ಚಾಂಗ್‌ಝೂ: ಭಾರತದ ಭರವಸೆಯ ಶಟ್ಲರ್‌ಗಳಾದ ಕೆ. ಶ್ರೀಕಾಂತ್ ಹಾಗೂ ಪಿ. ವಿ. ಸಿಂಧು ಕ್ವಾರ್ಟರ್ ಫೈನಲ್‌ನಲ್ಲಿ ಸೋತು ಚೀನ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಇದರೊಂದಿಗೆ ಈ ಪಂದ್ಯಾವಳಿಯಲ್ಲಿ ಭಾರತದ ಹೋರಾಟ ಅಂತ್ಯಗೊಂಡಿದೆ.
ಪುರುಷರ ಸಿಂಗಲ್ಸ್ ವಿಭಾಗದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕೆ. ಶ್ರೀಕಾಂತ್ ಹಾಲಿ ವಿಶ್ವ ಚಾಂಪಿ ಯನ್ ಜಪಾನಿನ ಕೆಂಟೊ ಮೊಮೊಟ ವಿರುದ್ಧ 9-21, 11-21 ಗೇಮ್‌ಗಳಿಂದ ಸೋತರು. ಇದು ಮೊಮೊಟ ವಿರುದ್ಧ ಆಡಿದ 10 ಮುಖಾಮುಖಿಗಳಲ್ಲಿ ಶ್ರೀಕಾಂತ್ ಅನುಭವಿಸಿದ 7ನೇ ಸೋಲು. ಇದಕ್ಕೂ ಮುನ್ನ ಜೂನ್‌ನಲ್ಲಿ ನಡೆದ ಮಲೇಶ್ಯ ಓಪನ್, ಜುಲೈನಲ್ಲಿ ನಡೆದ ಇಂಡೋನೇಶ್ಯ ಓಪನ್ ಟೂರ್ನಿಗಳಲ್ಲೂ ಮೊಮೊಟ ವಿರುದ್ಧ ಶ್ರೀಕಾಂತ್ ಸೋಲನುಭವಿಸಿದ್ದರು.
ಆರಂಭಿಕ ಗೇಮ್‌ನಲ್ಲಿಯೇ ಮುಗ್ಗರಿಸಿದ ಶ್ರೀಕಾಂತ್ ಲಯಕಂಡುಕೊಳ್ಳುವಲ್ಲಿ ವಿಫಲರಾದರು. ಮೊಮೊಟ ಏಕಪ್ರಕಾರವಾಗಿ ಅಂಕ ಗಳಿಸುತ್ತ ಹೋದರೆ, ಶ್ರೀಕಾಂತ್ ಒಂದೊಂದು ಅಂಕಕ್ಕೂ ಪರದಾಡಿದರು. ಎರಡನೇ ಗೇಮ್‌ನಲ್ಲೂ ಶ್ರಿಕಾಂತ್ ಜಪಾನೀ ಆಟಗಾರನಿಗೆ ಸಾಟಿಯಾಗಲಿಲ್ಲ. ಹೀಗಾಗಿ ಇದೊಂದು ಏಕಪಕ್ಷೀಯ ಪಂದ್ಯವೆನಿಸಿಕೊಂಡಿತು.
ಮತ್ತೆ ಮುಗ್ಗರಿಸಿದ ಸಿಂಧು
ಅನಂತರ ನಡೆದ ವನಿತಾ ಸಿಂಗಲ್ಸ್ ವಿಭಾಗದಲ್ಲಿ ಪಿ.ವಿ. ಸಿಂಧು ಚೀನದ ಚೆನ್ ಯೂಫಿ ವಿರುದ್ಧ 11-21, 21-11, 15-21 ಗೇಮ್ ಗ ಳಿಂದ ಸೋತರು. ಈ ಕೂಟಕ್ಕೂ ಮುನ್ನ ಚೆನ್ ಅವರನ್ನು 6 ಬಾರಿ ಎದುರಿಸಿದ್ದ ಸಿಂಧು 4ರಲ್ಲಿ ಗೆಲುವು ಸಾಧಿಸಿದ್ದರು. ಆದರೆ ಇಲ್ಲಿ ತಮ್ಮ ತಪ್ಪುಗಳನ್ನು ಸರಿಪಡಿಸಿಕೊಳ್ಳುವಲ್ಲಿ ವಿಫಲರಾದ ಸಿಂಧು ಸೆಮಿಫೈನಲ್ ಪ್ರವೇಶ ತಪ್ಪಿಸಿಕೊಂಡರು.
ಮೊದಲ ಗೇಮ್‌ನಲ್ಲಿ 6-3 ಅಂಕಗಳ ಮುನ್ನಡೆ ಕಾಯ್ದುಕೊಂಡಿದ್ದ ಚೆನ್, ಭಾರತೀಯಳಿಗೆ ಅಂಕಗಳಿಸಲು ಹೆಚ್ಚಿನ ಅವಕಾಶವನ್ನೇ ನೀಡಲಿಲ್ಲ. ಆದರೆ ದ್ವಿತೀಯ ಗೇಮ್‌ನಲ್ಲಿ ಸ್ಥಿರತೆ ಕಾಪಾಡಿಕೊಳ್ಳಲು ವಿಫಲರಾದ ಚೆನ್‌ಗೆ ಪ್ರತ್ಯುತ್ತರ ನೀಡಿದ ಸಿಂಧು ಹೋರಾಟವನ್ನು ಸಮಬಲಕ್ಕೆ ತರುವಲ್ಲಿ ಯಶಸ್ವಿಯಾದರು. ನಿರ್ಣಾಯಕ ಅಂತಿಮ ಗೇಮ್‌ನಲ್ಲಿ ಚೆನ್ ಯೂಫಿ ಮತ್ತೆ ಚೆಂದದ ಪ್ರದರ್ಶನ ನೀಡಿದರು. ಸಿಂಧು ಮತ್ತೆ ಮಂಕಾದರು. ಇದನ್ನು 21-15ರಿಂದ ವಶಪಡಿಸಿಕೊಂಡ ಚೀನೀ ಆಟಗಾರ್ತಿ ಸೆಮಿಫೈನಲಿಗೆ ನೆಗೆದರು.