ಹೊಸದಿಲ್ಲಿ: ಪೂರ್ವ ಲಡಾಖ್ ನ ಗಾಲ್ವಾನ್ ಕಣಿವೆಯಲ್ಲಿ ನಡೆದ ಇಂಡೋ- ಚೈನಾ ಯೋಧರ ಘರ್ಷಣೆಯ ತರುವಾಯ ಉಭಯ ದೇಶಗಳ ನಡುವೆ ಮಾತುಕತೆ ನಡೆದಿದ್ದು, ಇಬ್ಬರು ಮೇಜರ್ ಸೇರಿದಂತೆ ಹತ್ತು ಮಂದಿ ಭಾರತೀಯ ಯೋಧರನ್ನು ಚೀನಾ ಬಿಡುಗಡೆಗೊಳಿಸಿದೆ ಎಂದು ವರದಿಯಾಗಿದೆ.
ವರದಿಗಳ ಪ್ರಕಾರ, ಭಾರತೀಯ ಸೇನೆ ಮತ್ತು ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ ಗಳ ಮೇಜರ್ ಜನರಲ್ ಹಂತದ ಸತತ ಮಾತುಕತೆಯ ನಂತರ ಈ ನಿರ್ಧಾರ ಕೈಗೊಳ್ಳಲಾಗಿದೆ. ಗುರುವಾರ ಸಂಜೆಯ ವೇಳೆ ಹತ್ತು ಭಾರತೀಯ ಯೋಧರನ್ನು ಬಿಡುಗಡೆ ಮಾಡಲಾಗಿದೆ ಎನ್ನಲಾಗಿದೆ. ಆದರೆ ಅಧಿಕಾರಿಗಳ ಅಧಿಕೃತ ಹೇಳಿಕೆ ಇನ್ನಷ್ಟೇ ಹೊರಬೀಳಬೇಕಾಗಿದೆ.
ಗಾಲ್ವಾನ್ ಕಣಿವೆಯಲ್ಲಿ ನಡೆದ ಸಂಘರ್ಷದ ವಿಚಾರವನ್ನು ಸೇನೆ ಗಂಭೀರವಾಗಿ ಪರಿಗಣಿಸಿದೆ. ಸಂಘರ್ಷದ ವೇಳೆ ಯಾವುದೇ ಭಾರತೀಯ ಯೋಧರು ನಾಪತ್ತೆಯಾಗಿಲ್ಲ ಎಂದು ಗುರುವಾರ ಸೇನೆ ತನ್ನ ಹೇಳಿಕೆಯಲ್ಲಿ ನೀಡಿತ್ತು. ಆದರೆ ಹತ್ತು ಯೋಧರನ್ನು ಚೀನಾ ಬಿಡುಗಡೆ ಮಾಡಿದೆ ಎಂದು ವರದಿಗಳು ಉಲ್ಲೇಖಿಸುತ್ತಿದೆ.
ಮತ್ತೊಂದು ವರದಿಯ ಪ್ರಕಾರ, ಸೋಮವಾರ ನಡೆದ ಗಾಲ್ವಾನ್ ಘರ್ಷಣೆಯಲ್ಲಿ 76 ಭಾರತೀಯ ಸೈನಿಕರು ಗಾಯಗೊಂಡಿದ್ದರು. ಅದರಲ್ಲಿ 18 ಮಂದಿ ಸೈನಿಕರಿಗೆ ಗಂಭೀರ ಪ್ರಮಾಣದ ಗಾಯಗಳಾಗಿದ್ದು, ಉಳಿದ 58 ಮಂದಿ ಸೈನಿಕರು ಅಲ್ಪ ಪ್ರಮಾಣದ ಗಾಯಗಳಾಗಿದೆ. 18 ಸೈನಿಕರು ಲೇಹ್ ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇತರರಿಗೆ ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಇದನ್ನೂ ಓದಿ: ಭಾರತ-ಚೀನಾ ಗಡಿ ಸಂಘರ್ಷ: ಇಂದು ಸರ್ವಪಕ್ಷ ಸಭೆ, ತೀವ್ರ ಕುತೂಹಲ ಮೂಡಿಸಿದ ಪ್ರಧಾನಿ ಮೋದಿ ನಡೆ
1967ರ ನಾಥು ಲಾ ಪಾಸ್ ಸಂಘರ್ಷದ ಬಳಿಕ ಉಭಯ ದೇಶಗಳ ನಡುವೆ ನಡೆದ ಅತೋ ದೊಡ್ಡ ಸಂಘರ್ಷ ಇದೆನ್ನಲಾಗುತ್ತಿದೆ. ನಾಥು ಲಾ ಸಂಘರ್ಷದಲ್ಲಿ ಭಾರತೀಯ ಸೇನೆ 8 ಸೈನಿಕರನ್ನು ಕಳೆದುಕೊಂಡಿದ್ದರೆ, ಚೀನಾದ 300 ಕ್ಕೂ ಹೆಚ್ಚು ಸೈನಿಕರು ಭಾರತೀಯ ಯೋಧರ ಕೈಯಲ್ಲಿ ಹತ್ಯೆಯಾಗಿದ್ದರು.