Advertisement

ಕೃತಕ ಸೂರ್ಯ ಪ್ರಯೋಗದಲ್ಲಿ ಚೀನ ವಿಜ್ಞಾನಿಗಳ ಹೊಸ ದಾಖಲೆ

02:17 AM Jun 05, 2021 | Team Udayavani |

ಬೀಜಿಂಗ್‌: ಕೃತಕ ಸೂರ್ಯನನ್ನು ಸೃಷ್ಟಿಸಲು ಚೀನ ವಿಜ್ಞಾನಿಗಳು ದಶಕಗಳಿಂದ ನಡೆಸುತ್ತಿದ್ದ ಪ್ರಯೋಗದಲ್ಲಿ ಆಶಾಕಿರಣವೊಂದು ಮೂಡಿ ಬಂದಿದೆ. ಕೃತಕ ಸೂರ್ಯನ ಸೃಷ್ಟಿಗೆ ಎಕ್ಸ್‌ ಪೆರಿಮೆಂಟಲ್‌ ಅಡ್ವಾನ್ಸ್‌ಡ್‌ ಸೂಪರ್‌ ಕಂಡಕ್ಟಿಂಗ್‌ ಟೋಕಮ್ಯಾಕ್‌ (ಈಸ್ಟ್‌) ಎಂಬ ಪ್ರಯೋಗವನ್ನು ವಿಜ್ಞಾನಿಗಳು ಕೈಗೊಂಡಿದ್ದಾರೆ.

Advertisement

ಪರಮಾಣು ಸಮ್ಮಿಲನ (ನ್ಯೂಕ್ಲಿಯರ್‌ ಫ್ಯೂಷನ್‌) ತಂತ್ರದಡಿ ಈ ಪ್ರಯೋಗ ನಡೆಸಲಾಗುತ್ತಿದೆ. ಇತ್ತೀಚೆಗೆ, ಈ ಪ್ರಯೋಗದಲ್ಲಿ ಬಳಸಲಾಗುವ ಪ್ಲಾಸ್ಮಾವು 101 ಸೆಕೆಂಡ್‌ಗಳ ಕಾಲ ಉರಿದು 120 ಮಿಲಿಯನ್‌ ಡಿಗ್ರಿ ಸೆಲ್ಸಿಯಸ್‌ನಷ್ಟು ಶಾಖವನ್ನು ಉತ್ಪಾದಿಸಿದೆ. ಅನಂತರ, 20 ಸೆಕೆಂಡ್‌ ಹೆಚ್ಚುವರಿಯಾಗಿ ಉರಿದ ಪ್ಲಾಸ್ಮಾ, ಸೂರ್ಯನಿಗಿಂತ 10 ಪಟ್ಟು ಶಾಖವನ್ನು ಅಂದರೆ, 160 ಮಿಲಿಯನ್‌ ಡಿಗ್ರಿ ಸೆಲ್ಸಿಯಸ್‌ನಷ್ಟು ಶಾಖ ಉತ್ಪಾದಿಸಿದೆ.

ಮಹತ್ವವೇನು?: ಕೃತಕ ಸೂರ್ಯನನ್ನು ಸೃಷ್ಟಿಸುವ ಉದ್ದೇಶದಿಂದ ಈವರೆಗೆ ನಡೆದಿರುವ ಹಲವು ಪ್ರಯೋಗಗಳಲ್ಲಿ ಈ ಮಟ್ಟಿಗಿನ ಯಶಸ್ಸು ಸಿಕ್ಕಿರಲಿಲ್ಲ. 2017ರಲ್ಲಿ ದೊಡ್ಡ ಮಟ್ಟದಲ್ಲಿ ಪ್ಲಾಸ್ಮಾವನ್ನು ಉರಿಸಿದರೂ, ಕೇವಲ 50 ಡಿಗ್ರಿ ಸೆಲ್ಸಿಯಸ್‌ನಷ್ಟು ಶಾಖವನ್ನು ಮಾತ್ರ ಉತ್ಪಾದಿಸಲಾಗಿತ್ತು. 2018ರಲ್ಲಿ 101 ಡಿಗ್ರಿ ಸೆಲ್ಸಿಯಸ್‌ನಷ್ಟು ಶಾಖ ಉತ್ಪಾದಿಸುವಲ್ಲಿ ವಿಜ್ಞಾನಿಗಳು ಯಶಸ್ವಿಯಾದರಾದರೂ, ಅದಕ್ಕೆ ಬಳಸಲಾಗಿದ್ದ ಹೇರಳ ಪ್ರಮಾಣದ ಪ್ಲಾಸ್ಮಾ ಮಾತ್ರ ಕೇವಲ 10 ಸೆಕೆಂಡ್‌ಗಳಲ್ಲಿ ಉರಿದು ಖಾಲಿಯಾಗಿತ್ತು. ಇದೇ ಮೊದಲ ಬಾರಿಗೆ, 101 ಸೆಕೆಂಡ್‌ಗಳವರೆಗೆ ಪ್ಲಾಸ್ಲಾ ನಿಧಾನವಾಗಿ ಉರಿದಿದೆ. ಜತೆಗೆ ಸೂರ್ಯನಿಗಿಂತ 10 ಪಟ್ಟು ಹೆಚ್ಚು ಶಾಖ ಉತ್ಪತ್ತಿಯಾಗಿದೆ. ಹಾಗಾಗಿ ಈ ಪ್ರಯೋಗದಲ್ಲಿ ಇದೊಂದು ಮೈಲುಗಲ್ಲು ಎನ್ನಬಹುದು.

ಏಕೆ ಈ ಪ್ರಯೋಗ?
ಸೀಮಿತವಾದ ಪರಮಾಣು ತ್ಯಾಜ್ಯಗಳನ್ನು ಬಳಸಿ ಸೂರ್ಯನಿಂದ ಹೆಚ್ಚು ಬೆಳಕು, ಶಾಖವನ್ನು ದೀರ್ಘ‌ಕಾಲ ಪಡೆಯುವಂತೆ ಮಾಡುವ ವಿಧಾನ ಆವಿಷ್ಕರಿಸಲು ಚೀನ ಪ್ರಯತ್ನಿಸುತ್ತಿದೆ. ಸದರ್ನ್ ಯೂನಿವರ್ಸಿಟಿ ಆಫ್ ಸೈನ್ಸ್‌ ಆ್ಯಂಡ್‌ ಟೆಕ್ನಾಲಜಿಯ ತಜ್ಞರು ಈ ಪ್ರಯೋಗ ನಡೆಸುತ್ತಿದ್ದಾರೆ. ಈಗ 101 ಸೆಕೆಂಡ್‌ ಪ್ಲಾಸ್ಮಾ ಉರಿದಿದ್ದಕ್ಕೆ ವಿಜ್ಞಾನಿಗಳು ದೊಡ್ಡ ಮೈಲುಗಲ್ಲನ್ನು ಸಾಧಿಸಿರುವ ಬಗ್ಗೆ ಖುಷಿಯಾಗಿದ್ದಾರೆ. ಆದರೆ ತಜ್ಞರು ಈ ಬಗ್ಗೆ ಈಗಲೇ ಖುಷಿ ಪಡುವ ಹಾಗಿಲ್ಲ. ಕೃತಕ ಸೂರ್ಯನನ್ನು ಸಾಧಿಸಲು ಇನ್ನೂ ದೀರ್ಘ‌ಕಾಲದ ಪ್ರಯಾಣ ಮುಂದುವರಿಸಬೇಕಾಗಿದೆ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next