ಅಮೆರಿಕ ಮೂಲದ ಪಿ-8ಐ ಆ್ಯಂಟಿ ಸಬ್‌ಮರಿನ್ ವಾರ್‌ಫೇರ್ ಎಂಬ ಗುಪ್ತಚರ ವಿಮಾನಗಳ ಮೂಲಕ ಭಾರತೀಯ ನೌಕಾಪಡೆಯ ವಿಚಕ್ಷಣ ದಳ, ಚೀನಾದ ಹಡಗುಗಳ ಫೋಟೋಗಳನ್ನು ಕ್ಲಿಕ್ಕಿಸಿದ್ದು, ಏಳು ನೌಕೆಗಳಲ್ಲಿ 27,000 ಟನ್ ತೂಕದ ಲ್ಯಾಂಡಿಂಗ್ ಪ್ಲಾಟ್‌ಫಾರಂ ಡಾಕ್ (ಎಲ್‌ಪಿಡಿ) “ಕ್ಸಿಯಾನ್ -32′ ಎಂಬ ದೈತ್ಯ ಸಮರ ನೌಕೆ ಕೂಡ ಸೇರಿದೆ. ಇದೇ ತಿಂಗಳ ಆರಂಭದಲ್ಲಿ ಹಿಂದೂ ಮಹಾ ಸಾಗರದ ದಕ್ಷಿಣ ಭಾಗದ ಮೂಲಕ ಸಾಗಿಹೋಗಿರುವ ಚೀನಾದ ಈ ಎಲ್ಲಾ ನೌಕೆಗಳು, ಶ್ರೀಲಂಕಾದ ಕರಾವಳಿಯನ್ನು ಪ್ರವೇಶಿಸಿವೆ ಎಂದು ಹೇಳಲಾಗಿದೆ.
ಮತ್ತೂಂದು ಕುತೂಹಲಕಾರಿ ವಿಚಾರವೇನೆಂದರೆ, ಚೀನಾದ ಏಳು ನೌಕೆಗಳ ಜತೆಗೆ, “ಕೌಂಟರ್-ಪೈರಸಿ 32′, “ಕೌಂಟರ್-ಪೈರಸಿ 33′ ಎಂಬ ಚೀನಾದ ವಿಶೇಷ ಪಡೆಗಳ ತಲಾ ಮೂರು ನೌಕೆಗಳೂ ಇರುವುದು. ವಾಸ್ತವವಾಗಿ, ಆ ನೌಕೆಗಳನ್ನು ಯೆಮನ್ ದೇಶದ ಅಡೆನ್ ಕೊಲ್ಲಿಯಲ್ಲಿ ಕಾರ್ಯನಿರ್ವಹಿಸುವಂತೆ ಚೀನಾ ನೇಮಿಸಿದೆ. ಚೀನಾದ ಕೋಟ್ಯಂತರ ಮೌಲ್ಯದ ಉತ್ಪನ್ನಗಳು ಸೌದಿ ಹಾಗೂ ಪಾಶ್ಚಿಮಾತ್ಯ ರಾಷ್ಟ್ರಗಳ ಕಡೆಗೆ ಯೆಮೆನ್ ಸಾಗರ ಗಡಿಯ ಮೂಲಕ ಸಾಗುವುದರಿಂದ ಅಲ್ಲಿ ಕಳ್ಳಸಾಗಣೆದಾರರ, ಹಡಗುಗಳ್ಳರ ಕಾಟ ತಪ್ಪಿಸಿಕೊಳ್ಳಲು ಚೀನಾ, ತನ್ನ ಯುದ್ಧ ನೌಕೆಗಳನ್ನು ಈ ಮಾರ್ಗದಲ್ಲಿ ಕಾವಲಿಗಾಗಿ ನಿಯೋಜಿಸಿರುತ್ತದೆ. ಅವುಗಳಲ್ಲಿ ಚೀನಾದ ಎಲ್‌ಪಿಡಿ ಜತೆಗೆ, ಕೌಂಟರ್-ಪೈರಸಿ 32, ಕೌಂಟರ್ ಪೈರಸಿ 33 ನೌಕೆಗಳ ಪಾತ್ರ ಹಿರಿದು. ಆದರೆ, ಆ ಹಡಗುಗಳು ಹಿಂದೂ ಮಹಾಸಾಗರದತ್ತ ಏಕೆ ಬಂದವು, ಅದರಲ್ಲೂ, ಚೀನಾದ ಏಳೂ ನೌಕೆಗಳು ಭಾರತೀಯ ಭೂಭಾಗಕ್ಕೆ ಹತ್ತಿರವಿರುವ ಸಾಗರ ಪ್ರದೇಶದಲ್ಲಿ ಹಾದು ಹೋಗಿರು ವುದಾದರೂ ಏತಕ್ಕೆ ಎಂಬ ಪ್ರಶ್ನೆಗಳು ಎದ್ದಿವೆ.
Advertisement
ಚೀನಾದಿಂದ ಶಕ್ತಿ ಪ್ರದರ್ಶನ ಪ್ರಯತ್ನ?ಹಿಂದೂ ಮಹಾ ಸಾಗರದಲ್ಲಿ ಚೀನಾ ತನ್ನ ಶಕ್ತಿ ಪ್ರದರ್ಶನ ತೋರಲು ಇತ್ತೀಚೆಗೆ ಭಾರೀ ಆಸಕ್ತಿ ತೋರುತ್ತಿದ್ದು, ಅದಕ್ಕಾಗಿಯೇ, ತನ್ನ ನೌಕಾಪಡೆಯಲ್ಲಿನ ದೈತ್ಯ ಸಮರ ನೌಕೆಗಳನ್ನು ಓಡಾಡಿಸುತ್ತದೆ ಎಂದು ಹೇಳಲಾಗುತ್ತಿದೆ. ಇತ್ತ, ಭಾರತ ನೌಕಾಪಡೆ ಸಹ ತನ್ನ ಏಕೈಕ ಸಮರ ನೌಕೆಯಾದ “ವಿಕ್ರಮಾದಿತ್ಯ’ನನ್ನು ಕಾವಲಿಗೆ ನೇಮಿಸಿದೆ. 2ನೇ ಸಮರ ನೌಕೆ ಕೊಚಿನ್‌ನಲ್ಲಿ ಸಂಪೂರ್ಣ ಸ್ವದೇಶಿ ತಂತ್ರ ಜ್ಞಾನದೊಂದಿಗೆ ಸಿದ್ಧಗೊಳ್ಳುತ್ತಿದ್ದು, ಮೂರ ನೇ ಸಮರ ನೌಕೆಯ ತಯಾರಿಕೆಗೂ ಭಾರತ ಸನ್ನದ್ಧವಾಗಿದೆ. ಆ ಮೂಲಕ, ಚೀನಾಕ್ಕೆ ತನ್ನ ಸಾಮರ್ಥ್ಯ ತೋರಿಸಲು ಭಾರತವೂ ಸಜ್ಜಾಗಿದೆ ಎಂದು ಹೇಳಲಾಗಿದೆ.