ಚೆನ್ನೈ: ಅಂಡಮಾನ್ ನಿಕೋಬಾರ್ ದ್ವೀಪ ಭಾಗದಲ್ಲಿ ಚೀನಾ ಭಾರತೀಯ ಜಲ ಪ್ರದೇಶಗಳಲ್ಲಿರುವ ನಮ್ಮ ನೌಕಾ ನೆಲೆಗಳ ಮೇಲೆ ಗೂಢಚರ್ಯೆ ನಡೆಸುತ್ತಿದೆ ಎಂಬ ಆತಂಕಕಾರಿ ಮಾಹಿತಿಯನ್ನು ಗುಪ್ತಚರ ಏಜೆನ್ಸಿ ಮಾಹಿತಿಗಳು ಬಹಿರಂಗಗೊಳಿಸಿವೆ.
ಈ ಭಾಗದಲ್ಲಿರುವ ಭಾರತದ ಜಲಪ್ರದೇಶದಲ್ಲಿರುವ ನೌಕಾನೆಲೆಗಳಲ್ಲಿ ಭಾರತ ನೆಲೆಗೊಳಿಸಿರುವ ಯುದ್ಧ ನೌಕೆಗಳ ಕುರಿತಾಗಿ ಮಾಹಿತಿಯನ್ನು ಸಂಗ್ರಹಿಸುವ ದುರುದ್ದೇಶದಿಂದ ಚೀನಾವು ಆಗಾಗ್ಗೆ ಕಣ್ಗಾವಲು ನೌಕೆಗಳನ್ನು ಭಾರತೀಯ ಜಲ ಪ್ರದೇಶಗಳತ್ತ ಕಳುಹಿಸುತ್ತಿದೆ ಎಂಬ ಮಾಹಿತಿ ಕೇಂದ್ರ ಗುಪ್ತಚರ ಇಲಾಖೆ ಕಲೆಹಾಕಿರುವ ಮಾಹಿತಿಗಳಿಂದ ಬಹಿರಂಗಗೊಂಡಿದೆ,
ಖಾಸಗಿ ವೆಬ್ ಸೈಟ್ ಒಂದಕ್ಕೆ ಲಭಿಸಿರುವ ಮಾಹಿತಿಯಂತೆ ಚೀನಾದ ನೌಕಾದಳವು ಇತ್ತೀಚೆಗಷ್ಟೇ ‘ಟಿಯಾನ್ ವಾಂಗ್ ಕ್ಸಿಂಗ್’ ಎಂಬ ಹೆಸರಿನ ಅತ್ಯಾಧುನಿಕ ತಂತ್ರಜ್ಞಾನದ ಗೂಢಚಾರಿ ನೌಕೆಯನ್ನು ಭಾರತೀಯ ಜಲಪ್ರದೇಶದಲ್ಲಿ ನಿಯೋಜನೆಗೊಳಿಸಿ ಮಾಹಿತಿ ಕಲೆ ಹಾಕುವ ಕೆಲಸವನ್ನು ಮಾಡಿತ್ತು ಎಂದು ತಿಳಿದುಬಂದಿದೆ.
ಭಾರತದ ಎಕ್ಸ್ ಕ್ಲೂಸಿವ್ ಎಕನಾಮಿಕ್ ಝೋನ್ ನೊಳಗೆ ಪ್ರವೇಶಿಸಿದ್ದ ಚೀನಾದ ಗೂಢಚಾರ ನೌಕೆ ಇಲ್ಲಿ ಕೆಲವು ಸಮಯಗಳವರೆಗೆ ತಂಗಿತ್ತು ಎಂಬ ಮಾಹಿತಿಯೂ ಇದೀಗ ಲಭಿಸಿದೆ. ಅಂಡಮಾನ್ ನಿಕೋಬಾರ್ ದ್ವೀಪದ ಸಮೀಪದಲ್ಲಿ ಪೂರ್ವ ಸಮುದ್ರದ ಗಡಿಪ್ರದೇಶಕ್ಕೆ ತುಂಬಾ ಸನಿಹದಲ್ಲಿ ಈ ನೌಕೆ ಕಾಣಿಸಿಕೊಂಡಿತ್ತು.
ಭಾರತದ ನೌಕಾದಳಕ್ಕೆ ಸಂಬಂಧಪಟ್ಟಂತೆ ಅಂಡಮಾನ್ ನಿಕೋಬಾರ್ ದ್ವೀಪಭಾಗವು ತುಂಬಾ ಸೂಕ್ಷ್ಮವಾಗಿರುವ ಹಾಗೂ ಬಹಳ ಪ್ರಾಮುಖ್ಯತೆಯನ್ನು ಹೊಂದಿರುವ ನೆಲೆಯಾಗಿದೆ. ಪೋರ್ಟ್ ಬ್ಲೇರ್ ಕೆಂದ್ರವಾಗಿರುವಂತೆ ಇದು ಭಾರತೀಯ ಸಶಸ್ತ್ರ ಪಡೆಗಳ ಮೊತ್ತಮೊದಲ ಮತ್ತು ಏಕಮಾತ್ರ ತ್ರಿ-ಸೇವಾ ಥಿಯೇಟರ್ ಕಮಾಂಡ್ ನೆಲೆ ಇದಾಗಿದೆ.
815ಜಿ ಮಾದರಿಯ ‘ಟಿಯಾನ್ ವಾಂಗ್ ಕ್ಸಿಂಗ್’ ಗೂಢಚಾರ ನೌಕೆಯಲ್ಲಿ ಅತ್ಯಾಧುನಿಕ ಮಾದರಿಯ ವಿದ್ಯನ್ಮಾನ ಗೂಢಚಾರಿಕೆ ಉಪಕರಣಗಳಿವೆ. ಈ ರೀತಿಯಾಗಿ ಶತ್ರು ದೇಶವೊಂದರ ಅತ್ಯಾಧುನಿಕ ಮಾದರಿಯ ಗೂಢಚಾರಿ ನೌಕೆಯೊಂದು ನಮ್ಮ ದೇಶದ ಜಲಪ್ರದೇಶವನ್ನು ಪ್ರವೇಶಿಸಿರುವುದು ನಮ್ಮ ರಕ್ಷಣಾ ವ್ಯವಸ್ಥೆ ಕಳವಳಪಡುವ ವಿಚಾರವಾಗಿದೆ.