Advertisement

ಡೋಕ್‌ಲಾಂ:ಭಾರತ ಸೇನೆಯ ಎತ್ತಂಗಡಿಗೆ ಚೀನ ಸೇನೆಯಿಂದ ಕಿರು ಕಾರ್ಯಾಚರಣೆ?

11:06 AM Aug 05, 2017 | udayavani editorial |

ಬೀಜಿಂಗ್‌ : ಡೋಕ್‌ಲಾಂ ಪ್ರದೇಶದಿಂದ ಭಾರತೀಯ ಸೇನೆಯನ್ನು ಹೊರಹಾಕಲು ಎರಡ ವಾರಗಳ ಒಳಗೆ ಸಣ್ಣ ಮಟ್ಟದ ಮಿಲಿಟರಿ ಕಾರ್ಯಾಚರಣೆ ಕೈಗೊಳ್ಳುವುದನ್ನು ಚೀನ ಸೇನೆ ಯೋಜಿಸುತ್ತಿದೆ ಎಂದು ಸರಕಾರಿ ಒಡೆತನದ ಚೀನೀ ದಿನಪತ್ರಿಕೆಯಲ್ಲಿ ಪ್ರಕಟವಾಗಿರುವ ಲೇಖನವೊಂದು ಹೇಳಿದೆ.

Advertisement

ಭೂತಾನ್‌ಗೆ ಸೇರಿರುವ ಡೋಕ್‌ಲಾಂ ಪ್ರದೇಶದಲ್ಲಿ ಚೀನ ಸೇನೆ ಕೈಗೊಂಡಿದ್ದ ರಸ್ತೆ ನಿರ್ಮಾಣ ಕಾರ್ಯವನ್ನು ಭಾರತೀಯ ಸೇನೆ ತಡೆದಿರುವ ಕಾರಣ ಸಿಕ್ಕಿಂ ಗಡಿಯಲ್ಲಿ ಕಳೆದ ಜೂನ್‌ 16ರಿಂದ ಉಭಯ ದೇಶಗಳ ಸೇನೆಗಳು ಮುಖಾಮುಖೀಯಾಗಿ ಗಡಿ ಉದ್ವಿಗ್ನತೆಗೆ, ಸಮರ ಸ್ಫೋಟ ಭೀತಿಗೆ ಕಾರಣವಾಗಿದೆ. 

ಡೋಕ್‌ಲಾಂ ನಲ್ಲಿ ಚೀನ ರಸ್ತೆ ನಿಮಾರ್ಣ ಕೈಗೊಂಡಿರುವುದು ಏಕ ಪಕ್ಷೀಯ ಕ್ರಮವಾಗಿದೆ; ಇದು ಭೂತಾನ್‌ಗೆ ಸೇರಿದ ಪ್ರದೇಶವಾಗಿದೆ; ಮಾತ್ರವಲ್ಲದೆ ಇಲ್ಲಿ ಚೀನ ರಸ್ತೆಯನ್ನು
ನಿರ್ಮಿಸುವುದರಿಂದ ಈಶಾನ್ಯ ರಾಜ್ಯಗಳಿಗಿರುವ ತನ್ನ ಸಂಪರ್ಕ ಮಾರ್ಗಗಳು ಕಡಿದು ಹೋಗುತ್ತವೆ ಎಂದು ಭಾರತ ಚೀನಕ್ಕೆ ನೇರವಾಗಿ ಹೇಳಿದೆ. ಆದಾಗ್ಯೂ ಚೀನ, ಡೋಕ್‌ಲಾಂ ವಿವಾದಿತ ಪ್ರದೇಶವು ತನ್ನದೆಂದೂ ಅಲ್ಲಿ ರಸ್ತೆ ನಿರ್ಮಿಸುವುದು ತನ್ನ ಸಾರ್ವಭೌಮತೆಯ ಹಕ್ಕಾಗಿದೆ ಎಂದೂ ಹೇಳಿಕೊಂಡಿದೆ. 

“ಸಿಕ್ಕಿಂ ಗಡಿಯ ಡೋಕ್‌ಲಾಂನಲ್ಲಿ  ಚೀನ – ಭಾರತ ಸೇನೆಯ ಮುಖಾಮುಖೀ ಮುಂದುವರಿಯುವುದಕ್ಕೆ ಬೀಜಿಂಗ್‌ ಅವಕಾಶ ಕೊಡುವುದಿಲ್ಲ. ಹಾಗಾಗಿ ಡೋಕ್‌ಲಾಂ ನಿಂದ ಭಾರತೀಯ ಸೇನೆಯನ್ನು ಎತ್ತಂಗಡಿ ಮಾಡಲು ಇನ್ನೆರಡು ವಾರಗಳ ಒಳಗೆ ಸಣ್ಣ ಮಟ್ಟದ ಸೇನಾ ಕಾರ್ಯಾಚರಣೆಯನ್ನು ಕೈಗೊಳ್ಳುವ ಆಲೋಚನೆಯನ್ನು ಚೀನ ಇದೀಗ ಮಾಡುತ್ತಿದೆ’ ಎಂದು ಶಾಂಘೈ ಅಕಾಡೆಮಿ ಆಫ್ ಸೋಶಿಯಲ್‌ ಸಯನ್ಸಸ್‌ ನ ಇನ್‌ಸ್ಟಿಟ್ಯೂಟ್‌ ಆಫ್ ಇಂಟರ್‌ನ್ಯಾಶನಲ್‌ ರಿಲೇಶನ್ಸ್‌ ನಲ್ಲಿ ರಿಸರ್ಚ್‌ ಫೆಲೋ ಆಗಿರುವ ಹು ಝಿಯಾಂಗ್‌ ಅವರನ್ನು ಉಲ್ಲೇಖೀಸಿ ಚೀನದ ಸರಕಾರಿ ಒಡೆತನದ ಗ್ಲೋಬಲ್‌ ಟೈಮ್ಸ್‌ ವರದಿ ಮಾಡಿದೆ. 

ಈ ರೀತಿಯ ಸಣ್ಣ ಮಟ್ಟದ ಸೇನಾ ಕಾರ್ಯಾಚರಣೆಯನ್ನು ಕೈಗೊಳ್ಳುವ ಮುನ್ನ ಚೀನ, ಭಾರತದ ವಿದೇವ ಸಚಿವಾಲಯಕ್ಕೆ ತಿಳಿಸಲಿದೆ ಎಂದೂ ಅದು ಹೇಳಿದೆ. 

Advertisement

ಡೋಕ್‌ಲಾಂ ವಿವಾದವನ್ನು ಶಾಂತಿಯುತವಾಗಿ ಬಗೆಹರಿಸಲು ಎರಡೂ ದೇಶಗಳು ತಮ್ಮ ಸೇನೆಯನ್ನು ಏಕಕಾಲದಲ್ಲಿ ಹಿಂದೆಗೆಯಬೇಕು ಮತ್ತು  ದ್ವಿಪಕ್ಷೀಯ ಸಂಬಂಧಗಳನ್ನು ಗಟ್ಟಿಗೊಳಿಸುವ ಮಾತುಕತೆಗಳನ್ನು ನಡೆಸಬೇಕು ಎಂದು ಭಾರತದ ವಿದೇಶ ವ್ಯವಹಾರಗಳ ಸಚಿವೆ ಸುಶ್ಮಾ ಸ್ವರಾಜ್‌ ಈಚೆಗಷ್ಟೇ ಸಂಸತ್ತಿನಲ್ಲಿ ಹೇಳಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next