Advertisement

S. Jaishankar; ಚೀನ ಕುತಂತ್ರಗಳ ನಿರ್ಲಕ್ಷ್ಯ ಸಲ್ಲದು

11:34 PM Apr 02, 2024 | Team Udayavani |

ಅರುಣಾಚಲ ಪ್ರದೇಶದ ವಿಷಯವಾಗಿ ಚೀನ ತನ್ನ ಹಳೆಯ ವರಾತವನ್ನು ಮತ್ತೆ ಶುರುವಿಟ್ಟುಕೊಂಡಿದೆ. ಅರುಣಾಚಲ ಪ್ರದೇಶದ ಮೇಲೆ ಹಿಡಿತ ಸಾಧಿಸಲು ಚೀನ ಈ ಹಿಂದಿನಿಂದಲೂ ನಿರಂತರವಾಗಿ ಪ್ರಯತ್ನಿಸುತ್ತಲೇ ಬಂದಿದ್ದು, ಭಾರತ ಸೂಕ್ತ ಪ್ರತ್ಯುತ್ತರ ನೀಡುವ ಮೂಲಕ ಚೀನದ ಈ ಮೊಂಡುವಾದವನ್ನು ಮತ್ತು ಅದರ ವಿಸ್ತರಣವಾದವನ್ನು ವಿಶ್ವ ಸಮುದಾಯದ ಮುಂದೆ ತೆರೆದಿಡುತ್ತಲೇ ಬಂದಿತ್ತು. ಅರುಣಾಚಲ ಪ್ರದೇಶದ ವಿಷಯವನ್ನು ಅಂತಾರಾಷ್ಟ್ರೀಯ ವಿವಾದವನ್ನಾಗಿಸುವ ಚೀನದ ಕುತಂತ್ರಗಳಿಗೆ ಭಾರತ ತಕ್ಕ ಉತ್ತರ ನೀಡಿ ಚೀನವನ್ನು ಜಾಗತಿಕ ಮಟ್ಟದಲ್ಲಿ ಬೆತ್ತಲಾಗಿಸುತ್ತಲೇ ಬಂದಿದೆ.

Advertisement

ಇವೆಲ್ಲದರ ಹೊರತಾಗಿಯೂ ಚೀನ ಅರುಣಾಚಲ ಪ್ರದೇಶವನ್ನು ದಕ್ಷಿಣ ಟಿಬೆಟ್‌ ಎಂದು ಪರಿಗಣಿಸಿ, ಅದಕ್ಕೆ ಜಂಗ್ನಾನ್‌ ಎಂದು ನಾಮಕರಣ ಮಾಡಿದೆ. ಅರುಣಾಚಲ ಪ್ರದೇಶವನ್ನು ಭಾರತ ಕಾನೂನುಬಾಹಿರವಾಗಿ ಆಕ್ರಮಿಸಿಕೊಂಡಿದೆ ಎಂದು ಚೀನದ ವಿದೇಶಾಂಗ ಸಚಿವಾಲಯದ ವಕ್ತಾರ ಲಿನ್‌ ಜಿಯಾನ್‌ ಕೆಲವು ದಿನಗಳ ಹಿಂದೆಯಷ್ಟೇ ಆರೋಪಿಸಿದ್ದರು. ಅರುಣಾಚಲ ಪ್ರದೇಶದ ಮೇಲಣ ಚೀನದ ಹಕ್ಕು ಪ್ರತಿಪಾದನೆಯನ್ನು ಹಾಸ್ಯಾಸ್ಪದ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌. ಜೈಶಂಕರ್‌ ಪ್ರತಿಕ್ರಿಯಿಸಿದ್ದರಲ್ಲದೆ ಅರುಣಾಚಲ ಪ್ರದೇಶ ಭಾರತದ ಅವಿಭಾಜ್ಯ ಅಂಗ ಎಂದು ಸಾರಿದ್ದರು.

ಭಾರತದ ತಿರುಗೇಟಿನ ಹೊರತಾಗಿಯೂ ಚೀನ ಮತ್ತೆ ಅರುಣಾಚಲ ಪ್ರದೇಶವನ್ನು ಮುಂದಿಟ್ಟು ಭಾರತದೊಂದಿಗೆ ಸಂಘರ್ಷಕ್ಕೆ ಮುಂದಾಗಿದೆ. ಅರುಣಾಚಲ ಪ್ರದೇಶದ ಪೂರ್ವ ಭಾಗದ 30ಕ್ಕೂ ಅಧಿಕ ಸ್ಥಳಗಳಿಗೆ ತನ್ನದೇ ಆದ ಹೆಸರುಗಳನ್ನಿಟ್ಟು 4ನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಹಿಂದೆ 2017ರಲ್ಲಿ 6, 2021ರಲ್ಲಿ 15 ಮತ್ತು 2021ರಲ್ಲಿ 11 ಸ್ಥಳಗಳಿಗೆ ಚೀನ ಮರುನಾಮಕರಣ ಮಾಡಿ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಈ ಎಲ್ಲ ಸಂದರ್ಭದಲ್ಲಿಯೂ ಭಾರತ ತೀಕ್ಷ್ಣ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿತ್ತಲ್ಲದೆ ಚೀನದ ಈ ದುಸ್ಸಾಹಸವನ್ನು ಖಂಡಿಸಿತ್ತು.

ಮೂರು ವಾರಗಳ ಹಿಂದೆ ಸೆಲಾ ಸುರಂಗ ಮಾರ್ಗದ ಉದ್ಘಾಟನೆಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಿದ್ದನ್ನೂ ಚೀನ ಟೀಕಿಸುವ ಮೂಲಕ ದಾಷ್ಟತನ ಮೆರೆದಿತ್ತು. ಚೀನದ ಈ ಎಲ್ಲ ಆಕ್ಷೇಪ, ವಿರೋಧಗಳನ್ನು ಲೆಕ್ಕಿಸದ ಭಾರತವು ಗಡಿಯಲ್ಲಿ ಮೂಲಸೌಕರ್ಯಗಳ ವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುತ್ತಲೇ ಬಂದಿದೆ. ಗಡಿ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭದ್ರತಾ ಪಡೆಗಳ ನಿಯೋಜನೆ ಮಾಡುವ ಮೂಲಕ ಭಾರತದ ಭದ್ರತೆಗೆ ಚೀನ ಅಪಾಯ ತಂದೊಡ್ಡದಂತೆ ಕಟ್ಟೆಚ್ಚರ ವಹಿಸಿದೆ. ಆದರೆ ಚೀನ ಮಾತ್ರ ನಿರಂತರವಾಗಿ ಅರುಣಾಚಲ ಪ್ರದೇಶದ ಮೇಲೆ ಹಕ್ಕು ಸ್ಥಾಪಿಸಲು ಯತ್ನಿಸುತ್ತಲೇ ಬಂದಿದೆ. ಈ ಹಿಂದೆಯೂ ಚೀನದ ಇಂತಹ ಸಣ್ಣ ಸಣ್ಣ ಕುತಂತ್ರಗಳಲ್ಲಿ ನಿರತವಾಗಿ ಆ ಬಳಿಕ ಸೇನಾ ದಾಳಿ, ಅತಿಕ್ರಮಣದಂತಹ ದುಸ್ಸಾಹಸಕ್ಕೆ ಕೈಹಾಕಿದ್ದನ್ನು ಮರೆಯುವಂತಿಲ್ಲ. ಚೀನದ ಈ ಚಾಳಿಗೆ ಅದರದ್ದೇ ಆದ ಭಾಷೆಯಲ್ಲಿ ಪ್ರತ್ಯುತ್ತರ ನೀಡಬೇಕು. ಅರುಣಾಚಲ ಪ್ರದೇಶದ ಒಂದೊಂದೇ ಸ್ಥಳಗಳಿಗೆ ಮರುನಾಮಕರಣ ಮಾಡಿ, ಮುಂದೊಂದು ದಿನ ಆ ಸ್ಥಳಗಳ ಮೇಲೆ ಹಿಡಿತ ಸಾಧಿಸುವ ಚೀನದ ಷಡ್ಯಂತ್ರಕ್ಕೆ ತಿರುಗೇಟು ನೀಡುವ ಜತೆಜತೆಯಲ್ಲಿ ಚೀನದ ಈ ಕುತ್ಸಿತ ಮನೋಭಾವವನ್ನು ಜಾಗತಿಕವಾಗಿ ತೆರೆದಿಡುವ ಕಾರ್ಯವನ್ನು ಭಾರತ ಸರಕಾರ ಮಾಡಬೇಕು. ಭವಿಷ್ಯದಲ್ಲಿ ಚೀನ ಇಂತಹ ದುಸ್ಸಾಹಸಕ್ಕಿಳಿಯದಂಥ ಪಾಠವನ್ನು ಕಲಿಸಲು ಇದು ಸಕಾಲ.

Advertisement

Udayavani is now on Telegram. Click here to join our channel and stay updated with the latest news.

Next