ಬೀಜಿಂಗ್: ಚೀನದಲ್ಲಿ ಬೀಡುಬಿಟ್ಟಿದ್ದ ಅಮೆರಿಕದ ಕಂಪೆನಿಗಳೆಲ್ಲ, ಏಷ್ಯಾ ಖಂಡದ ಬೇರೆ ದೇಶಗಳತ್ತ ಮುಖ ಮಾಡುತ್ತಿವೆ. ಇದರಿಂದ ಹತಾಶೆಗೊಳಗಾಗಿರುವ ಚೀನ, ಭಾರತವೂ ಸೇರಿದಂತೆ ಏಶ್ಯಾದ ಇತರೆ ರಾಷ್ಟ್ರಗಳೊಂದಿಗೆ ಅನಗತ್ಯ ಕಿರಿಕ್ ಸೃಷ್ಟಿಸುತ್ತಿದೆ.
ಇತ್ತೀಚೆಗಷ್ಟೇ ಸಿಕ್ಕಿಂನ ನಾತು ಲಾ ಪಾಸ್ ಬಳಿಯ ಗಡಿಯಲ್ಲಿ ಚೀನ ಮತ್ತು ಭಾರತೀಯ ಸೈನಿಕರ ನಡುವೆ ಸಂಘರ್ಷ ನಡೆದಿತ್ತು. ಇತ್ತ ಲಡಾಖ್ ಭೂಭಾಗದ ಮೇಲೂ ಚೀನ ಯುದ್ಧ ವಿಮಾನಗಳನ್ನು ಹಾರಿಸಿ, ಗುಟುರು ಹಾಕುತ್ತಿದೆ. ಕೇವಲ ಭಾರತ ಮಾತ್ರ ವಲ್ಲ, ಇಂಡೋನೇಶ್ಯಾ, ವಿಯೆಟ್ನಾಂ, ತೈವಾನ್ ಮತ್ತು ಮಲೇಶ್ಯಾ ಜತೆಗೂ ಚೀನ ಇದೇ ರೀತಿ ಕಾಲುಕೆರೆದು ಜಗಳಕ್ಕೆ ಬರುತ್ತಿದೆ.
ಇತ್ತೀಚೆಗಷ್ಟೇ ವಿಯೆಟ್ನಾಂನ ಮೀನುಗಾರಿಕಾ ದೋಣಿಯನ್ನು ಚೈನಾ ಕೋಸ್ಟ್ ಗಾರ್ಡ್ ಹೊಡೆದುರುಳಿಸಿ, ಮೀನುಗಾರರನ್ನು ವಶಕ್ಕೆ ತೆಗೆದುಕೊಂಡಿದೆ. ಕಳೆದ ಕೆಲವು ದಿನಗಳಿಂದ ಇಂಡೋನೇಶ್ಯಾದ ಸುತ್ತ ಚೀನದ ಸೇನಾ ಹಡಗುಗಳು ಸುತ್ತಾಡುತ್ತಿದ್ದು, ಆ ದೇಶದ ಮೂವರು ಮೀನುಗಾರರನ್ನು ಚೀನ ಸೈನಿಕರು ಸಾಯಿಸಿದ್ದಾರೆ ಎನ್ನಲಾಗಿದೆ. ಇನ್ನೊಂದೆಡೆ ದಕ್ಷಿಣ ಚೀನ ಸಮುದ್ರದಲ್ಲಿ ನೌಕಾ ಡ್ರಿಲ್ ನಡೆಸಿ, ಸಮೀಪದ ರಾಷ್ಟ್ರಗಳಿಗೆ ಆತಂಕವನ್ನೂ ಹುಟ್ಟಿಸುತ್ತಿದೆ.
ನುಂಗಲಾರದ ತುತ್ತು: ಚೀನ ಹೀಗೆಲ್ಲ ನಡೆದುಕೊಳ್ಳಲು,ಕೋವಿಡ್ ನಂತರದ ಸ್ಥಿತಿಯೇ ಕಾರಣ ಎನ್ನಲಾಗುತ್ತಿದೆ. ಕಳೆದ ಕೆಲವು ವಾರಗಳಿಂದ ಏಶ್ಯಾದ ಬಹುತೇಕ ರಾಷ್ಟ್ರಗಳ ಮಾರುಕಟ್ಟೆಯಲ್ಲಿ ಹೊಸ ಅಲೆ ಸೃಷ್ಟಿಯಾಗುತ್ತಿದೆ. ಭಾರತವೂ ಸೇರಿದಂತೆ ಇತರೆ ದಕ್ಷಿಣ ಏಶ್ಯಾ ರಾಷ್ಟ್ರಗಳಲ್ಲಿ ಚೀನ ತನ್ನದೇ ಮಾರುಕಟ್ಟೆ ಸ್ಥಾಪಿಸಿತ್ತು.
ಆದರೆ ಈಗ ಅಂಥ ರಾಷ್ಟ್ರಗಳತ್ತಲೇ, ತನ್ನಲ್ಲಿದ್ದ ಕಂಪೆನಿಗಳು ವಲಸೆ ಹೋಗುತ್ತಿವೆ. ತನ್ನ ಉತ್ಪನ್ನಗಳನ್ನು ನೆರೆರಾಷ್ಟ್ರಗಳು ತಿರಸ್ಕರಿಸುತ್ತಿವೆ ಎನ್ನುವುದು ಕಮ್ಯುನಿಸ್ಟ್ ರಾಷ್ಟ್ರಕ್ಕೆ ನುಂಗಲಾರದ ತುತ್ತಾಗಿದೆ.
ಮಸೂದೆ ಪರಿಶೀಲಿಸುವೆ: ಅಧ್ಯಕ್ಷ ಟ್ರಂಪ್
ಅಮೆರಿಕ ಸಂಸತ್‌ನಲ್ಲಿ ಮಂಡಿಸಲಾಗಿರುವ ‘ಕೋವಿಡ್-19 ಉತ್ತರದಾಯಿತ್ವ ಕಾಯ್ದೆ’ ಕುರಿತಾದ ಮಸೂದೆಯ ಬಗ್ಗೆ ಪರಿಶೀಲನೆ ನಡೆಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.
ಬುಧವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಖಂಡಿತವಾಗಿಯೂ ಈ ಬಗ್ಗೆ ಪರಿಶೀಲನೆ ನಡೆಸುತ್ತೇನೆ. ಈ ಮಸೂದೆ, ತನಿಖೆಗೆ ಸಹಕಾರ ನೀಡದಿದ್ದರೆ ಚೀನ ವಿರುದ್ಧ ನಿರ್ಬಂಧ ಹೇರುವ ಕುರಿತಾಗಿದೆ. ನಾನಿನ್ನೂ ಅದನ್ನು ನೋಡಿಲ್ಲ’ ಎಂದರು.