ಬ್ರಸೆಲ್ಸ್ : ಚೀನದ ಒನ್‌ಬೆಲ್ಟ್ ಒನ್ ರೋಡ್ (ಓಬಿಓಆರ್) ಯೋಜನೆಯು ಪಾಕಿಸ್ಥಾನ ಸಹಿತ ಹಲವು ದೇಶಗಳಿಗೆ ಎಂದೂ ತೀರಿಸಲಾಗದ ಸಾಲದ ಕುಣಿಕೆಯಾಗಲಿದ್ದು, ಆ ದೇಶಗಳನ್ನು ಅದು ದೀವಾಳಿತನದ ಅಂಚಿಗೆ ದೂಡಲಿದೆ ಎಂದು ಐರೋಪ್ಯ ಅರ್ಥಶಾಸ್ತ್ರಜ್ಞರು ಮತ್ತು ಪರಿಣತರು ಎಚ್ಚರಿಸಿದ್ದಾರೆ.
ಚೀನದ ಬೀಜಿಂಗ್‌ನಲ್ಲಿ ಓಬಿಓಆರ್ ಯೋಜನೆ ಕುರಿತ ಬೃಹತ್ ಸಮಾವೇಶ ನಡೆದ ಒಂದು ತಿಂಗಳ ತರುವಾಯ ಈ ಯೋಜನೆಯನ್ನು ಆಮೂಲಾಗ್ರವಾಗಿ ಅಧ್ಯಯನ ಮಾಡಿರುವ ಯುರೋಪ್‌ನ ಅರ್ಥಶಾಸ್ತ್ರಜ್ಞರು ಮತ್ತು ಪರಿಣತರು ಅತ್ಯಂತ ಕಳವಳಕಾರಿಯಾಗಿರುವ ಈ ಆಭಿಪ್ರಾಯಕ್ಕೆ ಬಂದಿದ್ದಾರೆ.
ಚೀನದ ಓಬಿಓಆರ್ ಯೋಜನೆಯಲ್ಲಿ ಚೀನ-ಪಾಕಿಸ್ತಾನ ಇಕಾನಮಿಕ್ ಕಾರಿಡಾರ್ (ಸಿಪಿಇಸಿ) ಯೋಜನೆಯು ಅಂತರ್ಗತವಾಗಿದ್ದು ಇದು ಪಾಕ್ ಆಕ್ರಮಿತ ಕಾಶ್ಮೀರದ ಮೂಲಕ ಸಾಗುತ್ತದೆ. ಅಂತೆಯೇ ಭಾರತ ತನಗೆ ಸೇರಬೇಕಿರುವ ಈ ಪ್ರದೇಶದಿಂದ ಸಾಗುವ ಯೋಜನೆಯನ್ನು ಪ್ರಾದೇಶಿಕ ಸಾರ್ವಭೌಮತೆಯ ನೆಲೆಯಲ್ಲಿ ತೀವ್ರವಾಗಿ ವಿರೋಧಿಸಿದೆ.
ಸಿಪಿಇಸಿ ಯೋಜನೆಯು ಚೀನದ ಮಹತ್ವಾಕಾಂಕ್ಷೆಯ ಬೆಲ್ಟ್ ಆ್ಯಂಡ್ ರೋಡ್ ಯೋಜನೆಯ ಪ್ರಧಾನ ಭಾಗವಾಗಿದ್ದು ಇದು ಏಶ್ಯ, ಯುರೋಪ್ ಮತ್ತು ಆಫ್ರಿಕವನ್ನು ರಸ್ತೆ, ರೈಲು ಮತ್ತು ಬಂದರುಗಳ ಮೂಲಕ ಜೋಡಿಸುವ ಉದ್ದೇಶ ಹೊಂದಿದೆ.
ಯುರೋಪಿನ ಅರ್ಥ ಶಾಸ್ತ್ರಜ್ಞರು ಮತ್ತು ಪರಿಣತರ ಪ್ರಕಾರ ಚೀನವು ಸಿಪಿಇಸಿ ಯಂತಹ ಓಬಿಓಆರ್ ಯೋಜನೆಯಡಿ ತಾನು ಒದಗಿಸುವ ಬಂಡವಾಳಕ್ಕೆ ಶೇ.16ರ ಗರಿಷ್ಠ ಬಡ್ಡಿಯನ್ನು ವಿಧಿಸುತ್ತದೆ. ಚಕ್ರಬಡ್ಡಿಯಲ್ಲಿ ಲೆಕ್ಕ ಹಾಕಲಾಗುವ ಈ ಸಾಲವು ಕ್ಷಿಪ್ರಗತಿಯಲ್ಲಿ ಬೃಹತ್ ಮೊತ್ತದ ಸಾಲವಾಗಿ ಪರಿಣಮಿಸುವುದರಿಂದ ಅದನ್ನು ತೀರಿಸುವುದು ಅಷ್ಟು ಸುಲಭವಲ್ಲ.
ಇದರಿಂದಾಗಿ ಪಾಕಿಸ್ಥಾನ, ಶ್ರೀಲಂಕಾ, ಬಾಂಗ್ಲಾದೇಶ ಮತ್ತು ನೇಪಾಲ ಸಾಲದ ಉರುಳಿಗೆ ಸಿಲುಕಿಕೊಳ್ಳುತ್ತವೆ. ಈ ದೇಶಗಳ ಸಕಲ ಸಂಪನ್ಮೂಲಗಳ ಮೇಲೆ ನಿಯಂತ್ರಣ ಹೊಂದ ಬಯಸುವ ಚೀನವು ಆ ಮೂಲಕ ಈ ದೇಶಗಳ ರಿಮೋಟ್ ಕಂಟ್ರೋಲನ್ನು ತನ್ನ ಕೈಯಲ್ಲಿ ಹೊಂದಿರುತ್ತದೆ ಎಂದು ಅರ್ಥಶಾಸ್ತ್ರಜ್ಞರು ಎಚ್ಚರಿಸಿದ್ದಾರೆ.