ಬೀಜಿಂಗ್: ಚೀನದಲ್ಲಿ ಕೊರೊನಾ ಅಟ್ಟಹಾಸ ಮರುಕಳಿಸಿದ ಬಳಿಕ ಒಂದೇ ತಿಂಗಳ ಅವಧಿಯಲ್ಲಿ 60 ಸಾವಿರ ಮಂದಿ ಸೋಂಕಿಗೆ ಬಲಿಯಾಗಿದ್ದಾರೆ!
ಚೀನ ಸರ್ಕಾರವು ಕೊರೊನಾ ಸೋಂಕಿತರು ಹಾಗೂ ಮೃತರ ಸಂಖ್ಯೆಯನ್ನು ಮುಚ್ಚಿಡುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಇತ್ತೀಚೆಗಷ್ಟೇ ವಿಶ್ವ ಆರೋಗ್ಯ ಸಂಸ್ಥೆಯು ದೈನಂದಿನ ಮಾಹಿತಿಯನ್ನು ಬಹಿರಂಗಪಡಿಸಲೇಬೇಕು ಎಂದು ತಾಕೀತು ಮಾಡಿತ್ತು.
ಅದರಂತೆ, ಇದೇ ಮೊದಲ ಬಾರಿಗೆ ಚೀನಾ ಬಾಯಿಬಿಟ್ಟಿದೆ. 2022ರ ಡಿ.9ರಿಂದ 2023ರ ಜ.12ರವರೆಗೆ 60 ಸಾವಿರ ಮಂದಿ ಕೊರೊನಾದಿಂದ ಮೃತಪಟ್ಟಿದ್ದಾರೆ ಎಂದು ಚೀನ ಸರ್ಕಾರ ಮಾಹಿತಿ ನೀಡಿದೆ.
ಈ ಪೈಕಿ 5,503 ಮಂದಿ ಉಸಿರಾಟದ ಸಮಸ್ಯೆಯಿಂದ ಅಸುನೀಗಿದರೆ, 54,435 ಮಂದಿ ಕೊರೊನಾದೊಂದಿಗೆ ಇತರೆ ಕಾಯಿಲೆಗಳು ಉಲ್ಬಣಗೊಂಡು ಮೃತಪಟ್ಟಿದ್ದಾರೆ ಎಂದು ಚೀನದ ರಾಷ್ಟ್ರೀಯ ಆರೋಗ್ಯ ಆಯೋಗ ತಿಳಿಸಿದೆ.
ಅಲ್ಲದೆ, ಇದು ಕೇವಲ ಆಸ್ಪತ್ರೆಯಲ್ಲಿ ಮೃತಪಟ್ಟಿರುವವರ ದತ್ತಾಂಶವಾಗಿದ್ದು, ಮನೆಯಲ್ಲಿ ಕೊನೆಯುಸಿರೆಳೆದವರ ಮಾಹಿತಿಯನ್ನು ಸೇರಿಸಿಲ್ಲ ಎಂದೂ ಸ್ಪಷ್ಟಪಡಿಸಿದೆ. ಹೀಗಾಗಿ, ಚೀನದಲ್ಲಿ ಕೊರೊನಾಗೆ ಬಲಿಯಾದವರ ಸಂಖ್ಯೆ ವಾಸ್ತವದಲ್ಲಿ ಮತ್ತಷ್ಟು ಹೆಚ್ಚಿರುವ ಸಾಧ್ಯತೆಯಿದೆ. 60 ಸಾವಿರ ಮಂದಿಯ ಪೈಕಿ ಶೇ.90ರಷ್ಟು ಮಂದಿ 65 ವರ್ಷ ದಾಟಿದವರು ಎಂದೂ ಹೇಳಲಾಗಿದೆ.
90 ಕೋಟಿ ಮಂದಿಗೆ ಸೋಂಕು!
ಜ.11ರವರೆಗೆ ಚೀನದಲ್ಲಿ ಬರೋಬ್ಬರಿ 90 ಕೋಟಿ ಮಂದಿಗೆ ಕೊರೊನಾ ಸೋಂಕು ತಗುಲಿದೆ. ಅಂದರೆ, ದೇಶದ ಒಟ್ಟು ಜನಸಂಖ್ಯೆಯ ಶೇ.60ರಷ್ಟು ಮಂದಿ ಸೋಂಕಿತರಾಗಿದ್ದಾರೆ ಎಂದು ಚೀನದ ಪೆಕಿಂಗ್ ವಿವಿ ಅಧ್ಯಯನ ವರದಿ ತಿಳಿಸಿದೆ. ಸೋಂಕಿನ ಉತ್ತುಂಗದ ಅವಧಿ ಇನ್ನೂ 2-3 ತಿಂಗಳು ಮುಂದುವರಿಯಲಿದೆ. ಗ್ರಾಮೀಣ ಭಾಗದಲ್ಲಿ ಭಾರೀ ಪ್ರಮಾಣದಲ್ಲಿ ಸೋಂಕು ವ್ಯಾಪಿಸಲಿದೆ ಎಂದೂ ವರದಿ ಹೇಳಿದೆ.