ಬೀಜಿಂಗ್: ಜಗತ್ತಿನಲ್ಲಿ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ಚೀನಾದಲ್ಲಿ ಜನನ ಪ್ರಮಾಣ ಇಳಿಕೆಯಾಗುತ್ತಿರುವ ಅಂಶ ಜನಗಣತಿ ವೇಳೆ ಬಹಿರಂಗವಾದ ನಂತರ ಇದೀಗ ನಾಗರಿಕರು ಗರಿಷ್ಠ ಮೂರು ಮಕ್ಕಳನ್ನು ಪಡೆಯಬಹುದಾಗಿದೆ ಎಂದು ಚೀನಾ ಸರ್ಕಾರ ಸೋಮವಾರ (ಮೇ 31) ತೀರ್ಮಾನ ಕೈಗೊಂಡಿದೆ.
ಇದನ್ನೂ ಓದಿ:ಈ ಬಾರಿ 30 ಲಕ್ಷ ರೈತರಿಗೆ 20810 ಕೋಟಿ ರೂ. ಬೆಳೆ ಸಾಲ : ಎಸ್.ಟಿ.ಸೋಮಶೇಖರ್ ಘೋಷಣೆ
ಸುಮಾರು 40 ವರ್ಷಗಳ ಕಾಲ ಜಾರಿಯಲ್ಲಿದ್ದ “ಒಂದೇ ಮಗು” ನೀತಿಯನ್ನು 2016ರಲ್ಲಿ ರದ್ದುಪಡಿಸಿ, ಎರಡು ಮಕ್ಕಳನ್ನು ಪಡೆಯುವ ಬಗ್ಗೆ ನೂತನ ಪರಿಷ್ಕೃತ ನೀತಿಯನ್ನು ಜಾರಿಗೊಳಿಸಿತ್ತು. ಆದರೆ ಚೀನಾದ ನಗರಗಳಲ್ಲಿ ಮಕ್ಕಳ ಶಿಕ್ಷಣ ಸೇರಿದಂತೆ ಅಧಿಕ ವೆಚ್ಚದ ಹಿನ್ನೆಲೆಯಲ್ಲಿ ಜನನ ಸಂಖ್ಯೆ ಕಡಿಮೆಯಾಗುವ ಮೂಲಕ ಸವಾಲಾಗಿ ಪರಿಣಮಿಸಿತ್ತು ಎಂದು ವರದಿ ತಿಳಿಸಿದೆ.
ಚೀನಾದಲ್ಲಿ ಜನನ ನೀತಿಯನ್ನು ಮತ್ತಷ್ಟು ಪರಿಷ್ಕೃತಗೊಳಿಸಲು ಮುಂದಾಗಿದ್ದು, ಇನ್ನು ಮುಂದೆ ದಂಪತಿಗಳು ಮೂರು ಮಕ್ಕಳನ್ನು ಹೊಂದುವ ನೀತಿಯನ್ನು ಜಾರಿಗೊಳಿಸಿದೆ. ಚೀನಾ ಅಧ್ಯಕ್ಷ ಜಿನ್ ಪಿಂಗ್ ಅವರ ಅಧ್ಯಕ್ಷತೆಯಲ್ಲಿ ನಡೆದ ಪಾಲಿಟ್ ಬ್ಯೂರೋ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅಧಿಕೃತ ಕ್ಸಿನ್ ಹುವಾ ಸಂಸ್ಥೆ ವರದಿ ಮಾಡಿದೆ.
ಕೇವಲ ಎರಡು ಮಕ್ಕಳ ನೀತಿಯಿಂದ ಜನರನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಆದರೆ ಆಧುನಿಕ ಚೀನಾದಲ್ಲಿ ಮಕ್ಕಳ ಲಾಲನೆ, ಪೋಷಣೆಗೆ ಅಧಿಕ ವೆಚ್ಚ ಮಾಡಬೇಕಾಗಿದೆ. ವಸತಿ, ಪಠ್ಯೇತರ ಚಟುವಟಿಕೆ, ಆಹಾರ, ಪ್ರವಾಸ ಎಲ್ಲವೂ ಖರ್ಚು, ವೆಚ್ಚಕ್ಕೆ ಹೆಚ್ಚುವರಿಯಾಗಿ ಸೇರ್ಪಡೆಯಾಗುತ್ತದೆ ಎಂದು ಎನ್ ವೈಯು ಶಾಂಘೈನ ಸಮಾಜಶಾಸ್ತ್ರಜ್ಞ ಯಿಫೈಲಿ ರಾಯಿಟರ್ಸ್ ಗೆ ತಿಳಿಸಿದ್ದಾರೆ.