್ಲ ಪಾರ್ಸೆಲ್‌ಗಳನ್ನೂ ತನಿಖೆಗೊಳಪಡಿಸಿಯೇ ಕಳುಹಿಸುತ್ತದೆ. ಅನುಮಾನಾಸ್ಪದ ಬೀಜಗಳ ಯಾವ ಪ್ಯಾಕೆಟ್‌ಗಳನ್ನೂ ಚೀನದಿಂದ ಕಳುಹಿಸಿಲ್ಲ. ಪ್ಯಾಕೆಟ್ ಗಳನ್ನು ಚೀನಕ್ಕೆ ಮರಳಿಸಿದರೆ ಪರೀಕ್ಷೆ ಗೊಳಪಡಿಸಿ, ವಾಸ್ತವ ತಿಳಿಸುತ್ತೇವೆ ಎಂದು ಚೀನ ತಿಳಿಸಿದೆ.
ಎಲ್ಲಿಂದ ಬಂದಿವೆ?
ಕೆನಡಾದ ವಿವಿಧೆಡೆ ತಲುಪಿರುವ ರಹಸ್ಯ ಬೀಜದ ಪ್ಯಾಕೆಟ್‌ಗಳ ಮೇಲೆ ಬಹುತೇಕ ಶೆನೆlನ್, ಬೀಜಿಂಗ್ ಮತ್ತಿತರ ನಗರಗಳ ವಿಳಾಸಗಳಿವೆ. ತನ್ನ ಜತೆಗೆ ತೈವಾನ್ ಹೆಸರನ್ನೂ ಕೆಡಿಸಲು ಅದರ ರಾಜಧಾನಿ “ತೈಪೆ’ ಮೂಲಕ ಬೀಜಗಳ ಪಾರ್ಸೆಲ್ ಕಳುಹಿಸುತ್ತಿದೆ.