ಬೀಜಿಂಗ್: ಅಂತರಿಕ್ಷ ವಿಜ್ಞಾನದಲ್ಲಿ ತನ್ನದೇ ಹೆಜ್ಜೆ ಗುರುತು ಮೂಡಿಸಿರುವ ಚೀನ, ಸಂಚಾರಿ ಉಡ್ಡಯನ ವಾಹಕವೊಂದರಿಂದ ಏಳು ಉಪಗ್ರಹಗಳುಳ್ಳ ರಾಕೆಟ್ ಉಡಾವಣೆ ಮಾಡಿ ಹೊಸ ಸಾಧನೆ ಮಾಡಿದೆ. ಹಳದಿ ಸಮುದ್ರದಲ್ಲಿ (ಚೀನ-ಕೊರಿಯಾ ನಡುವಿನ ಸಾಗರ) ನಿರ್ಮಿಸಲಾಗಿದ್ದ ಸಂಚಾರಿ ಉಡ್ಡಯನ ವಾಹಕದಿಂದ ಚೀನದ ಸ್ವದೇಶಿ ನಿರ್ಮಿತ ‘ಲಾಂಗ್ ಮಾರ್ಚ್-11’ ರಾಕೆಟ್, ಸ್ಥಳೀಯ ಕಾಲಮಾನ ಮಧ್ಯಾಹ್ನ 12:06ಕ್ಕೆ ಸರಿಯಾಗಿ, ತನ್ನಲ್ಲಿದ್ದ ತಂತ್ರಜ್ಞಾನಕ್ಕೆ ಸೀಮಿತವಾದ 2 ಉಪಗ್ರಹಗಳು ಹಾಗೂ ವಾಣಿಜ್ಯ ಉದ್ದೇಶಗಳಿಗಾಗಿ ನಿರ್ಮಿಸಲಾಗಿದ್ದ 5 ಉಪಗ್ರಹಗಳನ್ನು ಯಶಸ್ವಿಯಾಗಿ ಬಾಂದಳಕ್ಕೆ ಕೊಂಡೊಯ್ದಿತು. ಭಾರತದ ಇಸ್ರೋ ಸಂಸ್ಥೆಯ ಪಿಎಸ್‌ಎಲ್ವಿ ರಾಕೆಟ್ ಮಾದರಿಯಂತೆಯೇ ಚೀನದ ಸ್ವದೇಶಿ ನಿರ್ಮಿತ ರಾಕೆಟ್ ಮಾದರಿಯಾದ ಲಾಂಗ್ ಮಾರ್ಚ್‌ನ ಅಡಿಯಲ್ಲಿ ಆದ 306ನೇ ಉಡಾವಣೆ ಇದು. ಅದರಲ್ಲೂ ಸಮುದ್ರದ ಮೇಲಿನಿಂದ ರಾಕೆಟ್ ಉಡಾವಣೆ ಮಾಡಿದ್ದು ಚೀನ ಪಾಲಿಗೆ ಇದೇ ಮೊದಲು.