ಬೀಜಿಂಗ್:ಚೀನಾ ಸರ್ಕಾರಿ ಸ್ವಾಮಿತ್ವದ ಸಿಚುವಾನ್ ಏರ್ ಲೈನ್ಸ್ 15 ದಿನಗಳ ಕಾಲ ಭಾರತಕ್ಕೆ ಸಂಚರಿಸಲಿರುವ ತನ್ನ ಎಲ್ಲಾ ಸರಕು ಸಾಗಣೆ ವಿಮಾನಗಳ ಪ್ರಯಾಣ ರದ್ದುಗೊಳಿಸಿದೆ. ಇದರಿಂದಾಗಿ ದೇಶದಲ್ಲಿ ತೀವ್ರಗತಿಯಲ್ಲಿ ಹೆಚ್ಚಳವಾಗುತ್ತಿರುವ ಕೋವಿಡ್ 19 ಸೋಂಕು ತಡೆಗಟ್ಟುವ ಪ್ರಯತ್ನಕ್ಕೆ ಹಾಗೂ ತುರ್ತು ಅಗತ್ಯದ ಆಮ್ಲಜನಕ, ವೈದ್ಯಕೀಯ ಉಪಕರಣಗಳ ಖರೀದಿಯ ಅವಕಾಶಕ್ಕೆ ತೊಡಕುಂಟಾದಂತಾಗಿದೆ.
ಇದನ್ನೂ ಓದಿ:ಸರ್ಕಾರಿ ನೌಕರರ ಸಂಬಳ ಕಡಿತದ ಸುದ್ದಿ ಸತ್ಯಕ್ಕೆ ದೂರವಾದ ಮಾತು : ಸಿ.ಎಸ್. ಷಡಕ್ಷರಿ
ಸಿಚುವಾನ್ ಏರ್ ಲೈನ್ಸ್ ನ ಸಿಚುವಾನ್ ಚುವಾನ್ ಹಾಂಗ್ ಲಾಜಿಸ್ಟಿಕ್ಸ್ ಕಂಪನಿ ಸೋಮವಾರ(ಏ.26) ಸೇಲ್ಸ್ಏಜೆಂಟರುಗಳಿಗೆ ಬರೆದ ಪತ್ರದಲ್ಲಿ, ಕ್ಸಿಯಾನ್ ನಿಂದ ದೆಹಲಿ ಸೇರಿದಂತೆ ಆರು ಮಾರ್ಗಗಳ ಸರಕು ಸಾಗಣೆ ವಿಮಾನ ಸಂಚಾರವನ್ನು ರದ್ದುಗೊಳಿಸಿರುವುದಾಗಿ ತಿಳಿಸಿದೆ.
ಭಾರತದಲ್ಲಿ ಸಾಂಕ್ರಾಮಿಕ ರೋಗದ ಸ್ಥಿತಿ ಉಲ್ಬಣಗೊಂಡಿದ್ದು, ಈ ನಿಟ್ಟಿನಲ್ಲಿ ಮುಂದಿನ 15 ದಿನಗಳ ಕಾಲ ಸರಕು ಸಾಗಣೆ ವಿಮಾನ ಸಂಚಾರವನ್ನು ಸ್ಥಗಿತಗೊಳಿಸಲು ನಿರ್ಧರಿಸಿರುವುದಾಗಿ ಸಿಚುವಾನ್ ಏರ್ ಲೈನ್ಸ್ ಹೇಳಿದೆ. ಭಾರತಕ್ಕೆ ಸರಕು ಸಾಗಣೆ ವಿಮಾನ ಸಂಚಾರ ರದ್ದುಪಡಿಸಿರುವುದರಿಂದ ನಮ್ಮ ಸಂಸ್ಥೆಗೆ ಭಾರಿ ನಷ್ಟ ಉಂಟುಮಾಡಿರುವುದಾಗಿಯೂ ವಿವರಿಸಿದೆ.
ಭಾರತದಲ್ಲಿ ಕೋವಿಡ್ ಪರಿಸ್ಥಿತಿ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಸೋಂಕು ನಿಯಂತ್ರಣಕ್ಕೆ ಸಂಬಂಧಿಸಿದಂತೆ ನೆರವು ನೀಡುವುದಾಗಿಯೂ ಚೀನಾ ಈ ಸಂದರ್ಭದಲ್ಲಿ ಪುನರುಚ್ಚರಿಸಿದೆ. ನೆರವಿನ ಮಾತುಕತೆ ನಡುವೆಯೇ ತುರ್ತು ಅಗತ್ಯದ ವೈದ್ಯಕೀಯ ಉಪಕರಣ ಸೇರಿದಂತೆ ಇನ್ನಿತರ ಸರಕುಗಳ ಸಾಗಣೆಯ ವಿಮಾನ ಸಂಚಾರ ರದ್ದುಗೊಳಿಸಿರುವುದು ಚೀನಾದ ದ್ವಂದ್ವ ನಿಲುವಾಗಿದೆ ಎಂದು ವರದಿ ಟೀಕಿಸಿದೆ.