Advertisement

ದುವಾನ್‌ ಎಂಬ ಚೀನದ ಬಿಲ್‌ ಗೇಟ್ಸ್‌!

03:05 AM Jun 04, 2018 | Harsha Rao |

ದುವಾನ್‌ ಹೊಸ ತಂತ್ರಜ್ಞಾನವನ್ನಾಗಲೀ ಅಥವಾ ಇಡೀ ಜಗತ್ತೇ ನಿಬ್ಬೆರಗಾಗಿ ನೋಡುವಂತಹ ತಂತ್ರಜ್ಞಾನವನ್ನಾಗಲೀ ತನ್ನ ಕಂಪನಿಗಳ ಮೂಲಕ ಪರಿಚಯಿಸಲಿಲ್ಲ. ಆದರೆ ಲಭ್ಯ ತಂತ್ರಜ್ಞಾನವನ್ನೇ ಬಳಸಿಕೊಂಡು ಅದರಲ್ಲೇ ಉತ್ತಮ ಗುಣಮಟ್ಟದ ಹಾಗೂ ಗ್ರಾಹಕರು ಕೊಟ್ಟ ಕಾಸಿಗೆ ಮೋಸವಾಗದಂತೆ ಮೌಲ್ಯಯುತವಾದ ಉತ್ಪನ್ನಗಳನ್ನು ಒದಗಿಸಿದರು. ಒಪ್ಪೋ, ವಿವೋ ಮತ್ತು ಒನ್‌ಪ್ಲಸ್‌ ಕಂಪನಿಗಳು ಸ್ಮಾರ್ಟ್‌ಫೋನನ್ನೇ ಮಾರುತ್ತವೆಯಾದರೂ, ಇವುಗಳ ಗ್ರಾಹಕರ ವರ್ಗ ಬೇರೆ ಬೇರೆ. ಮೂರೂ ಕಂಪನಿಗಳು ಈಗ ಚೀನ ದಲ್ಲಿ ನಂಬರ್‌ ಒನ್‌.

Advertisement

ಕಳೆದ ಕೆಲವು ದಿನಗಳಿಂದ ತಂತ್ರಜ್ಞಾನ ವಲಯದಲ್ಲಿ ಒನ್‌ ಪ್ಲಸ್‌ ಸ್ಮಾರ್ಟ್‌ಫೋನ್‌ ಕಂಪನಿಯನದ್ದೇ ಸದ್ದು. ವರ್ಷಕ್ಕೊಂದರಂತೆ ಹೊಸ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿ, ಗ್ರಾಹಕರನ್ನು ಆನ್‌ಲೈನ್‌ನಲ್ಲಿ ಕ್ಯೂ ನಿಲ್ಲಿಸುವ ಒನ್‌ಪ್ಲಸ್‌ ಈ ಬಾರಿ ಒನ್‌ ಪ್ಲಸ್‌ 6 ಬಿಡುಗಡೆ ಮಾಡಿದೆ. ಈ ಮಾಡೆಲ್‌ ಎಷ್ಟು ಚೆನ್ನಾಗಿದೆ ಎಂಬುದಕ್ಕಿಂತಲೂ ಅದು ಎಬ್ಬಿಸಿದ ಹವಾ ಮಹತ್ವದ್ದು. ಆ್ಯಪಲ್‌ ತನ್ನ ಐಫೋನ್‌ಗಳನ್ನು ಬಿಡುಗಡೆ ಮಾಡುವಾಗಲೂ ಇದೇ ರೀತಿಯ ಕ್ರೇಜ್‌ ಸೃಷ್ಟಿಯಾಗುತ್ತದೆ.

ಅಚ್ಚರಿಯ ಸಂಗತಿಯೆಂದರೆ ಒನ್‌ಪ್ಲಸ್‌ ಸ್ಮಾರ್ಟ್‌ಫೋನ್‌ ಕಂಪನಿ ಆರಂಭವಾದಾಗ ಚೀನ  ಮೂಲದ್ದು ಎಂದು ಹೇಳಿ ಕೊಂಡಿರಲಿಲ್ಲ. ಅಷ್ಟೇ ಅಲ್ಲ, ಇದು ಒಪೊ ಎಂಬ ಚೀನ  ಸ್ಮಾಟ್‌ಫೋನ್‌ ಕಂಪನಿಯ ಸೋದರ ಸಂಸ್ಥೆ ಎಂದೂ ಹೇಳಿಕೊಂಡಿರಲಿಲ್ಲ. ಆದರೆ ಚೀನ  ಸರಕಾರ ಬಿಡುಗಡೆ ಮಾಡಿದ ದಾಖಲೆ ಯೊಂದು ಒನ್‌ಪ್ಲಸ್‌ನ ಬಂಡವಾಳ ಬಹಿರಂಗಗೊಂಡಿತ್ತು. 

ಇದು ಬಿಬಿಕೆ ಎಲೆಕ್ಟ್ರಾನಿಕ್ಸ್‌ ಎಂಬ ಚೀನ  ಸಂಸ್ಥೆಯ ಅಂಗಸಂಸ್ಥೆ ಎಂಬುದು ಜಗಜ್ಜಾಹೀರಾಗಿತ್ತು. ಸಾಮಾನ್ಯವಾಗಿ ಚೀನ  ಉತ್ಪನ್ನ ಎಂದ ತಕ್ಷಣ ಯುರೋಪ್‌ನ ಜನರು ಮೂಗು ಮುರಿಯುತ್ತಾರೆ. ಚೀನ  ಉತ್ಪನ್ನ ಕಳಪೆ ಎಂಬ ಮನಸ್ಥಿತಿ ಅಲ್ಲಿ ಇನ್ನೂ ಹೋಗಿಲ್ಲ. ಹೀಗಾಗಿ ನಾವು ಚೀನ ದವರು ಎಂದು ಹೇಳಿಕೊಂಡು ಮಾರುಕಟ್ಟೆಗೆ ಕಾಲಿಟ್ಟರೆ ಈ ಹೈ ಎಂಡ್‌ ಫೋನ್‌ಗಳು ಎಷ್ಟೇ ಚೆನ್ನಾಗಿದ್ದರೂ ಅನುಮಾನದಿಂದಲೇ ನೋಡುತ್ತಾರೆ ಎಂಬ ಕಾರಣಕ್ಕೆ ಚೀನ ಮೂಲವನ್ನು ಮುಚ್ಚಿಡಲಾಗಿತ್ತು. ಬಂಡವಾಳ ಹೂಡಿಕೆಯ ಮೂಲ ಬಹಿರಂಗಗೊಳ್ಳುವ ಹೊತ್ತಿಗೆ ಇದು ಚೀನ  ಪ್ರಾಡಕ್ಟ್ ಎಂಬ ಅನುಮಾನ ತೊರೆದು ಜನರ ಮನಸ್ಸಲ್ಲಿ ಒನ್‌ಪ್ಲಸ್‌ ಒನ್‌ ನೆಲೆಯೂರಿತ್ತು. ಈಗಲೂ ಒನ್‌ಪ್ಲಸ್‌ನಲ್ಲಿ ಹೆಚ್ಚಿನ ಸಂಖ್ಯೆಯ ಉದ್ಯೋಗಿಗಳು ಉತ್ತರ ಅಮೆರಿಕದವರೇ ಇದ್ದಾರೆ. ಯುರೋಪ್‌ ಜನರೂ ಸೇರಿದಂತೆ ಎಲ್ಲರೂ ಇದು ಚೀನ ದ್ದು ಎಂಬುದನ್ನು ಮರೆತು ಖರೀದಿಸುತ್ತಲೇ ಇದ್ದಾರೆ.

ಅಂದಹಾಗೆ ಒಪ್ಪೋ, ವಿವೋ ಮತ್ತು ಒನ್‌ ಪ್ಲಸ್‌, ಇವು ಮೂವರೂ ಅಣ್ಣತಮ್ಮಂದಿರು. ಇವುಗಳ ಹಿಂದಿನ ಶಕ್ತಿ ದುವಾನ್‌ ಯಾಂಗ್‌ಪಿಂಗ್‌. 1978ರಲ್ಲಿ ಚೀನ  ಕಮ್ಯೂನಿಸ್ಟ್‌ ಪಕ್ಷ ಉದಾರವಾದಿ ನೀತಿಯ ಲಾಭ ಪಡೆದು ಉದ್ಯಮಿಯಾದವರು ಇವರು. ಕಮ್ಯೂನಿಸ್ಟ್‌ ಪಕ್ಷ ಅಧಿಕಾರಕ್ಕೆ ಬಂದಾಗ ದೇಶದಲ್ಲಿ ಉದ್ಯಮ ಸ್ಥಾಪಿಸಲು ವ್ಯಾಪಕ ಅವಕಾಶ ನೀಡಿತ್ತು. ಬೀಜಿಂಗ್‌ನಲ್ಲಿ ಸರ್ಕಾರಿ ಸ್ವಾಮ್ಯದ ವ್ಯಾಕ್ಯೂಮ್‌ ಟ್ಯೂಬ್‌ ಫ್ಯಾಕ್ಟರಿಯಲ್ಲಿ ಕೆಲಸ ಮಾಡಿಕೊಂಡಿದ್ದ ಇವರು, ಕೆಲವೇ ವರ್ಷಗಳಲ್ಲಿ ಸುಬೊರ್‌ ಎಂಬ ಎಲೆಕ್ಟ್ರಾನಿಕ್ಸ್‌ ಕಂಪನಿಯನ್ನು ಆರಂಭಿಸಿದ್ದರು. 80ರ ದಶಕದಲ್ಲಿ ನಿಂಟೆಂಡೋ ಕಂಪನಿಯ ಗೇಮಿಂಗ್‌ ಕನ್ಸೋಲ್‌ಗ‌ಳು ಚೀನ ದ ಮಕ್ಕಳ ಕೈಯಲ್ಲಿ ಜನಪ್ರಿಯವಾಗುತ್ತಿತ್ತು. ಆದರೆ ಚೀನ ದ್ದೇ ಗೇಮಿಂಗ್‌ ಕನ್ಸೋಲ್‌ ಇರಲಿಲ್ಲ. ಮೊದಲ ಬಾರಿಗೆ ಸುಬೋರ್‌ ಎಂಬ ಹೆಸರಿನಲ್ಲೇ ಗೇಮಿಂಗ್‌ ಕನ್ಸೋಲ್‌ಗ‌ಳನ್ನು ದುವಾನ್‌ ಪರಿಚಯಿಸಿದರು. ಇದು ನಿಂಟೆಂಡೋಗೆ ಸಾಕಷ್ಟು 
ಸ್ಪರ್ಧೆ ಒಡ್ಡಿತು. ಆಗಂತೂ ಎಲೆಕ್ಟ್ರಾನಿಕ್ಸ್‌ ಉತ್ಪಾದನೆ ಚೀನ ದಲ್ಲಿ ವಿಪರೀತವಾಗಿ ತಲೆ ಎತ್ತಿತ್ತು.

Advertisement

ನಂತರ ದುವಾನ್‌ ಸುಬೊರ್‌ ಕೈಬಿಟ್ಟು, ಬಿಬಿಕೆ ಎಲೆಕ್ಟ್ರಾನಿಕ್ಸ್‌ ಎಂಬ ಕಂಪನಿ ಸ್ಥಾಪಿಸಿದರು. ಆಗ ಸಿಡಿ ಹಾಗೂ ಡಿವಿಡಿ ಪ್ಲೇಯರುಗಳು ಜನಪ್ರಿಯವಾಗುತ್ತಿದ್ದವು. ಈ ಮಾರುಕಟ್ಟೆಯನ್ನು ಎನ್‌ಕ್ಯಾಶ್‌ ಮಾಡಿಕೊಳ್ಳಲು ಸಿಡಿ ಪ್ಲೇಯರ್‌ಗಳು, ಎಂಪಿ3 ಪ್ಲೇಯರುಗಳನ್ನು ಉತ್ಪಾದಿಸಲು ಆರಂಭಿಸಿದರು. ಹಾಗಂತ ದುವಾನ್‌ ಹೊಸ ತಂತ್ರಜ್ಞಾನವನ್ನಾಗಲೀ ಅಥವಾ ಇಡೀ ಜಗತ್ತೇ ನಿಬ್ಬೆರಗಾಗಿ ನೋಡುವಂತಹ ತಂತ್ರಜ್ಞಾನವನ್ನಾಗಲೀ ತನ್ನ ಕಂಪನಿಗಳ ಮೂಲಕ ಪರಿಚಯಿಸಲಿಲ್ಲ. ಆದರೆ ಲಭ್ಯ ತಂತ್ರಜ್ಞಾನವನ್ನೇ ಬಳಸಿಕೊಂಡು ಅದರಲ್ಲೇ ಉತ್ತಮ ಗುಣಮಟ್ಟದ ಹಾಗೂ ಗ್ರಾಹಕರು ಕೊಟ್ಟ ಕಾಸಿಗೆ ಮೋಸವಾಗದಂತೆ ಮೌಲ್ಯಯುತವಾದ ಉತ್ಪನ್ನಗಳನ್ನು ಒದಗಿಸಿದರು.

2000 ನೇ ಇಸ್ವಿಯ ಹೊತ್ತಿಗೆ ಡಿಜಿಟಲ್‌ ಕ್ರಾಂತಿ ಶುರುವಾಯಿತು. ಹೀಗಾಗಿ ಅವರ ಪ್ಲೇಯರುಗಳಿಗೆ ಬೇಡಿಕೆಯೂ ಕಡಿಮೆಯಾಯಿತು. ಕ್ಯಾಲಿಫೋರ್ನಿಯಾಗೆ ತೆರಳಿ ನಿವೃತ್ತಿ ಸಮಯ ವನ್ನು ಕಳೆಯೋಣ ಎಂದು ಸೆಟ್ಲ ಆದರು. ಆದರೆ ಆಗಷ್ಟೇ ಶುರುವಾದ ಮೊಬೈಲ್‌ ಕ್ರಾಂತಿ ಅವರನ್ನು ಚೀನ ಗೆ ಪುನಃ ಕೈಬೀಸಿ ಕರೆದಿತ್ತು. ಈ ಮೊಬೈಲ್‌ ಫೋನ್‌ಗಳು ಚೀನ  ಮಧ್ಯಮವರ್ಗದ ಜನರ ಜೀವನಮಟ್ಟವನ್ನೇ ಬದಲಿಸಬಲ್ಲದು ಎಂಬುದು ಹೊಳೆಯುತ್ತಿ ದ್ದಂತೆ ಬೀಜಿಂಗ್‌ನಲ್ಲಿ ಬಿಬಿಕೆ ಎಲೆಕ್ಟ್ರಾನಿಕ್ಸ್‌ ಅಡಿಯಲ್ಲೇ ಅಂಗಸಂಸ್ಥೆಗಳನ್ನು ಸ್ಥಾಪಿಸಿ ಮೊಬೈಲ್‌ಗ‌ಳನ್ನು ತಯಾರಿ
ಸಲು ಆರಂಭಿಸಿದರು.

ಆಗಲೇ ಹುಟ್ಟಿಕೊಂಡಿದ್ದು ಒಪ್ಪೋ. ಅತ್ಯಂತ ಕಡಿಮೆ ಅವಧಿಯಲ್ಲಿ ಒಪ್ಪೋ ವಿಶ್ವದ ನಾಲ್ಕನೇ ದೊಡ್ಡ ಸ್ಮಾರ್ಟ್‌ಫೋನ್‌ ಕಂಪನಿ ಎಂಬ ಹೆಗ್ಗಳಿಕೆ ಪಡೆಯಿತು. ಚೀನ  ಜೊತೆಗೆ ಇತರ ದೇಶಗಳಿಗೂ ಕಾಲಿಟ್ಟಿತು. ಸಹಜವಾಗಿಯೇ ಚೀನ  ನಂತರ ಭಾರತವೇ ಸ್ಮಾರ್ಟ್‌ ಫೋನ್‌ಗಳಿಗೆ ಮಹತ್ವದ ಮಾರುಕಟ್ಟೆಯಾಗಿತ್ತು. ಭಾರತದಲ್ಲಂತೂ ವ್ಯಾಪಕ ಪ್ರಚಾರ ನಡೆಸಿ ಸ್ಮಾರ್ಟ್‌ಫೋನ್‌ಗಳನ್ನು ಮಾರಲಾಗುತ್ತಿದೆ. ಇದೇ ರೀತಿ 2009ರಲ್ಲಿ ವಿವೋ ಹುಟ್ಟಿಕೊಂಡಿತು. 2013ರಲ್ಲಿ ಒನ್‌ಪ್ಲಸ್‌ ಕೂಡ ಶುರುವಾಯಿತು. ಈ ಮೂರೂ ಕಂಪನಿಗಳು ಸ್ಮಾರ್ಟ್‌ಫೋನನ್ನೇ ಮಾರುತ್ತವೆಯಾದರೂ, ಇವುಗಳ ಗ್ರಾಹಕರ ವರ್ಗ ಬೇರೆ ಬೇರೆ. ಈ ಮೂರೂ ಕಂಪನಿಗಳು ಈಗ ಚೀನ ದಲ್ಲಿ ನಂಬರ್‌ ಒನ್‌ ಸ್ಮಾರ್ಟ್‌ಫೋನ್‌ ಮಾರಾಟಗಾರರು. ಭಾರತದಲ್ಲಂತೂ 30 ಸಾವಿರ ರೂ. ಆಸುಪಾಸಿನ ಸ್ಮಾರ್ಟ್‌ಫೋನ್‌ಗಳ ಮಾರಾಟದಲ್ಲಿ ಶೇ. 50ರಷ್ಟು ಪಾಲನ್ನು ಒನ್‌ಪ್ಲಸ್‌ ಬಾಚಿಕೊಂಡಿದೆ.

2014ರಿಂದ 2016ರ ವರೆಗೆ ಚೀನದಲ್ಲಿ ಸ್ಮಾರ್ಟ್‌ಫೋನ್‌ಗಳ ಸುವರ್ಣಯುಗ. ಬಹುತೇಕರು ಫೀಚರ್‌ ಫೋನುಗಳನ್ನು ಬದಿಗಿಟ್ಟು ಸ್ಮಾರ್ಟ್‌ ಫೋನುಗಳನ್ನು ಖರೀದಿಸಲು ತೊಡಗಿದ್ದರು. ಈ ಅಲೆಯಲ್ಲಿ ಒಪ್ಪೋ ಹಾಗೂ ವಿವೋ ಈಜಿದವು. ಆದರೆ 2016ರ ಕೊನೆಯ ವೇಳೆಗೆ ಚೀನ ದಲ್ಲಿ ಸ್ಮಾರ್ಟ್‌ಫೋನ್‌ ಮಾರಾಟ ಪ್ರಮಾಣ ಇಳಿಮುಖವಾಗಲು ಆರಂಭವಾಗಿತ್ತು. ಆಗ ಇತರ ದೇಶಗಳಿಗೆ ಬಿಬಿಕೆ ಎಲೆಕ್ಟ್ರಾನಿಕ್ಸ್‌ ಕಾಲಿಟ್ಟಿತು. ಸದ್ಯ ಏಷ್ಯಾದ ಹಲವು ದೇಶಗಳಲ್ಲಿ ದುವಾನ್‌ ತಮ್ಮ ಅಸ್ತಿತ್ವ ಛಾಪಿಸಿದ್ದಾರೆ. ಪಾಕಿಸ್ಥಾನ, ಥಾಯ್ಲೆಂಡ್‌, ಫಿಲಿಪೀನ್ಸ್‌, ಮ್ಯಾನ್ಮಾರ್‌, ಮಲೇಷ್ಯಾ, ಇಂಡೋ ನೇಷ್ಯಾ, ಕಾಂಬೋಡಿಯಾ ಮತ್ತು ಬಾಂಗ್ಲಾದೇಶಗಳಲ್ಲಿ ಬಿಬಿಕೆ ಎಲೆಕ್ಟ್ರಾನಿಕ್ಸ್‌ ಸ್ಮಾಟ್‌ಫೋನ್‌ಗಳು ಮಾರಾಟವಾಗುತ್ತವೆ.

ಚೀನದಲ್ಲಿ ಆ್ಯಪಲ್‌ಗೇ ನಷ್ಟದ ರುಚಿ ತೋರಿಸಿದ ದುವಾನ್‌, ಎಂದಿಗೂ ಜನಪ್ರಿಯತೆ ಗೀಳಿಗೆ ಹೋಗಲಿಲ್ಲ. ಅಲಿಬಾಬಾ ಸಂಸ್ಥೆಯ ಜಾಕ್‌ ಮಾ ಸೇರಿದಂತೆ ಹಲವು ಉದ್ಯಮಿಗಳು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳಲು ಆರಂಭಿಸಿದ್ದಾರೆ. ಹೀಗಾಗಿ ಚೀನ ದ ಇಮೇಜ್‌ ಕೂಡ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬದಲಾಗುತ್ತಿದೆ. ಆದರೆ ಇಂದಿಗೂ ದುವಾನ್‌ ಬಗ್ಗೆ ಚೀನ  ಹೊರತುಪಡಿಸಿ ಪಾಶ್ಚಾತ್ಯ ದೇಶಗಳಲ್ಲಿ ಯಾರಿಗೂ ಗೊತ್ತಿಲ್ಲ. ಒಪೋ, ವಿವೋ ಹಾಗೂ ಒನ್‌ ಪ್ಲಸ್‌ ಕಂಪನಿಯ ಸಿಇಒಗಳೇ ಇಂದಿಗೂ ಬ್ರಾಂಡ್‌ ಅಂಬಾಸಿಡರ್‌ ಥರಾ ಇರುತ್ತಾರೆ. ಒನ್‌ ಪ್ಲಸ್‌ನ ಯಶಸ್ಸನ್ನು ಪೀಟ್‌ ಲಾವು ಮತ್ತು ಕಾರ್ಲ್ ಪೀ ತಲೆಗೆ ಕಟ್ಟಿ ತಾವು ಹೆಂಡತಿ ಮಕ್ಕಳೊಂದಿಗೆ ಹಾಯಾಗಿದ್ದಾರೆ ದುವಾನ್‌. ಮರೆಯಲ್ಲೇ ಇದ್ದುಕೊಂಡು ಹೊಸ ಹೊಸ ಫೀಚರ್‌ಗಳನ್ನು ಬಳಸುವ ಬಗ್ಗೆ ದುವಾನ್‌ ಯೋಚಿಸುತ್ತಾರೆ. ಕಂಪನಿಗಳ ಬೋರ್ಡ್‌ ಮೀಟಿಂಗ್‌ಗಳಲ್ಲಿ ಭಾಗವಹಿಸುತ್ತಾರೆ. ಹೀಗಾಗಿ ಇವರನ್ನು ಚೀನ ದ ಮಾಧ್ಯಮಗಳು ಚೀನ ದ ವಾರೆನ್‌ ಬಫೆಟ್‌ ಎಂದೇ ಕರೆಯುತ್ತವೆ. 

65 ವರ್ಷದ ದುವಾನ್‌ ಮಾಧ್ಯಮಗಳಿಗೆ ಸಂದರ್ಶನ ನೀಡುವುದೂ ಕಡಿಮೆಯೇ. 10 ವರ್ಷಗಳ ಹಿಂದೆ ಅವರು ಪತ್ರಿಕೆಯೊಂದಕ್ಕೆ ಸಂದರ್ಶನ ನೀಡಿದ್ದ ನಂತರ, ಈ ವರ್ಷ ಇಂಗ್ಲಿಷ್‌ ಪತ್ರಿಕೆಯೊಂದು ಅವರ ಸಂದರ್ಶನ ಮಾಡಿತ್ತು. ಆಗ ಆ್ಯಪಲ್‌ ಕಂಪನಿಯನ್ನು ಹೇಗೆ ನಾವು ಚೀನ ದಲ್ಲಿ ಮಣಿಸಿದೆವು ಎಂದು ಅವರು ವಿವರಿಸಿದ್ದಾರೆ. ಅಷ್ಟೇ ಅಲ್ಲ, ಆ್ಯಪಲ್‌ ಸಂಸ್ಥೆಯ ಮುಖ್ಯಸ್ಥರಾಗಿದ್ದ ಸ್ಟೀವ್‌ ಜಾಬ್ಸ್ ರನ್ನು ಈ ಹಿಂದೆ ಭೇಟಿ ಮಾಡಿದ್ದೆ. ಆದರೆ ಆಗ ಜಾಬ್ಸ್ಗೆ ನಾನು ಯಾರು ಎಂದು ಗೊತ್ತಿರಲಿಲ್ಲ ಎಂದು ದುವಾನ್‌ ಹೇಳಿಕೊಂಡಿದ್ದಾರೆ. 

ಆ್ಯಪಲ್‌ ಉನ್ನತ ಗುಣಮಟ್ಟದ ಫೋನ್‌ಗಳನ್ನು ಹೆಚ್ಚಿನ ಬೆಲೆಗೆ ಮಾರುತ್ತಿತ್ತು. ಆದರೆ ನಾವು ಕಡಿಮೆ ಬೆಲೆಗೆ ಉತ್ತಮ ಫೀಚರ್‌ ಇರುವ ಸ್ಮಾಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆವು. ಇದು ಐಫೋನ್‌ ಕೊಳ್ಳಲಾಗದ ಗ್ರಾಮೀಣ ಭಾಗದ ಹಾಗೂ ಮಧ್ಯಮ ವರ್ಗದ ಜನರಿಗೆ ಮೆಚ್ಚುಗೆಯಾಯಿತು. ಇದೇ ವೇಳೆ, ಹೈ ಎಂಡ್‌ ಫೋನ್‌ಗಳನ್ನೂ ಬಿಡುಗಡೆ ಮಾಡಿದೆವು. ಅದರ ಫೀಚರ್‌ಗಳೂ ಕೂಡ ಆ್ಯಪಲ್‌ಗೆ ಸರಿಸಾಟಿಯಾಗಿತ್ತು. ಇದೆಲ್ಲದರ ಜತೆಗೆ ದೇಶದ ಮೂಲೆಮೂಲೆಯಲ್ಲೂ ನಾವು ಮಾರಾಟಗಾರರನ್ನು ಹೊಂದಿದ್ದೆವು. ಅವರೊಂದಿಗೆ ಉತ್ತಮ ಸಂಬಂಧವನ್ನೂ ಬೆಳೆಸಿದ್ದೆವು. ಇಡೀ ಮಾರಾಟ ಜಾಲ ಆಫ್ಲೈನ್‌ ಆಗಿತ್ತು. ನಮ್ಮ ಮಟ್ಟಕ್ಕೆ ಆ್ಯಪಲ್‌ ಇಳಿಯಲು ಸಾಧ್ಯವಾಗಲಿಲ್ಲ.

ಯಾಕೆಂದರೆ ಚೀನ ದಲ್ಲಿ ಬೆಲೆ ಕಡಿಮೆ ಮಾಡಿದರೆ ಅಥವಾ ಭಿನ್ನ ಮಾರ್ಕೆಟಿಂಗ್‌ ಮಾದರಿಯನ್ನು ಅನುಸರಿಸಿದರೆ ಅದು ಇತರ ದೇಶಗಳ ಗ್ರಾಹಕರ ಮೇಲೆ ಪರಿಣಾಮ ಬೀರಬಹುದು ಎಂದು ಹೆದರಿತು ಎಂದು ಹೇಳಿಕೊಂಡಿದ್ದಾರೆ.
ಅದರಲ್ಲೂ ವಿಶೇಷವಾಗಿ ಚೀನ  ಅತ್ಯಂತ ನಿಯಂತ್ರಿತ ದೇಶ. ಯಾವುದೇ ಜಾಗತಿಕ ಕಂಪನಿಗಳು ಇತರ ದೇಶಗಳಂತೆ ಸಲೀಸಾಗಿ ತನ್ನ ಮಾರುಕಟ್ಟೆಯನ್ನು ವಿಸ್ತರಿಸಲು ಸಾಧ್ಯವಾಗದು. ಬಹುತೇಕ ತಂತ್ರಜ್ಞಾನ ಕಂಪನಿಗಳು ಚೀನ ದಲ್ಲಿ ಕೈಸುಟ್ಟುಕೊಂಡಿವೆ. ಟ್ವಿಟರ್‌ಗೆ ಸಿನಾ ವೀಬೋ, ಗೂಗಲ್‌ಗೆ ಬೈದು ಹಾಗೂ ಯೂಟ್ಯೂಬ್‌ಗ ಯೋಕು ಟುಡೋ ಪರ್ಯಾಯವಾಗಿವೆ. ಅಮೇಜಾನ್‌, ಈಬೇ, ನೆಟ್‌ಫ್ಲಿಕ್ಸ್‌, ಫೇಸ್‌ಬುಕ್‌ ಮತ್ತು ಉಬರ್‌ಗಳಿಗೆ ಚೀನ  ಪ್ರವೇಶಿಸುವುದಕ್ಕೇ ಸಾಧ್ಯವಾಗಿಲ್ಲ. ಇದೂ ಕೂಡ ದುವಾನ್‌ ಸೇರಿದಂತೆ ಚೀನ ದ ಉದ್ಯಮಿಗಳ ಯಶಸ್ಸಿಗೆ ನೆರವಾಗಿದ್ದು ಹೊಸ ಸಂಗತಿಯೇನಲ್ಲ.

– ಕೃಷ್ಣ ಭಟ್‌

Advertisement

Udayavani is now on Telegram. Click here to join our channel and stay updated with the latest news.

Next