ಇಂಫಾಲ್: ಮ್ಯಾನ್ಮಾರ್ ಗಡಿಯಲ್ಲಿ ಬರುವ ಮಣಿಪುರದಲ್ಲಿ ಶನಿವಾರ ನಡೆದ ಉಗ್ರರ ಪೈಶಾಚಿಕ ದಾಳಿಯ ಹಿಂದೆ ಚೀನದ ಕೈವಾಡವಿದೆಯೇ?
ಇಂಥದ್ದೊಂದು ಅನುಮಾನ ಈಗ ಮೂಡಿದೆ. ಭಾರತದೊಂದಿಗೆ ಗಡಿಯಲ್ಲಿ ಕ್ಯಾತೆ ತೆಗೆಯುತ್ತಿರುವ ನೆರೆರಾಷ್ಟ್ರವು ದೇಶದ ಈಶಾನ್ಯ ಭಾಗದಲ್ಲಿ ಉಗ್ರವಾದಕ್ಕೆ ನೆರವು ನೀಡುವುದನ್ನು ಮತ್ತೆ ಶುರುವಿಟ್ಟುಕೊಂಡಿದೆ ಎಂದು ಭದ್ರತಾ ಅಧಿಕಾರಿಗಳು ಶಂಕಿಸಿದ್ದಾರೆ.
ಅಸ್ಸಾಂ ರೈಫಲ್ಸ್‌ನ ಕರ್ನಲ್ ತ್ರಿಪಾಠಿ, ಅವರ ಪತ್ನಿ, ಪುತ್ರ ಹಾಗೂ ನಾಲ್ವರು ಯೋಧರನ್ನು ಉಗ್ರರು ಎಲ್‌ಇಡಿ ಸ್ಫೋಟಿಸಿ ಮತ್ತು ಗುಂಡಿನ ಮಳೆಗರೆದು ಹತ್ಯೆಗೈದ ಬೆನ್ನಲ್ಲೇ ಈ ಅನುಮಾನಗಳು ಕಾಡತೊಡಗಿವೆ. ಬಂಡುಕೋರರ ಗುಂಪಿನೊಂದಿಗೆ ಚೀನದ ನಂಟು ಇದು ಮೊದಲೇನಲ್ಲ. 2020ರ ಅಕ್ಟೋಬರ್‌ನಲ್ಲಿ ತೈವಾನ್ ಜತೆ ಭಾರತವು ವ್ಯಾಪಾರ ಒಪ್ಪಂದ ಮಾಡಿಕೊಂಡಾಗ ಚೀನವು, “ಈ ಒಪ್ಪಂದ ಮುಂದುವರಿದಿದ್ದೇ ಆದಲ್ಲಿ ಭಾರತದ ಈಶಾನ್ಯ ಭಾಗದ ಉಗ್ರಗಾಮಿ ಸಂಘಟನೆಗಳಿಗೆ ಬೆಂಬಲ ನೀಡುವ ಮೂಲಕ ಪ್ರತಿಕಾರ ತೀರಿಸಲಾಗುತ್ತದೆ’ ಎಂದು ಬೆದರಿಕೆಯೊಡ್ಡಿತ್ತು. ಅಲ್ಲದೇ, ಈ ಹಿಂದೆ ಉಲ್ಫಾ ಕಮಾಂಡರ್ ಪರೇಶ್ ಬರುವಾ, ನ್ಯಾಶ ನಲ್ ಸೋಶಿಯಲಿಸ್ಟ್ ಕೌನ್ಸಿಲ್ ಆಫ್ ನಾಗಾಲ್ಯಾಂಡ್‌ನ ಫುಂಟಿಂಗ್ ಶಿಮ್ರಾಂಗ್ ಮತ್ತಿತರ ತೀವ್ರಗಾಮಿ ನಾಯಕರಿಗೆ ಚೀನ ಆಶ್ರಯ ನೀಡಿತ್ತು. ಎಲ್‌ಎಸಿಯಲ್ಲಿನ ಸಂಘರ್ಷದ ಬಳಿಕ ಮಣಿಪುರದಲ್ಲಿನ ಉಗ್ರಗಾಮಿ ಸಂಘಟನೆಗಳೊಂದಿಗೆ ಸ್ನೇಹ ಬೆಳೆಸಿಕೊಂಡು ಈಶಾನ್ಯದಲ್ಲಿ ಅಸ್ಥಿರತೆ ಸೃಷ್ಟಿಸುವುದು ಚೀನದ ಷಡ್ಯಂತ್ರವಾಗಿರಬಹುದು ಎಂದು ಮೂಲಗಳು ಹೇಳಿವೆ.
ಮಗನ ಹುಟ್ಟುಹಬ್ಬಕ್ಕೆ ಬರುತ್ತೇನೆ ಎಂದಿದ್ದರು!
ಶನಿವಾರ ಹುತಾತ್ಮರಾದ ಯೋಧ ಸುಮನ್ ಸ್ವರ್ಗೀಯರಿ ಅವರು ಡಿಸೆಂ ಬರ್‌ನಲ್ಲಿ ತಮ್ಮ ಮನೆಗೆ ತೆರಳುವವರಿದ್ದರು. ತಮ್ಮ ಮಗನ 3ನೇ ವರ್ಷದ ಜನ್ಮದಿನವನ್ನು ಒಟ್ಟಿಗೇ ಆಚರಿಸೋಣ. ನಾನೂ ಅಂದು ಊರಿಗೆ ಬರುತ್ತೇನೆ ಎಂದು ಅವರು ಹೇಳಿದ್ದರು. ಸಾವಿಗೀಡಾಗುವ 1 ಗಂಟೆಗೆ ಮುಂಚೆ ಪತ್ನಿಯೊಂದಿಗೆ ಫೋನ್‌ನಲ್ಲಿ ಮಾತನಾಡಿದ್ದರು ಎಂದು ಹೇಳುತ್ತಾ ಕುಟುಂಬ ಸದಸ್ಯರು ಕಣ್ಣೀರು ಹಾಕಿದ್ದಾರೆ.