ಬೆಂಗಳೂರು: ‘ನಮ್ಮ ಮೆಟ್ರೋ’ ಎರಡನೇ ಹಂತದ ಕಾಮಗಾರಿ ಚುರುಕುಗೊಂಡಿದ್ದು, ಸುರಂಗ ಕೊರೆಯಲು ಟನಲ್ ಬೋರಿಂಗ್ ಮಷಿನ್ (ಟಿಬಿಎಂ)ಗಳು ಚೀನಾದಿಂದ ತರಲು ನಿರ್ಧರಿಸಲಾಗಿದೆ. ಅಂದುಕೊಂಡಂತೆ ಎಲ್ಲವೂ ನಡೆದರೆ, ಡಿಸೆಂಬರ್ ಹೊತ್ತಿಗೆ ಭೂಮಿ ಕೊರೆಯುವ ಕೆಲಸ ಆರಂಭವಾಗಲಿದೆ.
ವೆಲ್ಲಾರ ಜಂಕ್ಷನ್‌ನಿಂದ ಟ್ಯಾನರಿ ರಸ್ತೆ ಮಧ್ಯೆ ಮೆಟ್ರೋ ಸುರಂಗ ಮಾರ್ಗ ನಿರ್ಮಾಣಕ್ಕೆ ಪೂರ್ವಸಿದ್ಧತೆಗಳು ಮುಗದಿವೆ. ಕಾಮಗಾರಿ ಗುತ್ತಿಗೆ ಪಡೆದ ಎಲ್ ಆಂಡ್ ಟಿ ಕಂಪೆನಿಯು ಇದಕ್ಕೆ ಅಗತ್ಯ ಇರುವ ಟಿಬಿಎಂಗಳನ್ನು ಚೀನಾದಿಂದ ತರಲಿದೆ. ಮೊದಲ ಹಂತದಲ್ಲಿ ನಾಲ್ಕು ಮತ್ತು ಎರಡನೇ ಹಂತದಲ್ಲಿ ಉಳಿದ ಐದು ಯಂತ್ರಗಳು ಬಂದಿಳಿಯಲಿವೆ. ಈ ಸಂಬಂಧದ ಪ್ರಕ್ರಿಯೆ ಬಹುತೇಕ ಪೂರ್ಣಗೊಂಡಿದೆ ಎಂದು ಹೇಳಲಾಗಿದೆ.
ಈ ಯಂತ್ರಗಳು ಕಾರ್ಯಾಚರಣೆ ಆರಂಭಗೊಂಡ ದಿನದಿಂದ ಸುಮಾರು ಎರಡೂವರೆಯಿಂದ ಮೂರು ವರ್ಷಗಳಲ್ಲಿ ಸುರಂಗ ಕೊರೆಯುವ ಕಾರ್ಯವನ್ನು ಮಾಡಿಮುಗಿಸಲಿವೆ. ಇನ್ನು ಬರಲಿರುವ ನಾಲ್ಕೂ ಯಂತ್ರಗಳು ಸ್ವಲ್ಪ ಭಿನ್ನವಾಗಿದ್ದು, ಸುರಂಗ ಕೊರೆದಂತೆ ಹೊರಬರುವ ಮಣ್ಣನ್ನು ನೀರಿನೊಂದಿಗೆ ಪೈಪ್‌ಗ್ಳ ಮೂಲಕ ಹೊರಹಾಕುವ ವ್ಯವಸ್ಥೆ ಇದರಲ್ಲಿ ಇರಲಿದೆ. ಟಿಬಿಎಂನ ಕಟರ್‌ಹೆಡ್‌ನಲ್ಲಿ 10 ಇಂಚಿನ ಪೈಪ್ ಜೋಡಣೆ ಮಾಡಲಾಗಿರುತ್ತದೆ. ಅದರ ಮೂಲಕ ಮಣ್ಣುಮಿಶ್ರಿತ ನೀರು ಹೊರಬರುತ್ತದೆ. ನಂತರ ಇದನ್ನು ಕಾಮಗಾರಿ ನಡೆಯುವ ಜಾಗದಲ್ಲಿನ ಘಟಕಕ್ಕೆ ಮತ್ತೂಂದು ಪೈಪ್‌ಮೂಲಕ ರವಾನಿಸಲಾಗುತ್ತದೆ. ಇದರಿಂದ ಪ್ರತಿ ಬಾರಿ ಸುರಂಗದಿಂದ ಮಣ್ಣನ್ನು ಹೊತ್ತುಹಾಕುವ ಕಿರಿಕಿರಿ ಇರುವುದಿಲ್ಲ.
ನಿತ್ಯ 80 ಟ್ರಿಪ್ ಮಣ್ಣು ಸಾಗಣೆ: ನಿತ್ಯ ಬೆಂಗಳೂರಿನಂತಹ ಭೌಗೋಳಿಕ ಪ್ರದೇಶದಲ್ಲಿ ಯಾವೊಂದು ಟಿಬಿಎಂ ಸುರಂಗ ಕೊರೆದಾಗ ಸರಾಸರಿ 810 ಕ್ಯುಬಿಕ್ ಮೀಟರ್‌ನಷ್ಟು ಮಣ್ಣು ಉತ್ಪತ್ತಿಯಾಗುತ್ತದೆ. ಅದನ್ನು ಲೂಪ್‌ನಲ್ಲಿ ತುಂಬಿ ಹೊರಹಾಕಲಾಗುತ್ತದೆ. ಪ್ರತಿ ದಿನ 80 ಟ್ರಿಪ್‌ಗ್ಳಲ್ಲಿ ಹೀಗೆ ಮಣ್ಣು ಸಾಗಿಸಬೇಕಾಗುತ್ತದೆ. ಆರಂಭದಲ್ಲಿ ಇದು ಅಷ್ಟೇನೂ ಸಮಸ್ಯೆ ಆಗುವುದಿಲ್ಲ. ಆದರೆ, ದಿನಗಳೆದಂತೆ ಟಿಬಿಎಂ ಮುಂದೆ ಸಾಗುತ್ತದೆ. ಬೆನ್ನಲ್ಲೇ ಮಣ್ಣು ಸಾಗಿಸುವ ಮಾರ್ಗದ ಅಂತರ ಹೆಚ್ಚಾಗುತ್ತದೆ. ಇದಕ್ಕೆ ತುಸು ಸಮಯ ಹಿಡಿಯುತ್ತದೆ. ಹೊಸದಾಗಿ ಬರುವ ನಾಲ್ಕೂ ಟಿಬಿಎಂಗಳಲ್ಲಿ ಈ ಶ್ರಮ ಇರುವುದಿಲ್ಲ. ಒಂದು ಟಿಬಿಎಂಗೆ ಸುಮಾರು 65ರಿಂದ 70 ಕೋಟಿ ರೂ. ಆಗುತ್ತದೆ. ಮೆಟ್ರೋ ಮೊದಲ ಹಂತದಲ್ಲಿ ಮಾರ್ಗರೇಟ್ ಮತ್ತು ಹೆಲನ್ ಟಿಬಿಎಂಗಳು ಈ ವ್ಯವಸ್ಥೆಯನ್ನು ಒಳಗೊಂಡಿದ್ದವು. ಈ ಎರಡೂ ಯಂತ್ರಗಳು ಕಬ್ಬನ್ ಉದ್ಯಾನದಿಂದ ಸಿಟಿ ರೈಲು ನಿಲ್ದಾಣ (ಹೆಲನ್) ಮತ್ತು ಕೆಂಪೇಗೌಡ ಮೆಟ್ರೋ ನಿಲ್ದಾಣದಿಂದ ಮಂತ್ರಿಸ್ಕ್ವೇರ್ (ಮಾರ್ಗರೇಟ್) ನಡುವೆ ಕಾರ್ಯನಿರ್ವಹಿಸಿದ್ದವು. ಅಂದಹಾಗೆ ಮೊದಲ ಹಂತದಲ್ಲಿ ಜರ್ಮನಿ, ಜಪಾನ್, ಇಟಲಿ, ಅಮೆರಿಕದಿಂದ ಒಟ್ಟಾರೆ ಆರು ಟಿಬಿಎಂಗಳನ್ನು ಆಮದು ಮಾಡಿಕೊಳ್ಳಲಾಗಿತ್ತು. ಅವುಗಳಿಗೆ ಕಾವೇರಿ, ಕೃಷ್ಣ, ಮಾರ್ಗರೇಟ್, ಹೆಲನ್, ರಾಬಿನ್ಸ್, ಗೋದಾವರಿ ಎಂದು ನಾಮಕರಣ ಮಾಡಲಾಗಿತ್ತು. ಇವುಗಳ ಮರುಬಳಕೆ ಅನುಮಾನೆ. ಯಾಕೆಂದರೆ, ಮೊದಲ ಹಂತದಲ್ಲಿ ಗುತ್ತಿಗೆ ಪಡೆದ ಕಂಪನಿಗಳು ಸಿಇಸಿ ಮತ್ತು ಕೋಸ್ಟಲ್. ಅಲ್ಲದೆ, ಈ ಟಿಬಿಎಂಗಳು ಹಲವು ಬಾರಿ ದುರಸ್ತಿಗೊಂಡಿವೆ.