ನವದೆಹಲಿ: ಭಾರತ ಮತ್ತು ಚೀನಾ ನಡುವೆ ಭಾರೀ ಸಂಘರ್ಷಕ್ಕೆ ಕಾರಣವಾಗಿದ್ದ ಗಾಲ್ವಾನ್ ಕಣಿವೆ ಪ್ರದೇಶದ ಬಿಕ್ಕಟ್ಟಿನ ವಿಚಾರದಲ್ಲಿ ಇದೀಗ ಆಶಾದಾಯಕ ಬೆಳವಣಿಗೆ ನಡೆದಿದೆ. ಗಾಲ್ವಾನ್ ಕಣಿವೆ ಪ್ರದೇಶದಲ್ಲಿ ಬೀಡು ಬಿಟ್ಟಿದ್ದ ಚೀನಾ ಸೈನಿಕರು ಸುಮಾರು ಒಂದು ಕಿಲೋ ಮೀಟರ್ ನಷ್ಟು ದೂರ ಸರಿದಿರುವುದಾಗಿ ಮೂಲಗಳು ತಿಳಿಸಿವೆ.
ಜೂನ್ 15ರಂದು ಪೂರ್ವ ಲಡಾಖ್ ನ ಗಾಲ್ವಾನ್ ನದಿ ಕಣಿವೆ ಪ್ರದೇಶದಲ್ಲಿ ಭಾರತೀಯ ಸೈನಿಕರ ಮೇಲೆ ಏಕಾಏಕಿ ಕಲ್ಲು, ಕಬ್ಬಿಣದ ರಾಡ್ ಗಳಿಂದ ಹಲ್ಲೆ ನಡೆಸಿದ ಪರಿಣಾಮ ಇಪ್ಪತ್ತು ಯೋಧರು ಹುತಾತ್ಮರಾಗಿದ್ದರು. ಈ ಘಟನೆ ನಂತರ ಭಾರತ ಮತ್ತು ಚೀನಾ ನಡುವೆ ಉದ್ವಿಗ್ನ ಪರಿಸ್ಥಿತಿ ತಲೆದೋರಿದ್ದು, ಯುದ್ಧದ ಹಂತದವರೆಗೆ ತಲುಪಿತ್ತು ಎಂದು ಮೂಲಗಳು ಹೇಳಿವೆ.
ಗಾಲ್ವಾನ್ ನದಿ ಕಣಿವೆ ಪ್ರದೇಶವನ್ನು ಚೀನಾ ಸೈನಿಕರು ಅಕ್ರಮವಾಗಿ ವಶಪಡಿಸಿಕೊಂಡು ತಾತ್ಕಾಲಿಕವಾಗಿ ನಿರ್ಮಿಸಿದ್ದ ಟೆಂಟ್ ಗಳನ್ನು ತೆಗೆದು ಹಾಕಿರುವುದಾಗಿ ವರದಿ ವಿವರಿಸಿದೆ. ನಿಜಕ್ಕೂ ಚೀನಾ ಸೇನೆ ಹಿಂದೆ ಸರಿದಿದೆಯೇ ಎಂಬ ಬಗ್ಗೆ ನಾವು ಮತ್ತೊಮ್ಮೆ ಕೂಲಂಕಷವಾಗಿ ಪರಿಶೀಲನೆ ನಡೆಸಬೇಕಾಗಿದೆ ಎಂದು ಉನ್ನತ ಮೂಲಗಳು ತಿಳಿಸಿರುವುದಾಗಿ ಮಾಧ್ಯಮ ವರದಿ ವಿವರಿಸಿದೆ.
ಲಡಾಖ್ ನ ಫಾರ್ವರ್ಡ್ ಪೋಸ್ಟ್ ಗೆ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ದಿಢೀರ್ ಎಂದು ಅಚ್ಚರಿಯ ಭೇಟಿ ನೀಡಿದ ಮೂರು ದಿನಗಳ ನಂತರ ಕಳೆದ 24ಗಂಟೆಯಲ್ಲಿ ಆಕ್ರಮಿತ ಪ್ರದೇಶದಿಂದ ಚೀನಾ ಸೇನೆ ಹಿಂದೆ ಸರಿದಿರುವುದಾಗಿ ವರದಿ ತಿಳಿಸಿದೆ.
ಭಾರತ ಮತ್ತು ಚೀನಾ ನಡುವಿನ ಸಂಘರ್ಷ, ಉದ್ವಿಗ್ನ ಪರಿಸ್ಥಿತಿ ಶಮನಗೊಳಿಸಲು ಉಭಯ ದೇಶಗಳ ನಡುವೆ ಹಲವು ಸುತ್ತಿನ ರಾಜತಾಂತ್ರಿಕ ಹಾಗೂ ಸೇನಾ ಕಮಾಂಡರ್ ಮಟ್ಟದಲ್ಲಿ ಮಾತುಕತೆ ನಡೆದಿತ್ತು. ಆದರೂ ಚೀನಾ ಸೇನೆಯನ್ನು ಹಿಂದೆ ತೆಗೆಯಲು ನಿರಾಕರಿಸಿತ್ತು. ಚೀನಾಗೆ ಸಡ್ಡು ಹೊಡೆಯುವ ನಿಟ್ಟಿನಲ್ಲಿ ಗಾಲ್ವಾನ್ ಸಂಘರ್ಷದ ನಂತರ ಚೀನಾ ಮೂಲದ ಸುಮಾರು 58 ಆ್ಯಪ್ಸ್ ಗಳನ್ನು ನಿಷೇಧಿಸಿತ್ತು. ಅಷ್ಟೇ ಅಲ್ಲ ಮೂಲಭೂತ ಸೌಕರ್ಯಗಳ ಕೆಲಸದಲ್ಲಿ ಚೀನಾ ಕಂಪನಿಗಳ ಜತೆಗಿನ ಒಪ್ಪಂದವನ್ನು ಭಾರತ ಸರ್ಕಾರ ರದ್ದುಗೊಳಿಸಿತ್ತು.