Advertisement

ಅಪಹರಣಕ್ಕೊಳಗಾದ ಅರುಣಾಚಲದ ಹುಡುಗನನ್ನು ಹಸ್ತಾಂತರಿಸುತ್ತೇವೆ ಎಂದ ಚೀನಾ ಸೇನೆ

06:19 PM Jan 23, 2022 | Team Udayavani |

ಇಟಾನಗರ : ಅರುಣಾಚಲ ಪ್ರದೇಶದ ಗುಡ್ಡಗಾಡು ಪ್ರದೇಶದಲ್ಲಿ ಅಪಹರಣಕ್ಕೊಳಗಾಗಿದ್ದಾನೆ ಎನ್ನಲಾದ 17 ವರ್ಷದ ಬಾಲಕನನ್ನು ಚೀನಾ ಲಿಬರೇಷನ್ ಆರ್ಮಿಯ ಸೈನಿಕರು ಪತ್ತೆ ಮಾಡಿರುವುದಾಗಿ ತಿಳಿಸಿದ್ದು, ಆತನನ್ನು ಭಾರತಕ್ಕೆ ಹಸ್ತಾಂತರಿಸಲು ಸೂಕ್ತ ವಿಧಾನವನ್ನು ಅನುಸರಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

Advertisement

ಪಿಎಲ್‌ಎ ಬಾಲಕನ ಗುರುತನ್ನು ದೃಢೀಕರಿಸಿಲ್ಲ ಮತ್ತು ಚೀನಾದ ಪಡೆಗಳಿಂದ ಕರೆದೊಯ್ದಿರುವ ವ್ಯಕ್ತಿ ಮಿರಾಮ್ ಟ್ಯಾರೋನ್ ಎಂದು ನಂಬಲಾಗಿದೆ ಎಂದು ಭದ್ರತಾ ಮೂಲಗಳು ತಿಳಿಸಿವೆ.

ಬಾಲಕನ ಅಪಹರಣವಾಗಿದೆ ಎಂಬ ವಿಚಾರ ರಾಷ್ಟ್ರಮಟ್ಟದಲ್ಲಿ ಭಾರಿ ಚರ್ಚೆಗೆ ಕಾರಣವಾಗಿತ್ತು.ಘಟನೆ ಬೆಳಕಿಗೆ ಬಂದ ನಂತರ ಭಾರತೀಯ ಸೇನೆಯು ಬಾಲಕನನ್ನು ಪತ್ತೆಹಚ್ಚಲು ಪಿಎಲ್‌ಎಯಿಂದ ನೆರವು ಕೋರಿತ್ತು.

ಹುಡುಗ ಪಿಎಲ್‌ಎ ವಶದಲ್ಲಿದ್ದಾನೆ ಮತ್ತು ಶೀಘ್ರದಲ್ಲೇ ಹಸ್ತಾಂತರಿಸಲಾಗುವುದು ಎಂದು ಭಾರತೀಯ ಸೇನೆಯಿಂದ ದೃಢೀಕರಣವನ್ನು ಪಡೆದುಕೊಂಡಿದ್ದೇನೆ ಎಂದು ಅರುಣಾಚಲ ಪ್ರದೇಶದ ಸಂಸತ್ ಸದಸ್ಯ ತಾಪಿರ್ ಗಾವೊ ಅವರು ಪಿಟಿಐಗೆ ತಿಳಿಸಿದ್ದಾರೆ.

ಪಿಎಲ್‌ಎ ಭಾನುವಾರ ಭಾರತೀಯ ಸೇನೆಗೆ ತಮ್ಮ ಪ್ರದೇಶದಲ್ಲಿ “ಹುಡುಗ ಪತ್ತೆಯಾಗಿದ್ದಾನೆ ” ಮತ್ತು ಶೀಘ್ರದಲ್ಲೇ ಅವನನ್ನು ಹಸ್ತಾಂತರಿಸುವುದಾಗಿ ತಿಳಿಸಿದೆ.

Advertisement

ಜನವರಿ 19 ರಂದು, ಅಪ್ಪರ್ ಸಿಯಾಂಗ್ ಜಿಲ್ಲೆಯ ಸಿಯುಂಗ್ಲಾ ಪ್ರದೇಶದ (ಬಿಶಿಂಗ್ ಗ್ರಾಮ) ಲುಂಗ್ಟಾ ಜೋರ್ ಪ್ರದೇಶದಿಂದ ಟ್ಯಾರೊನ್ ಅವರನ್ನು ಪಿಎಲ್‌ಎ ಅಪಹರಿಸಿದೆ ಎಂದು ಗಾವೊ ಹೇಳಿಕೊಂಡಿದ್ದರು.

ಟ್ಯಾರನ್‌ನ ಸ್ನೇಹಿತ ಜಾನಿ ಯಾಯಿಂಗ್ ಪಿಎಲ್‌ಎಯಿಂದ ಅಪಹರಣದ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಇಬ್ಬರೂ ಜಿಡೋ ಗ್ರಾಮಕ್ಕೆ ಸೇರಿದ ಸ್ಥಳೀಯ ಬೇಟೆಗಾರರು. ಅರುಣಾಚಲ ಪ್ರದೇಶದ ತ್ಸಾಂಗ್ಪೋ ನದಿ ಭಾರತವನ್ನು ಪ್ರವೇಶಿಸುವ ಸ್ಥಳದ ಬಳಿ ಈ ಘಟನೆ ನಡೆದಿದೆ.

ಜನವರಿ 20 ರಂದು, ಚೀನಾದ ವಿದೇಶಾಂಗ ಸಚಿವಾಲಯವು ಘಟನೆಯ ಬಗ್ಗೆ ತಿಳಿದಿಲ್ಲ ಎಂದು ಹೇಳಿತ್ತು, ಆದರೆ ಸೇನೆ ಗಡಿಗಳನ್ನು ನಿಯಂತ್ರಿಸುತ್ತದೆ ಮತ್ತು “ಅಕ್ರಮ ಪ್ರವೇಶ ಮತ್ತು ನಿರ್ಗಮನ ಚಟುವಟಿಕೆಗಳನ್ನು” ಭೇದಿಸುತ್ತದೆ ಎಂದು ಹೇಳಿತ್ತು. ಸೆಪ್ಟೆಂಬರ್ 2020 ರಲ್ಲಿ, ಪಿ ಎಲ್ ಎ ಅರುಣಾಚಲ ಪ್ರದೇಶದ ಅಪ್ಪರ್ ಸುಬಾನ್ಸಿರಿ ಜಿಲ್ಲೆಯಿಂದ ಐದು ಯುವಕರನ್ನು ಅಪಹರಿಸಿತ್ತು. ಸುಮಾರು ಒಂದು ವಾರದ ನಂತರ ಯುವಕರನ್ನು ಬಿಡುಗಡೆ ಮಾಡಿತ್ತು.

ಏಪ್ರಿಲ್ 2020 ರಿಂದ ಲಡಾಖ್‌ನಲ್ಲಿ ಭಾರತೀಯ ಸೇನೆಯು ಪಿಎಲ್‌ಎಯೊಂದಿಗೆ ಸಂಘರ್ಷಮಯ ಸ್ಥಿತಿಯಲ್ಲಿರುವ ವೇಳೆಯಲ್ಲೇ ಇತ್ತೀಚಿನ ಅಪಹರಣ ಘಟನೆ ನಡೆದಿದೆ.

ಭಾರತವು ಚೀನಾದೊಂದಿಗೆ ಲಡಾಖ್‌ನಿಂದ ಅರುಣಾಚಲ ಪ್ರದೇಶದವರೆಗೆ 3,400 ಕಿಮೀ ಉದ್ದದ ನೈಜ ನಿಯಂತ್ರಣ ರೇಖೆಯನ್ನು (ಎಲ್‌ಎಸಿ) ಹಂಚಿಕೊಂಡಿದೆ. ತ್ಸಾಂಗ್ಪೋ ನದಿಯನ್ನು ಅರುಣಾಚಲ ಪ್ರದೇಶದಲ್ಲಿ ಸಿಯಾಂಗ್ ಮತ್ತು ಅಸ್ಸಾಂನಲ್ಲಿ ಬ್ರಹ್ಮಪುತ್ರ ಎಂದು ಕರೆಯಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next