ಬೀಜಿಂಗ್:ಒಂದು ಕಾಲದಲ್ಲಿ ಜನಸಂಖ್ಯಾ ಸ್ಫೋಟಕ್ಕೆ ಕಡಿವಾಣ ಹಾಕಲು ಹರಸಾಹಸ ಪಟ್ಟಿದ್ದ ಚೀನಾ ಇತ್ತೀಚಿನ ದಿನಗಳಲ್ಲಿ ಜನಸಂಖ್ಯೆ ಹೆಚ್ಚಿಸುವ ನಿಟ್ಟಿನಲ್ಲಿ ಕಸರತ್ತು ನಡೆಸುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಅದಕ್ಕೆ ಹೊಸ ಸೇರ್ಪಡೆಯೆಂಬಂತೆ, ಮದುವೆಯಾಗಲು ಮತ್ತು ಮಕ್ಕಳನ್ನು ಹಡೆಯಲು ಮಹಿಳೆಯರಿಗೆ ಉತ್ತೇಜನ ನೀಡುವಂಥ ಪ್ರಾಯೋಗಿಕ ಯೋಜನೆಯೊಂದನ್ನು ಚೀನದ ಉತ್ಪಾದನಾ ಹಬ್ ಗುವಾಂಗ್‌ಝೌ, ಹೆಬೆ ಪ್ರಾಂತ್ಯದ ಹಂಡನ್ ಸೇರಿದಂತೆ ಹಲವಾರು ನಗರಗಳಲ್ಲಿ ಇದನ್ನು ಪ್ರಾಯೋಗಿಕವಾಗಿ ಜಾರಿ ಮಾಡಲು ಚಿಂತನೆ ನಡೆಸಲಾಗಿದೆ 20ಕ್ಕೂ ಹೆಚ್ಚು ನಗರಗಳಲ್ಲಿ ಅನುಷ್ಠಾನ ಮಾಡಲು ಸಿದ್ಧತೆ ನಡೆಸಿದೆ.
ಚೀನ ಸರ್ಕಾರದ ಜನಸಂಖ್ಯೆ ಮತ್ತು ಫಲವತ್ತತೆಗೆ ಸಂಬಂಧಿಸಿ ಕ್ರಮ ಕೈಗೊಳ್ಳುವಂಥ ರಾಷ್ಟ್ರೀಯ ಕುಟುಂಬ ಯೋಜನೆ ಸಂಘವು ಈ ಯೋಜನೆಯನ್ನು ಕೈಗೆತ್ತಿಕೊಂಡಿದೆ.
ಏನೇನು ಕ್ರಮ?
ಸೂಕ್ತ ವಯಸ್ಸಿನಲ್ಲಿ ಮದುವೆಯಾಗುವುದು, ಮಕ್ಕಳನ್ನು ಹೊಂದುವುದು, ಹುಟ್ಟುವ ಮಕ್ಕಳ ಪೋಷಣೆಯ ಜವಾಬ್ದಾರಿಯನ್ನು ಪತಿ-ಪತ್ನಿಯಿಬ್ಬರೂ ಹಂಚಿಕೊಳ್ಳುವುದು, ವಧುದಕ್ಷಿಣೆ ಪ್ರಮಾಣವನ್ನು ತಗ್ಗಿಸುವುದು ಸೇರಿದಂತೆ ವಿವಿಧ ಕ್ರಮಗಳನ್ನು ಈ ಯೋಜನೆಯಡಿ ಕೈಗೊಳ್ಳಲಾಗುತ್ತದೆ.
ಉಡುಗೊರೆಯ ಆಮಿಷ:
ವಿಶೇಷವೆಂದರೆ, ಸರ್ಕಾರದ ಕರೆಗೆ ಸ್ಪಂದಿಸಿದವರಿಗೆ ತೆರಿಗೆ ವಿನಾಯ್ತಿ, ಮನೆ ನಿರ್ಮಾಣಕ್ಕೆ ಸಬ್ಸಿಡಿ, ಮೂರನೇ ಮಗುವನ್ನು ಹೊಂದಿದರೆ ಆ ಮಗುವಿಗೆ ಉಚಿತ ಅಥವಾ ಸಬ್ಸಿಡಿಯುಕ್ತ ಶಿಕ್ಷಣ ಮುಂತಾದ ಹಲವು ಸೌಲಭ್ಯಗಳನ್ನೂ ಘೋಷಿಸಲಾಗಿದೆ.