Advertisement
ಇಂಡಿಯಾ ಔಟ್ ಕ್ಯಾಂಪೇನ್ಮುಇಜ್ಜು ಮಾಲ್ದೀವ್ಸ್‌ನ ರಾಜಧಾನಿ ಮಾಲೆಯ ಮೇಯರ್ ಆಗಿದ್ದರು. ಅವರೀಗ ಅಧ್ಯಕ್ಷ. ಆದರೆ ಇವರ ಬೆನ್ನಿಗೆ ನಿಂತು ಗೆಲುವಿಗೆ ಶ್ರಮಿಸಿದ್ದು 2018ರಲ್ಲಿ ಸೋತ ಇಲ್ಲಿನ ಮಾಜಿ ಅಧ್ಯಕ್ಷ ಅಬ್ದುಲ್ಲ ಯಮೀನ್. ಸದ್ಯ ಜೈಲುವಾಸದಲ್ಲಿರುವ ಯಮೀನ್ “ಇಂಡಿಯಾ ಔಟ್’ ಎಂಬ ಭಾರತದ ವಿರೋಧಿ ಅಭಿಯಾನದ ರೂವಾರಿ. ಮಾಲ್ದೀವ್ಸ್‌ನ ಆಡಳಿತದಲ್ಲಿ ಭಾರತದ ಪ್ರಭಾವವನ್ನು ಕಡಿತಗೊಳಿಸಬೇಕು ಎಂಬುದೇ ಇದರ ಉದ್ದೇಶ. ಮುಇಜ್ಜು ಈ ಅಭಿಯಾನದಲ್ಲಿ ನೇರವಾಗಿ ಭಾಗಿ ಯಾಗಿಲ್ಲ. ಆದರೂ ಭಾರತದ ವಿರೋಧಿ ನಿಲುವು ಇತ್ತು. ಅದಕ್ಕೆ ತನ್ನ ಎಲ್ಲ ಸೇನಾ ಸಿಬಂದಿಯನ್ನು ಭಾರತವು ವಾಪಸು ಕರೆಸಿಕೊಳ್ಳಬೇಕೆಂಬ ಅವರ ಇಂಗಿತವೇ ಸಾಕ್ಷಿ.
2013ರ ಬಳಿಕ ಯೆಮನ್ ಅಧ್ಯಕ್ಷರಾದ ಮೇಲೆ ಚೀನ ಸರಕಾರ ಮಾಲೆ ಹಾಗೂ ಸುತ್ತಲಿನ ದ್ವೀಪಗಳಿಗೆ ಸೇತುವೆ ನಿರ್ಮಾಣ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಅಭಿವೃದ್ಧಿಯಂಥ ಯೋಜನೆಗಳಿಗೆ ಹಣ ಒದಗಿಸಿತ್ತು. ಪ್ರತಿಯಾಗಿ ಮಾಲ್ದೀವ್ಸ್ ಸಹ ಚೀನದೊಂದಿಗೆ ಮುಕ್ತ ವ್ಯಾಪಾರ ನೀತಿ ಒಪ್ಪಂದ ಮಾಡಿಕೊಂಡಿತು. ಆದರೆ ಈ ನೆರವು 2022ರ ಕೊನೆಗೆ ದೇಶದ ಸಾಲದ ಪ್ರಮಾಣವನ್ನು ಜಿಡಿಪಿಯ ಶೇ.113 ರಷ್ಟಕ್ಕೆ ಏರಿಸಿತ್ತು. ಇವೆಲ್ಲವೂ ದ್ವೀಪ ರಾಷ್ಟ್ರದ ಮೇಲೆ ತನ್ನ ಅಧೀನವಾಗಿಸಿಕೊಂಡು ಭಾರತವನ್ನು ದೂರಕ್ಕಿಡುವ ಚೀನದ ತಂತ್ರದ ಭಾಗವಾಗಿತ್ತು.
ಇದನ್ನೇ ಆಧರಿಸಿ 2018ರ ಚುನಾವಣೆಯಲ್ಲಿ ಸಾಲಿಹ್, ತಮ್ಮ ಪ್ರತಿಸ್ಪರ್ಧಿ ಯಮೆನ್ ಹೇಗೆ ಚೀನದ ತಂತ್ರಕ್ಕೆ ಒಳಗಾಗಿ ತಮ್ಮ ದೇಶವನ್ನು ಸಾಲದ ಶೂಲಕ್ಕೆ ಸಿಲುಕಿಸಿದ್ದಾರೆ ಎಂದು ಪ್ರಜೆಗಳಿಗೆ ವಿವರಿಸಿದ್ದರು. ಭಾರತಕ್ಕೂ ಇದು ಬೇಕಿತ್ತು. ಚುನಾವಣೆಯಲ್ಲಿ ಯಮನ್ ಸೋತು, ಸಾಲಿಹ್ ಗೆದ್ದರು. ಆಗ ಭಾರತ ಸಾಲಿಹ್‌ಗೆ ಹತ್ತಿರವಾಗಿ ಹಲವು ಮೂಲಸೌಕರ್ಯ ಯೋಜನೆಗಳು, ಸೇನೆಯ ಆಧು ನೀಕರಣ ಎಲ್ಲದಕ್ಕೂ ನೆರವು ಒದಗಿಸಿತು. ಇದು ಚೀನಕ್ಕೆ ರುಚಿಸಲಿಲ್ಲ. ಅಂದಿನಿಂದಲೇ ಮತ್ತೆ ಮಾಲ್ದೀವ್ಸ್‌ನ ಮೇಲೆ ಹಿಡಿತ ಸಾಧಿಸಲು ಮುಂದಾಯಿತು. ಅದರ ಪರಿಣಾಮ ಈಗ ಚೀನದ ಆಪ್ತನ ಆಪ್ತ ಮುಇಜ್ಜು ಗೆದ್ದಿದ್ದಾರೆ.
Related Articles
ಚುನಾವಣೆಯಲ್ಲಿ ಭಾರತ ವಿರೋಧಿ ಗೆದ್ದಿರುವ ಕಾರಣ ಮಾಲ್ದೀವ್ಸ್ ಎಲ್ಲದಕ್ಕೂ ಚೀನದತ್ತ ವಾಲುತ್ತದೆ. ಅಷ್ಟೇ ಅಲ್ಲ. ಪ್ರತಿಯಾಗಿ ಚೀನ ನೆರವು ನೀಡುವ ಅವಕಾಶವನ್ನು ನಷ್ಟ ಮಾಡಿಕೊಳ್ಳದೇ, ಹಿಂದೂ ಮಹಾಸಾಗರದ ವ್ಯಾಪ್ತಿಯಲ್ಲಿ ತನ್ನ ರಹಸ್ಯ ಕಾರ್ಯಾಚರಣೆ ಹೆಚ್ಚಿಸಲಿದೆ. ಇದು ಭಾರತಕ್ಕೆ ಅಪಾಯಕಾರಿ. ಹಾಗಾಗಿ ಸದ್ಯ ಕಾದು ನೋಡುವ ತಂತ್ರವಷ್ಟೇ ಭಾರತಕ್ಕೆ ಉಳಿದಿರುವಂಥದ್ದು ಎನ್ನುತ್ತಾರೆ ವಿಶ್ಲೇಷಕರು.
Advertisement