ಜಾಗತಿಕ ಅಶಾಂತಿಗೆ ಕಾರಣವಾಗಬಲ್ಲ ದೇಶಗಳ ಪಟ್ಟಿಯಲ್ಲಿ ಚೀನ ಮೇಲಿನ ಸಾಲಿನಲ್ಲಿದೆ ಎಂಬುದು ಜಗಜ್ಜಾಹೀರಾಗಿರುವ ವಿಚಾರ. ಅಮೆರಿಕವನ್ನು ಮೀರಿಸಿ, ತಾನೇ ದೊಡ್ಡಣ್ಣನಾಗಬೇಕು ಎಂಬ ಛಲದಿಂದ ಚೀನ, ತೃತೀಯ ಜಗತ್ತಿನ ದೇಶಗಳನ್ನು ಹಣದ ಪ್ರಭಾವದಿಂದ ತನ್ನ ಕಡೆ ಸೆಳೆದುಕೊಳ್ಳಲು ಪ್ರಯತ್ನಿಸುತ್ತಿದೆ. ಕೆಲವು ದೇಶಗಳು ಚೀನದ ಟ್ರ್ಯಾಪ್‌ಗೆ ಬಿದ್ದಿದ್ದರೆ, ಇನ್ನು ಕೆಲವು ದೇಶಗಳು ಅದರಿಂದ ಹೊರಗೆ ಬಂದಿವೆ.
ಜಾಗತಿಕವಾಗಿ ದೊಡ್ಡಣ್ಣನಾಗಲು ಚೀನ ಆರಿಸಿಕೊಂಡಿರುವ ಮಾರ್ಗಗಳು ಎರಡು. ಒಂದು ಹಣ, ಮಗದೊಂದು ಮಿಲಿಟರಿ ಶಕ್ತಿ. ಈ ಮೊದಲೇ ಹೇಳಿದಂತೆ, ತೃತೀಯ ಜಗತ್ತಿನ ದೇಶಗಳು ಮತ್ತು ಬಡ ದೇಶಗಳಿಗೆ ಸಾಲದ ಆಮಿಷ ಕೊಟ್ಟು ಅವುಗಳ ಮೇಲೆ ಹಿಡಿತ ಸಾಧಿಸುತ್ತಿದೆ. ಈ ಮೂಲಕ ಹಣಕಾಸಿನ ನೆರವಿಗಾಗಿ ಅಮೆರಿಕದತ್ತ ನೋಡುತ್ತಿದ್ದ ದೇಶಗಳು, ಈಗ ಚೀನದತ್ತ ನೋಡಬೇಕು ಎಂಬ ನಿಲುವನ್ನು ಈ ಮೂಲಕ ಪ್ರದರ್ಶಿಸಿದೆ.
ಇನ್ನೊಂದು ಮಿಲಿಟರಿ ಶಕ್ತಿ. ಕಳೆದ ಕೆಲವು ವರ್ಷಗಳ ದಾಖಲೆಗಳನ್ನು ನೋಡುತ್ತಾ ಹೋದರೆ, ಚೀನ ದಿನದಿಂದ ದಿನಕ್ಕೆ ತನ್ನ ಮಿಲಿಟರಿ ವೆಚ್ಚವನ್ನು ಹಿಗ್ಗಿಸಿಕೊಳ್ಳುತ್ತಲೇ ಹೋಗುತ್ತಿದೆ. ಒಂದು ದಿನ ತಾನು, ವಾರ್ಷಿಕವಾಗಿ ಅಮೆರಿಕದ ಸರಿಸಮನಾಗಿ ನಿಲ್ಲಬೇಕು ಎಂಬ ಲೆಕ್ಕಾಚಾರದಲ್ಲೇ ಅದು ಓಡುತ್ತಿದೆ. ಅಂದರೆ, ಚೀನ ಕಳೆದ 27 ವರ್ಷಗಳಿಂದಲೂ ರಕ್ಷಣಾ ಬಜೆಟ್ ಅನ್ನು ಏರಿಸಿಕೊಂಡು ಬರುತ್ತಲೇ ಇದೆ. ಆದರೆ 2012ರಿಂದ ಇಲ್ಲಿಯವರೆಗೆ ಈ ಪ್ರಮಾಣ ಇನ್ನೂ ಹೆಚ್ಚಾಗಿದೆ. ಈ ಅವಧಿಯಲ್ಲಿ 148 ಬಿಲಿಯನ್ ಅಮೆರಿಕನ್ ಡಾಲರ್‌ನಷ್ಟು ವೆಚ್ಚ ಮಾಡಿದೆ. ಅಂದರೆ, ಇದು ಶೇ.100ರಷ್ಟು ಹೆಚ್ಚಾಗಿದೆ.
ಸದ್ಯ ಇಡೀ ಜಗತ್ತಿನಲ್ಲಿ ರಕ್ಷಣೆಗಾಗಿ ಹೆಚ್ಚು ಹಣ ಮೀಸಲಿಡುತ್ತಿರುವುದು ಅಮೆರಿಕ. ಇದು ಜಾಗತಿಕ ವೆಚ್ಚದ ಶೇ.37.9ರಷ್ಟಾಗಿದೆ. 2021ರ ಅಂಕಿ ಅಂಶಗಳ ಪ್ರಕಾರ, ವಾರ್ಷಿಕವಾಗಿ 801 ಬಿಲಿಯನ್ ಡಾಲರ್ ಹಣ ವೆಚ್ಚ ಮಾಡುತ್ತಿದೆ. ಇನ್ನು ಚೀನ ಶೇ.13.9ರಷ್ಟು ವೆಚ್ಚ ಮಾಡುತ್ತಿದ್ದು, ಇದರ ಗಾತ್ರ 293 ಬಿಲಿಯನ್ ಡಾಲರ್‌ಗೆ ಮುಟ್ಟಿದೆ. ಮೂರನೇ ಸ್ಥಾನದಲ್ಲಿ ಭಾರತವಿದ್ದು, ಶೇ.3.6ರಷ್ಟನ್ನು ವೆಚ್ಚ ಮಾಡುತ್ತಿದೆ. ಇದು 76.6 ಬಿಲಿಯನ್ ಡಾಲರ್‌ಗೆ ಮುಟ್ಟಿದೆ.
ಈ ಅಂಕಿ ಅಂಶಗಳ ಲೆಕ್ಕಾಚಾರದಲ್ಲಿ ಅಮೆರಿಕಕ್ಕೆ ಸ್ಪರ್ಧೆ ನೀಡುವ ಲೆಕ್ಕಾಚಾರದಲ್ಲಿ ಚೀನ ರಕ್ಷಣಾ ವೆಚ್ಚ ಏರಿಸಿಕೊಂಡು ಹೋಗುತ್ತಿದೆ. ರವಿವಾರ ಮಂಡನೆಯಾದ ಬಜೆಟ್‌ನಲ್ಲಿ ತನ್ನ ಜಿಡಿಪಿಯ ಶೇ.7.2ರಷ್ಟು ಹೆಚ್ಚು ವೆಚ್ಚ ತೋರಿಸಿದೆ. ಈ ಹಣದಿಂದ ನೌಕಾಪಡೆಯನ್ನು ಸದೃಢಗೊಳಿಸಿಕೊಳ್ಳುತ್ತಿದೆ.
ಚೀನದ ರಕ್ಷಣಾ ವೆಚ್ಚದ ಹಿಂದೆ ಅಮೆರಿಕ, ಭಾರತವೇ ಟಾರ್ಗೆಟ್ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಈಗ ಅಮೆರಿಕವು ಚೀನ ನೆರೆಯ ದೇಶವಾಗಿರುವ ತೈವಾನ್ ಬೆನ್ನಿಗೆ ನಿಂತಿದ್ದು ಇದು ಡ್ರ್ಯಾಗನ್ ದೇಶಕ್ಕೆ ಸಿಟ್ಟು ತರಿಸಿದೆ. ಹೀಗಾಗಿಯೇ ನೌಕಾಪಡೆಯ ಆಧುನೀಕರಣಕ್ಕೆ ಹೆಚ್ಚು ವೆಚ್ಚ ಮಾಡುತ್ತಿದೆ. ಅಲ್ಲದೆ ತೈವಾನ್ ಮೇಲೆ ದಾಳಿ ನಡೆಸಿದಾಗ, ಅಮೆರಿಕವೇನಾದರೂ ಅದರ ನೆರವಿಗೆ ಬಂದರೆ ಯಶಸ್ವಿಯಾಗಿ ಎದುರಿಸಲು ಈ ಪರಿಯಲ್ಲಿ ವೆಚ್ಚ ಮಾಡುತ್ತಿದೆ ಎಂಬ ವಿಶ್ಲೇಷಣೆಗಳಿವೆ.
ಏನೇ ಆಗಲಿ, ಚೀನದ ಮಿಲಿಟರಿ ವೆಚ್ಚದ ಹಿಂದೆ ಯುದ್ದೋನ್ಮಾದದ ಬಯಕೆಗಳಿವೆ ಎಂಬುದು ಭಾರತೀಯರಿಗೂ ಗೊತ್ತಿರುವ ವಿಚಾರ. ಗಡಿ ವಿಚಾರದಲ್ಲಿ ಅದರ ನಡವಳಿಕೆಯೇ ಹಾಗಿದೆ. ಅಲ್ಲದೆ, ಅಮೆರಿಕ ಮತ್ತು ಚೀನದ ನಡುವಿನ ಸಂಭಾವ್ಯ ತಿಕ್ಕಾಟವನ್ನು ತಪ್ಪಿಸುವ ಮತ್ತು ಜಾಗತಿಕ ಶಾಂತಿಯನ್ನು ಕಾಪಾಡಿಕೊಳ್ಳುವ ಹೊಣೆಗಾರಿಕೆ ವಿಶ್ವಸಂಸ್ಥೆ ಮೇಲಿದೆ. ಈ ನಿಟ್ಟಿನಲ್ಲಿ ಅದು ಕಾರ್ಯನಿರ್ವಹಿಸಬೇಕಾಗಿದೆ. ಅಲ್ಲದೆ, ದಕ್ಷಿಣ ಏಷ್ಯಾದಲ್ಲಿ ಪ್ರಾಬಲ್ಯಕ್ಕೆ ಯತ್ನಿಸುತ್ತಿರುವ ಚೀನದ ನಡವಳಿಕೆ ಮೇಲೂ ನಿಯಂತ್ರಣ ಹೇರುವ ಅಗತ್ಯ ಇದೆ.