Advertisement

ಚೀನಾದ ಆರ್ಥಿಕ ಸಮಸ್ಯೆ: ವ್ಯಾಪಾರ ಸಮರವೇ ಕಾರಣವಾಯಿತೇ?

01:22 AM Jan 22, 2020 | mahesh |

ಚೀನಾದ ಅರ್ಥವ್ಯವಸ್ಥೆಯಲ್ಲಿನ ಕುಸಿತವು ಕೇವಲ ಅದಕ್ಕೊಂದೇ ಅಲ್ಲ, ಬದಲಾಗಿ, ಉಳಿದ ದೇಶಗಳಿಗೂ ಚಿಂತೆಯ ವಿಷಯ. ಏಕೆಂದರೆ, ಚೀನಿ ಅರ್ಥವ್ಯವಸ್ಥೆಯು ಪ್ರಪಂಚದ ವಿತ್ತ ವ್ಯವಸ್ಥೆಗೆ ಎಂಜಿನ್‌ನಂತೆ ಕೆಲಸ ಮಾಡುತ್ತದೆ. ಅದರಲ್ಲಾಗುವ ಏರುಪೇರು, ಉಳಿದ ದೇಶಗಳ ಮೇಲೂ ಪರಿಣಾಮ ಬೀರುತ್ತದೆ.

Advertisement

ಭಾರತವು ಹಲವು ಆರ್ಥಿಕ ಸಮಸ್ಯೆಗಳನ್ನು ಎದುರಿಸುತ್ತಾ ಸಾಗಿರುವ ಹೊತ್ತಲ್ಲೇ ನೆರೆಯ ಚೀನಾದ ಅಭಿವೃದ್ಧಿ ದರದಲ್ಲೂ ಕುಸಿತ ಕಾಣಿಸಿಕೊಂಡಿದೆ. ಜಗತ್ತಿನ ಎರಡನೇ ಅತಿದೊಡ್ಡ ಆರ್ಥಿಕ ಶಕ್ತಿ ಚೀನಾದ ಅರ್ಥವ್ಯವಸ್ಥೆಯ ಮೇಲೂ ಈಗ ಸಂಕಷ್ಟದ ಕಾರ್ಮೋಡಗಳು ಮಡುಗಟ್ಟಿದಂತೆ ಗೋಚರಿಸುತ್ತಿದೆ. ಇದರ ಪರಿಣಾಮವು, ಭಾರತ ಮತ್ತು ಇತರೆ ರಾಷ್ಟ್ರಗಳ ಮೇಲೂ ಆಗಲಿದೆಯೇ ಎಂಬ ಚರ್ಚೆಗಳು ಆರಂಭವಾಗಿವೆ. ಚೀನಾದ ರಾಷ್ಟ್ರೀಯ ಸಾಂಖೀಕ ಬ್ಯೂರೋ ವಿಕಾಸ ದರದ ಕುರಿತು ಇತ್ತೀಚೆಗಷ್ಟೇ ಬಿಡುಗಡೆಮಾಡಿರುವ ಅಂಕಿಸಂಖ್ಯೆಯು, ಏಷ್ಯಾದ ಪ್ರಬಲ ರಾಷ್ಟ್ರದಲ್ಲಿ ಎಲ್ಲವೂ ಸರಿಯಾಗಿಲ್ಲ ಎಂಬ ಪರೋಕ್ಷ ಸಂದೇಶ ಕಳುಹಿಸುತ್ತಿದೆ. ಚೀನಾದ ಜಿಡಿಪಿ 6.8ರಿಂದ 6.1 ಪ್ರತಿಶತಕ್ಕೆ ಬಂದು ನಿಂತಿದ್ದು, ಕಳೆದ ಮೂರು ದಶಕದಲ್ಲೇ ಆ ದೇಶದ ಅಭಿವೃದ್ಧಿ ದರವು ಅತ್ಯಂತ ಕಡಿಮೆಯಾಗಿದೆ. ಈ ವಿದ್ಯಮಾನಕ್ಕೆ ಜಾಗತಿಕ ವ್ಯಾಪಾರದಲ್ಲಿ ಅದು ಎದುರಿಸುತ್ತಿರುವ ಸವಾಲುಗಳೂ ಕಾರಣವಿರಬಹುದು.

ಅದರಲ್ಲೂ ಕಳೆದ ಕೆಲವು ವರ್ಷಗಳಿಂದ ಅಮೆರಿಕದೊಂದಿಗಿನ ವ್ಯಾಪಾರ ಯುದ್ಧದ ಪರಿಣಾಮವಿದು ಎಂಬ ವಿಶ್ಲೇಷಣೆಯೂ ನಡೆದಿದೆ. ಅಮೆರಿಕದ ನಂತರ ವಿಶ್ವ ವ್ಯಾಪಾರದ ಮೇಲೆ ಪ್ರಮುಖ ಹಿಡಿತವಿರುವುದು ಈ ರಾಷ್ಟ್ರಕ್ಕೆ. ಅಮೆರಿಕ, ಯುರೋಪ್‌, ಭಾರತದಿಂದ ಹಿಡಿದು ಆಫ್ರಿಕಾದೇಶಗಳವರೆಗೆ ಚಿಕ್ಕ ಚಿಕ್ಕ ಸಾಮಾನುಗಳಿಂದ ಹಿಡಿದು, ಅದ್ಭುತ ಗ್ಯಾಜೆಟ್‌ಗಳವರೆಗೆ ಚೀನಾ ರಫ್ತು ಮಾಡುತ್ತದೆ.

ಪ್ರಪಂಚದಲ್ಲಿ ಯಾವುದೇ ವಸ್ತುವನ್ನೂ ಚೀನಾ ತಯಾರಿಸಬಲ್ಲದು ಎಂಬ ಜನಜನಿತ ಮಾತಿಗೆ ಅದರ ಉತ್ಪಾದನಾ ಸಾಮರ್ಥ್ಯ, ಕೌಶಲ್ಯವೇ ಸಾಕ್ಷಿ. ಹೀಗಿರುವಾಗ ಆರ್ಥಿಕ ವೃದ್ಧಿಯಲ್ಲಿ ಹಿಂಜರಿತ ಕಾಣಿಸಿಕೊಳ್ಳುತ್ತಿದೆ ಎಂದಾದರೆ, ಅಲ್ಲಿನ ಕಾರ್ಖಾನೆಗಳು ಯಾ ಉತ್ಪಾದ‌ನಾ ಕೇಂದ್ರಗಳ ಎದುರು ಬೇಡಿಕೆಯ ಅಭಾವವಿದೆ ಮತ್ತು ಉತ್ಪಾದನೆಯಲ್ಲಿ ಹಲವು ಅಡಚಣೆಗಳು ಇವೆ ಎಂದರ್ಥ. ಇದಷ್ಟೇ ಅಲ್ಲದೇ, ಚೀನಾ ಈಗ ಪ್ರಪಂಚದ ಅನೇಕ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲೂ ಹೂಡಿಕೆ ಮಾಡುತ್ತಿದ್ದು, ಈ ಹೂಡಿಕೆಗಳಿಗೆ ಈಗಿನ ಸಮಸ್ಯೆ ಅಡ್ಡಿಯಾಗಬಹುದೇ ಎನ್ನುವ ಪ್ರಶ್ನೆಯೂ ಎದುರಾಗಿದೆ.

ಸ್ಥಳೀಯವಾಗಿಯೂ ಬೆಲೆ ಏರಿಕೆ ಮತ್ತು ಬೇಡಿಕೆಯ ಸಮಸ್ಯೆಯನ್ನು ಅದು ಎದುರಿಸುತ್ತಿರುವುದಕ್ಕೆ
ಜನರ ಖರೀದಿ ಸಾಮರ್ಥ್ಯ ಕುಸಿಯುತ್ತಿರುವುದೂ ಕಾರಣವಿರಬಹುದು. ಚೀನಾದ ಅರ್ಥವ್ಯವಸ್ಥೆಯಲ್ಲಿನ ಕುಸಿತವು ಕೇವಲ ಅದಕ್ಕೊಂದೇ ಅಲ್ಲ, ಬದಲಾಗಿ, ಉಳಿದ ದೇಶಗಳಿಗೂ ಚಿಂತೆಯ ವಿಷಯ. ಏಕೆಂದರೆ, ಚೀನಿ ಅರ್ಥವ್ಯವಸ್ಥೆಯು ಪ್ರಪಂಚದ ವಿತ್ತ ವ್ಯವಸ್ಥೆಗೆ ಇಂಜಿನ್‌ನಂತೆ ಕೆಲಸ ಮಾಡುತ್ತದೆ. ಅದರಲ್ಲಾಗುವ ಏರುಪೇರು, ಉಳಿದ ದೇಶಗಳ ಮೇಲೂ ಪರಿಣಾಮ ಬೀರುತ್ತದೆ.

Advertisement

ಜಾಗತಿಕ ವಿತ್ತ ಮಾರುಕಟ್ಟೆಯಲ್ಲಿ ಚೀನಾದ ಪ್ರಭಾವದ ಮೇಲೆ ಐಎಂಎಫ್ ಬಿಡುಗಡೆ ಮಾಡಿದ್ದ ವರದಿಯು, ಈ ವಿಚಾರದಲ್ಲಿ ಹೆಚ್ಚು ಬೆಳಕು ಚೆಲ್ಲಿದೆ. ಚೀನಾದ ಜಿಡಿಪಿ ದರದಲ್ಲಿ 1 ಪ್ರತಿಶತ ನೆಗೆಟಿವ್‌ ಇಳಿಕೆ ಕಂಡು ಬಂದರೆ, ಜಾಗತಿಕ ಮಾರುಕಟ್ಟೆಯ ಬೆಳವಣಿಗೆ ದರದಲ್ಲಿ 0.23 ಪ್ರತಿಶತ ಕುಸಿತ ಕಂಡು ಬರುತ್ತದೆ ಎನ್ನುತ್ತದೆ ಈ ವರದಿ. ಭಾರತದ ಮೇಲೂ ಚೀನಾದ ಕುಸಿತದ ಪ್ರಭಾವ ಇರಲಿದೆ ಆದರೆ ಅದು ನಗಣ್ಯ ಎನ್ನುತ್ತಾರೆ ಪರಿಣತರು. ಇದೇ ವೇಳೆಯಲ್ಲೇ ಚೀನಾದ ಮೇಲೆ ಅತಿಯಾಗಿ ಅವಲಂಬಿತವಾಗಿರುವಂಥ ಆಸಿಯಾನ್‌ ಆರ್ಥಿಕತೆಗಳು (ಫಿಲಿಪ್ಪೀನ್ಸ್‌ ಹೊರತುಪಡಿಸಿ) ಈಗ ಋಣಾತ್ಮಕ

ಪರಿಣಾಮ ಎದುರಿಸುತ್ತವೆ ಎಂದು ವಿಶ್ಲೇಷಿಸಲಾಗುತ್ತಿದೆ. ಸದ್ಯಕ್ಕಂತೂ ಅಮೆರಿಕದೊಂದಿಗಿನ ಅದರ ವ್ಯಾಪಾರ ಸಮರ ನಿಲ್ಲುವ ಸೂಚನೆ ಸಿಗುತ್ತಿಲ್ಲ. ಸತ್ಯವೇನೆಂದರೆ, ಚೀನಾ ಈಗ ಈ ಬಿಕ್ಕಟ್ಟಿನಿಂದ ಪಾರಾಗಲು ಪ್ರಯತ್ನಿಸುತ್ತಿದೆ.

ಆದರೆ, ಈ ಬಾರಿ ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಯಲಿದ್ದು, ಎರಡನೇ ಬಾರಿ ಆಯ್ಕೆಯನ್ನು ಬಯಸುತ್ತಿರುವ ಟ್ರಂಪ್‌, ಚೀನಾದ ವಿರುದ್ಧದ ಕಠಿಣ ನೀತಿಯನ್ನು ಮುಂದುವರಿಸಲಿರುವುದು ನಿಶ್ಚಿತ. ಈ ಎಲ್ಲಾ ಸಂಗತಿಗಳೂ ಜಾಗತಿಕ ಆರ್ಥಿಕತೆಯಲ್ಲಿ ಇನ್ನೂ ಯಾವ ರೀತಿಯಲ್ಲಿ ಪ್ರಭಾವ ಬೀರಲಿವೆಯೋ ಎಂಬ ಆತಂಕವಂತೂ ಇದ್ದೇ ಇದೆ.

Advertisement

Udayavani is now on Telegram. Click here to join our channel and stay updated with the latest news.

Next