ಬೀಜಿಂಗ್/ಹೊಸದಿಲ್ಲಿ: ಭಾರತ- ಚೀನ ಗಡಿ ವಿವಾದ ಸ್ವಲ್ಪ ಮಟ್ಟಿಗೆ ತಣ್ಣಗಾಗುತ್ತಿದೆ ಅಂದುಕೊಳ್ಳುವಷ್ಟರಲ್ಲೇ ಡೋಕ್ಲಾಮ್ ಪ್ರಸ್ಥಭೂಮಿ ಪ್ರದೇಶದಲ್ಲಿ ಮತ್ತೆ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ. ಚೀನದ ಪೀಪಲ್ಸ್ ಲಿಬರೇಷನ್ ಆರ್ಮಿ (ಪಿಎಲ್‌ಎ) ಗಡಿಯ ಪಶ್ಚಿಮ ಭಾಗದಲ್ಲಿ ತಾಲೀಮು ನಡೆಸಿರುವುದು ಉದ್ವಿಗ್ನ ಸ್ಥಿತಿಗೆ ಕಾರಣವಾಗಿದೆ. ಆದರೆ ತಾಲೀಮು ಎಂದು, ಯಾವ ಸಮಯದಲ್ಲಿ ನಡೆಸಲಾಗಿದೆ ಎನ್ನುವುದರ ಬಗ್ಗೆ ಮಾಹಿತಿ ನೀಡಿಲ್ಲ. ಈಗ ಭಾರತ ಸೇನೆಯೂ ಗಡಿಯಲ್ಲಿ ಹದ್ದಿನ ಕಣ್ಣಿಟ್ಟಿದ್ದು, ಎಲ್ಲ ಸಾಧ್ಯತೆಗಳನ್ನು ಎದುರಿಸಲು ಸಿದ್ಧವಾಗಿದೆ. ಅಷ್ಟಕ್ಕೂ ಚೀನ ಮತ್ತೆ ಈಗ ಕಾಲ್ಕೆರೆದಿರುವುದು ಯಾಕೆ ಎನ್ನುವುದಕ್ಕೂ ಕಾರಣ ಸಿಕ್ಕಿದೆ. ‘ಭಾರತಕ್ಕೆ ಭಯ ಹುಟ್ಟಿಸಲಿಕ್ಕಾಗಿ ಈ ತಾಲೀಮು’ ಎಂದು ಸ್ವತಃ ಚೀನದ ಸೇನಾ ತಜ್ಞರೊಬ್ಬರು ದಿನಪತ್ರಿಕೆಗೆ ಹೇಳಿಕೆ ನೀಡಿದ್ದಾರೆ. ಇದರಿಂದ ಚೀನ ಉದ್ದೇಶವೂ ಈಗ ಬಹಿರಂಗಗೊಂಡಂತಾಗಿದೆ.
ಈ ನಡುವೆ, ಆ. 15ರಂದು ಪ್ಯಾಂಗಾಂಗ್ ಸರೋವರ ಭಾಗದಲ್ಲಿ ಗಡಿಯಿಂದ ಒಳನುಸುಳಿ, ಭಾರತೀಯ ಯೋಧರ ಮೇಲೆ ಕಲ್ಲು ತೂರಿದ ಪ್ರಕರಣದ ಬಗ್ಗೆ ಭಾರತ ಖಂಡಿಸಿದ ಬಗ್ಗೆಯೂ ಪ್ರತಿಕ್ರಿಯಿಸಿ ಭಾರತೀಯ ಯೋಧರ ಮೇಲೆ ಗೂಬೆ ಕೂರಿಸಿದೆ. ಭಾರತೀಯ ಯೋಧರ ಕ್ರಮ ಸಂಘರ್ಷ ಪ್ರಚೋದಿತವಾಗಿದೆ ಎಂದು ಹೇಳಿದೆ. ಚೀನದ ಈ ಬುದ್ಧಿಯನ್ನು ಗೊತ್ತುಮಾಡಿಕೊಂಡಿರುವ ಭಾರತ ಇದೇ ಕಾರಣಕ್ಕಾಗಿಯೇ ಇದಕ್ಕೆ ಸಾಕ್ಷ್ಯ ಎಂಬಂತೆ ಒಳನುಸುಳಿ, ಕಲ್ಲು ತೂರಿರುವ ವೀಡಿಯೋವನ್ನು ಬಿಡುಗಡೆ ಮಾಡಿತ್ತು.
ಈಗ ಮತ್ತೆ ತಾಲೀಮು ನಡೆಸಿರುವ ಬಗ್ಗೆ ಪ್ರತಿಕ್ರಿಯಿಸಿರುವ ಚೀನ, ಭಾರತೀಯ ಸೇನೆಯ ಜತೆ ಯಾವುದೇ ಸಂಘರ್ಷಕ್ಕೆ ಸಿದ್ಧ ಎನ್ನುವ ಸಂದೇಶ ರವಾನಿಸಲಿಕ್ಕಾಗಿಯೇ ತಾಲೀಮು ನಡೆಸಿದ್ದು ಎಂದು ಹೇಳಿದೆ. ಕಳೆದ 3 ತಿಂಗಳಿಂದ ಉಭಯ ದೇಶಗಳು ಡೋಕ್ಲಾಮ್‌ನ ಗಡಿಯಲ್ಲಿ ಭಾರೀ ಪ್ರಮಾಣದಲ್ಲಿಯೇ ಸೇನೆ ನಿಯೋಜನೆ ಮಾಡಿದ್ದು, ಯಾವುದೇ ಕ್ಷಣದಲ್ಲಿ ಯುದ್ಧಕ್ಕೂ ಸಿದ್ಧವಾಗಿ ನಿಂತಿವೆ. ಈಗಾಗಲೇ ಡೋಕ್ಲಾಮ್‌ನ ವಿವಾದಿತ ಪ್ರದೇಶ ರಾಜಧಾನಿಯಾದ ಠಿಂಪುಗೆ ಸೇರಿದ್ದು ಎಂದು ನೆರೆಯ ಭೂತಾನ್ ಕೂಡ ಹೇಳಿಕೊಂಡಿದೆ.
ಶಾಂತಿ ಬಯಸುತ್ತೇವೆ, ಯುದ್ಧವನ್ನಲ್ಲ: ರಾಜನಾಥ್
ಡೋಕ್ಲಾಮ್‌ನಲ್ಲಿ ಚೀನದ ಕ್ಯಾತೆ ಎಲ್ಲೆ ಮೀರುತ್ತಿರುವ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ‘ಚೀನ ಜತೆಗಿನ ಗಡಿ ವಿವಾದ ಶೀಘ್ರ ಬಗೆಹರಿಯಲಿದೆ. ಭಾರತ ಶಾಂತಿ ಬಯಸುತ್ತದೆಯೇ ಹೊರತು ಯುದ್ಧವನ್ನಲ್ಲ. ಚೀನ ಶಾಂತಿ ಮಾರ್ಗದಲ್ಲಿಯೇ ವಿವಾದ ಬಗೆಹರಿಸಿಕೊಳ್ಳಲು ಹೆಜ್ಜೆಗಳನ್ನಿಡುತ್ತದೆನ್ನುವ ವಿಶ್ವಾಸವಿದೆ’ ಎಂದು ಹೇಳಿದ್ದಾರೆ.