ಹಾಂಗ್ ಕಾಂಗ್: ಕಳೆದ ಒಂದು ವಾರದಲ್ಲಿ ಕೋವಿಡ್ 19 ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಚೀನಾ 11 ಪ್ರಾಂತ್ಯಗಳಲ್ಲಿ ಮತ್ತೆ ಲಾಕ್ ಡೌನ್ ಜಾರಿಗೊಳಿಸಿರುವುದಾಗಿ ಮಂಗಳವಾರ(ಅಕ್ಟೋಬರ್ 26)ವರದಿ ತಿಳಿಸಿದೆ.
ಇದನ್ನೂ ಓದಿ:ಬಿಜೆಪಿ, ಆರ್ ಎಸ್ ಎಸ್ ಸುಳ್ಳನ್ನು ಬಹಿರಂಗಪಡಿಸಲು ಕಾಂಗ್ರೆಸ್ ಒಗ್ಗಟ್ಟು ಮುಖ್ಯ: ಸೋನಿಯಾ
ಅಕ್ಟೋಬರ್ 17ರ ನಂತರ ಚೀನಾದ ಸ್ಥಳೀಯ ಪ್ರದೇಶಗಳಲ್ಲಿ ಕೋವಿಡ್ 19 ಸೋಂಕು ಪ್ರಕರಣ ದಿಢೀರನೆ ಹೆಚ್ಚಳವಾಗತೊಡಗಿದೆ. ಇದರಿಂದಾಗಿ ಮತ್ತೆ ಲಾಕ್ ಡೌನ್ ಜಾರಿಗೊಳಿಸುತ್ತಿರುವುದಾಗಿ ರಾಷ್ಟ್ರೀಯ ಆರೋಗ್ಯ ಆಯೋಗ(ಎನ್ ಎಚ್ ಸಿ)ದ ವಕ್ತಾರ ಮಿ ಫೆಂಗ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಕೋವಿಡ್ ಪ್ರಕರಣಗಳ ಹೆಚ್ಚಳ ಹೆಚ್ಚು ಅಪಾಯಕಾರಿಯಾಗಿದ್ದು, ಇದು ಹರಡದಂತೆ ತಡೆಯಲು ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುತ್ತಿದ್ದೇವೆ ಎಂದು ತಿಳಿಸಿರುವುದಾಗಿ ಸಿಎನ್ ಎನ್ ವರದಿ ಮಾಡಿದೆ. ಚೀನಾ ಶೇ.75ರಷ್ಟಿ ಜನಸಂಖ್ಯೆಯ ಮೇಲೆ ಸೋಂಕು ಪರಿಣಾಮ ಬೀರದಂತೆ ಕ್ರಮ ತೆಗೆದುಕೊಳ್ಳಲಾಗಿದೆ. ದೇಶದಲ್ಲಿ ಈಗಾಗಲೇ ಕೋಟ್ಯಂತರ ಜನರಿಗೆ ಲಸಿಕೆ ನೀಡಲಾಗಿದೆ ಎಂದು ಮಿ ಮಾಹಿತಿ ನೀಡಿರುವುದಾಗಿ ವರದಿ ಹೇಳಿದೆ.
ಕೋವಿಡ್ ಸೋಂಕು ಹರಡುತ್ತಿರುವುದು ಚೀನಾ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ ಎಂದು ವರದಿ ತಿಳಿಸಿದೆ. ಆ ನಿಟ್ಟಿನಲ್ಲಿ ಕೋವಿಡ್ ಪ್ರಕರಣ ಶೂನ್ಯವಾಗಿರಬೇಕೆಂದು ಚೀನಾ ಅಧಿಕಾರಿಗಳಿಗೆ ಸೂಚನೆ ನೀಡಿದೆ. ಎರಡು ಲಸಿಕೆಯನ್ನು ತೆಗೆದುಕೊಂಡಿದ್ದ ಹಿರಿಯ ನಾಗರಿಕರು ಶಾಂಘೈನ ವಿವಿಧೆಡೆ ಪ್ರವಾಸಕ್ಕೆ ತೆರಳಿದ್ದವರನ್ನು ಪರೀಕ್ಷಿಸಿದಾಗ ಸೋಂಕು ಪತ್ತೆಯಾಗಿರುವುದಾಗಿ ವರದಿ ವಿವರಿಸಿದೆ.