Advertisement
ಸಾಯಿಪ್ರಣೀತ್ ಅವರನ್ನು ವಿಶ್ವದ 9ನೇ ರ್‍ಯಾಂಕಿಂಗ್ ಶಟ್ಲರ್, ಇಂಡೋ ನೇಶ್ಯದ ಆ್ಯಂಟನಿ ಸಿನಿಸುಕ ಗಿಂಟಿಂಗ್ ಭಾರೀ ಹೋರಾಟದ ಬಳಿಕ 21-16, 6-21, 16-21 ಅಂತರದಿಂದ ಪರಾಭವಗೊಳಿಸಿದರು. 55 ನಿಮಿಷಗಳ ಕಾಲ ಇವರ ಹೋರಾಟ ಜಾರಿ ಯಲ್ಲಿತ್ತು. ಗಿಂಟಿಂಗ್ ಅವರಿನ್ನು ಡೆನ್ಮಾರ್ಕ್ ನ 8ನೇ ಶ್ರೇಯಾಂಕಿತ ಆಟಗಾರ ಆ್ಯಂಡರ್ ಆ್ಯಂಟನ್ಸೆನ್ ವಿರುದ್ಧ ಸ್ಪರ್ಧೆಗೆ ಇಳಿಯಲಿದ್ದಾರೆ. ಆ್ಯಂಟನ್ಸೆನ್ ಕಳೆದ ವಿಶ್ವ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಬೆಳ್ಳಿ ಪದಕ ಜಯಿಸಿದ್ದಾರೆ.
ಈ ವರ್ಷಾರಂಭದಲ್ಲಿ ಸ್ವಿಸ್ ಓಪನ್ ಫೈನಲ್ ತಲುಪಿದ್ದ ಸಾಯಿ ಪ್ರಣೀತ್, ಗಿಂಟಿಂಗ್ ವಿರುದ್ಧ 3-2 ಗೆಲುವಿನ ದಾಖಲೆಯೊಂದಿಗೆ ಆಡಲಿಳಿದಿದ್ದರು. ಮೊದಲ ಗೇಮ್ ವಶಪಡಿಸಿಕೊಂಡ ಸಾಯಿಪ್ರಣೀತ್, ಇಂಡೋನೇಶ್ಯನ್ ಆಟಗಾರನ ವಿರುದ್ಧ ಮೇಲುಗೈ ಸಾಧಿಸುವ ನಿರೀಕ್ಷೆ ಬಲವಾಗಿತ್ತು. ಆದರೆ ಹಿನ್ನಡೆಯ ಬಳಿಕ ಎಚ್ಚೆತ್ತುಕೊಂಡ ಸಿನಿಸುಕ ತಿರುಗಿ ಬಿದ್ದರು. ಕಳೆದ ತಿಂಗಳಷ್ಟೇ ವಿಶ್ವ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಸೆಮಿಫೈನಲ್ ತನಕ ಸಾಗಿದ್ದ ಸಾಯಿ ಪ್ರಣೀತ್ 36 ವರ್ಷ ಕಾಯು ವಿಕೆಯ ಬಳಿಕ ಭಾರತದ ಪುರುಷರ ಸಿಂಗಲ್ಸ್ ಪದಕದ ಬರವನ್ನು ನೀಗಿಸಿದ್ದರು. 1983ರಲ್ಲಿ ಪ್ರಕಾಶ್ ಪಡುಕೋಣೆ ಕಂಚು ಗೆದ್ದ ಬಳಿಕ ಸಾಯಿಪ್ರಣೀತ್ ಅವರದೇ ಪದಕದ ಸಾಧನೆಯಾಗಿತ್ತು.