ಒಂದು ದಿನ ಇದ್ದಕ್ಕಿದ್ದಂತೆ ಜಿಂಕೆಮರಿಯೊಂದು ಕಾಣೆಯಾಗಿ ಹೋಯಿತು. ಯಾರೂ ಎಷ್ಟೇ ಹುಡುಕಿದರೂ ಜಿಂಕೆ ಮರಿ ಮಾತ್ರ ಸಿಗಲಿಲ್ಲ. ಎಲ್ಲೋ ತಪ್ಪಿಸಿಕೊಂಡು ಹೋಗಿರಬಹುದೆಂದೆನಿಸಿ ಎಲ್ಲ ಪ್ರಾಣಿಗಳು ನಿಶ್ಚಿಂತೆಯಿಂದ ಇದ್ದವು. ಆದರೆ ಸಮಸ್ಯೆ ಅಲ್ಲಿಗೆ ಮುಗಿಯಲಿಲ್ಲ. ಅನಂತರದ ದಿನಗಳಲ್ಲಿ ಸಣ್ಣ ಪುಟ್ಟ ಪ್ರಾಣಿಗಳು ಕಾಣೆಯಾಗುವುದು ಸಾಮಾನ್ಯವಾದ ವಿಷಯವಾಗತೊಡಗಿತು.
ದಂಡಕಾರಣ್ಯ ಕಾಡಿನಲ್ಲಿ ಎಲ್ಲ ಪ್ರಾಣಿಗಳೂ ಒಗ್ಗಟ್ಟಿನಿಂದ ಇರುತ್ತಿದ್ದವು. ಆಹಾರಗಳನ್ನು ಬೇಟೆಯಾಡಲು ಪಕ್ಕದ ಕಾಡಿಗೆ ಹೋಗುತ್ತಿದ್ದವು. ಅಲ್ಲಿಗೆ ಸತತವಾದ ಇವರ ಭೇಟಿ ಆ ಕಾಡಿನ ಪ್ರಾಣಿಗಳನ್ನು ತೊಂದರೆಗೀಡಾಗುವಂತೆ ಮಾಡಿತ್ತು. ಅಲ್ಲಿನ ಪ್ರಾಣಿಗಳು ಪ್ರತಿಕ್ಷಣ ಭಯದಿಂದ ಬದುಕುತ್ತಿದ್ದವು. ಚಿನಕುರುಳಿ ಎಂಬ ಮೊಲ ದಂಡಕಾರಣ್ಯದಲ್ಲಿ ವಾಸವಿದ್ದು ಎಲ್ಲ ಪ್ರಾಣಿಗಳ ಉತ್ತಮ ಸ್ನೇಹಿತನಾಗಿತ್ತು. ಚಿನಕುರುಳಿಯ ಸತತ ಪ್ರಯತ್ನದಿಂದಾಗಿ ದಂಡಕಾರಣ್ಯದ ಪ್ರಾಣಿಗಳು ಹಾಗೂ ಪಕ್ಕದ ಕಾಡಿನ ಪ್ರಾಣಿಗಳು ಉತ್ತಮ ಸ್ನೇಹಿತರಾದವು. ಒಬ್ಬರಿಗೊಬ್ಬರಿಗೆ ಅಪಾಯದ ಸಂದರ್ಭದಲ್ಲಿ ಸಹಾಯ ಮಾಡಲು ಆರಂಭಿಸಿದವು.
ದಂಡಕಾರಣ್ಯದಲ್ಲಿ ಒಂದು ದಿನ ಇದ್ದಕ್ಕಿದ್ದಂತೆ ಜಿಂಕೆಮರಿಯೊಂದು ಕಾಣೆಯಾಗಿ ಹೋಯಿತು. ಯಾರೂ ಎಷ್ಟೇ ಹುಡುಕಿದರೂ ಜಿಂಕೆ ಮರಿ ಮಾತ್ರ ಸಿಗಲಿಲ್ಲ. ಎಲ್ಲೋ ತಪ್ಪಿಸಿಕೊಂಡು ಹೋಗಿರಬಹುದೆಂದೆನಿಸಿ ಎಲ್ಲ ಪ್ರಾಣಿಗಳು ನಿಶ್ಚಿಂತೆಯಿಂದ ಇದ್ದವು. ಆದರೆ ಸಮಸ್ಯೆ ಅಲ್ಲಿಗೆ ಮುಗಿಯಲಿಲ್ಲ. ಅನಂತರದ ದಿನಗಳಲ್ಲಿ ಸಣ್ಣ ಪುಟ್ಟ ಪ್ರಾಣಿಗಳೂ ಕಾಣೆಯಾಗುವುದು ಸಾಮಾನ್ಯವಾದ ವಿಷಯವಾಗತೊಡಗಿತು. ಆಗಲೇ ದಂಡಾಕಾರಣ್ಯದ ಪ್ರಾಣಿಗಳಿಗೆ ಶತ್ರುಗಳ ಮುನ್ಸೂಚನೆ ಲಭಿಸಿತು. ಅವರ ಅನುಮಾನಗಳು ಮೊದಲು ತಿರುಗಿದ್ದೇ ಪಕ್ಕದ ಕಾಡಿನ ಮೇಲೆ. ಸ್ನೇಹಿತರಂತೆ ನಾಟಕವಾಡುತ್ತಾ ತಮ್ಮ ಬಳಗದವರನ್ನು ಬೇಟೆಯಾಡುತ್ತಿದ್ದಾರೆಂದು ಅವುಗಳು ಅನುಮಾನಿಸಿದವು. ಸುದ್ದಿಗಳು ಹರಡುತ್ತಾ ಹೋದಂತೆ ಅನುಮಾನವನ್ನು ನಿಜವೆಂದೇ ಎಲ್ಲ ಪ್ರಾಣಿಗಳೂ ನಂಬಿದವು. ಹೀಗೆ ಅನುಮಾನಗಳು ಬೆಳೆಯುತ್ತಾ ಹೋದಂತೆ ಜಗಳಗಳೂ ಪ್ರಾರಂಭವಾದವು. ದಂಡಕಾರಣ್ಯದ ಪ್ರಾಣಿಗಳು ಮತ್ತೆ ಪಕ್ಕದ ಕಾಡಿಗೆ ಹೋಗಿ ಬೇಟೆಯಾಡತೊಡಗಿದವು. ಶಾಂತವಾಗಿದ್ದ ಕಾಡಿನಲ್ಲಿ ಮತ್ತೆ ಜಗಳಗಳು ಪ್ರಾರಂಭವಾದವು. ಬೇಟೆಗೆ ಪ್ರಾಣಿಗಳೆಲ್ಲಾ ಬೆಚ್ಚಿ ಬಿದ್ದವು. ಅದರೆ ಚಿನಕುರುಳಿ ಮೊಲ ಮಾತ್ರ ಈ ಘಟನೆಯಿಂದ ತುಂಬಾ ಆಘಾತಕ್ಕೀಡಾಯಿತು. ಅದಕ್ಕೆ ತಮ್ಮ ನಡುವೆಯೇ ಯಾರೋ ಈ ಕೆಲಸವನ್ನು ಮಾಡಿದ್ದಾರೆಂದು ನಂಬಲು ಅಸಾಧ್ಯವಾಗಿತ್ತು. ಆದರೆ ಈ ಮಾತನ್ನು ದಂಡಕಾರಣ್ಯದ ಪ್ರಾಣಿಗಳಿಗೆ ಹೇಳಿದರೆ ಅವು ನಂಬಲು ಸಿದ್ಧರಿರಲಿಲ್ಲ. ಕೊನೆಗೆ ಏನಾದರೊಂದು ಉಪಾಯ ಮಾಡಲೇ ಬೇಕೆಂದು ತೀರ್ಮಾನಿಸಿತು. ತಮ್ಮ ಕಾಡಿಗೆ ಬಂದು ಒಡನಾಡಿಗಳನ್ನು ಬೇಟೆಯಾಡುವ ಆ ಕಳ್ಳನನ್ನು ಪತ್ತೆಹಚ್ಚಲು ಮೊಲ ತೀರ್ಮಾನಿಸಿತು. ಅದಕ್ಕಾಗಿ ಹಗಲು ರಾತ್ರಿ ಕಾಡಿನಲ್ಲಿ ಸುತ್ತಾಡತೊಡಗಿತು. ಆದರೆ ಬೇಟೆ ಪ್ರತಿದಿನವೂ ಮುಂದುವರಿಯುತ್ತಿತ್ತು.
ಒಂದು ದಿನ ನರಿಯೊಂದು ಕಳ್ಳ ಹೆಜ್ಜೆಗಳನ್ನಿಡುತ್ತಾ ಬಂದು ಕಾಡಿನಲ್ಲಿ ತಿರುಗುತ್ತಿದ್ದ ಸಣ್ಣ ಸಣ್ಣ ಪ್ರಾಣಿಗಳಲ್ಲಿ ಒಂದನ್ನು ಹಿಡಿದುಕೊಂಡು ಓಡಿತು. ಅಲ್ಲಿಗೆ ಮೊಲಕ್ಕೆ ಸತ್ಯ ತಿಳಿಯಿತು. ಹೊರಗಿನಿಂದ ಬಂದ ನರಿಯೊಂದು ಎರಡು ಕಾಡುಗಳ ಮಧ್ಯೆ ಜಗಳವನ್ನು ತಂದಿಟ್ಟ ವಿಷಯ ತಿಳಿದು ಮೊಲ ಅದನ್ನು ಬಹಿರಂಗಗೊಳಿಸಲು ತೀರ್ಮಾನಿಸಿತು. ಎರಡೂ ಕಾಡಿನ ರಾಜರನ್ನು ಮರುದಿವಸ ನರಿ ಬರುವ ಹೊತ್ತಿಗೆ ಅಲ್ಲಿಗೆ ಕರೆದುಕೊಂಡು ಬಂದು ಮರೆಯಲ್ಲಿ ನಿಂತು ನರಿಯ ಕೆಲಸವನ್ನು ತೋರಿಸಿತು. ನರಿ ಇನ್ನೇನು ಒಂದು ಜಿಂಕೆ ಮರಿಯನ್ನು ಹಿಡಿಯಬೇಕೆನ್ನುವಷ್ಟರಲ್ಲಿ ಎರಡು ಸಿಂಹಗಳು ನರಿಯ ಮೇಲೆ ಹಾರಿ ಅದನ್ನು ಸಾಯಿಸಿದವು. ಎರಡೂ ಕಾಡಿನ ಪ್ರಾಣಿಗಳಿಗೂ ನಿಜ ತಿಳಿದು ಮಾಡಿದ ತಪ್ಪಿಗೆ ಒಬ್ಬರನ್ನೊಬ್ಬರು ಕ್ಷಮೆ ಯಾಚಿಸಿದವು. ಇದಕ್ಕೆಲ್ಲಾ ಸಹಾಯ ಮಾಡಿದ ಚಿನಕುರುಳಿ ಮೊಲವನ್ನು ಎಲ್ಲವೂ ಅಭಿನಂದಿಸಿದವು.
- ಸುಶ್ಮಿತಾ ಶೆಟ್ಟಿ ಸಿರಿಬಾಗಿಲು