ಬೀಜಿಂಗ್: ಭಾರತ ಹಾಗೂ ಚೀನ ನಡುವಿನ ಡೋಕ್ಲಾಂ ಗಡಿ ವಿವಾದ ಇನ್ನೇನು ಬಗೆಹರಿಯಿತು ಅನ್ನುವಷ್ಟರಲ್ಲಿ ಮತ್ತೆ ಚೀನ ಕಾಲ್ಕೆರೆದು ಜಗಳಕ್ಕೆ ನಿಂತಿದೆ. ಚೀನ ಸೇನೆ ಭಾರತವನ್ನು ಕೆಣಕುವ ಮಾತುಗಳನ್ನಾಡಿದೆ. “ಡೋಕ್ಲಾಂ ಘಟನೆಯಿಂದ ಭಾರತ ಪಾಠ ಕಲಿಯಬೇಕು’ ಎಂದಿದೆ.
ಮುಂದಿನವಾರ ಚೀನದಲ್ಲಿ ನಡೆಯಲಿರುವ ಬ್ರಿಕ್ಸ್ ಶೃಂಗಸಭೆಗೂ ಮೊದಲೇ ಎರಡೂ ರಾಷ್ಟ್ರಗಳು ರಾಜತಾಂತ್ರಿಕ ಮಾತುಕತೆ ಮೂಲಕ ಡೋಕ್ಲಾಂ ಗಡಿ ವಿವಾದಕ್ಕೆ ಒಂದು ತಾರ್ಕಿಕ ಅಂತ್ಯ ಕಂಡುಕೊಂಡಿತ್ತು. ಅದೇ ಪ್ರಕಾರ ಭಾರತವೂ ಗಡಿಯಿಂದ ಸೇನೆಯನ್ನು ಮರಳಿ ಕರೆಯಿಸಿಕೊಳ್ಳಲು ನಿರ್ಧರಿಸಿತ್ತು. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಚೀನ ಸೇನೆ ಹೇಳಿಕೆ ನೀಡಿದೆ. ಜೊತೆಗೆ, ಮಾತುಕತೆಯಂತೆ ಸೇನೆಯನ್ನು ಗಡಿಯಿಂದ ಹಿಂದಕ್ಕೆ ಕರೆಯಿಸಿಕೊಳ್ಳಬೇಕೆ? ಬೇಡವೇ? ಎನ್ನುವ ಬಗ್ಗೆ ಚರ್ಚೆಯೂ ಶುರುವಾಗಿದೆ.
ಮಂಗಳವಾರ ಮಾತನಾಡಿರುವ ಪೀಪಲ್ಸ್ ಲಿಬರೇಷನ್ ಆರ್ಮಿ (ಪಿಎಲ್‌ಎ)ಯ ಹಿರಿಯ ಕರ್ನಲ್ ವೂ ಕಿಯಾನ್, “ಚೀನ ಸೇನೆ ತನ್ನ ಭೂಪ್ರದೇಶವನ್ನು ಉಳಿಸಿಕೊಳ್ಳಲು ಬದ್ಧವಾಗಿದೆ. ರಾಷ್ಟ್ರೀಯ ಭೂಪ್ರದೇಶ ಹಾಗೂ ಸಾರ್ವಭೌಮತ್ವವನ್ನು ಕಾಪಾಡಿಕೊಳ್ಳಲಿದೆ. ಭಾರತ ಡೋಕ್ಲಾಂ ಪ್ರಸ್ಥಭೂಮಿಯಲ್ಲಿನ ಘಟನೆಯಿಂದ ಪಾಠ ಕಲಿಯಬೇಕಿದೆ. ಗಡಿರೇಖೆ ಹಾಗೂ ಅಂತಾರಾಷ್ಟ್ರೀಯ ಗಡಿ ನಿಯಮಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಬೇಕಿದೆ. ಚೀನದೊಂದಿಗೆ ವ್ಯವಹರಿಸುವಾಗ ಶಾಂತಿ ಹಾಗೂ ಜಾಗರೂಕತೆಯಿಂದ ಮುಂದುವರಿಯುವುದನ್ನು ಕಲಿಯಬೇಕಿದೆ. ಅಷ್ಟಕ್ಕೂ ನಾವು ಮುಂದೆಯೂ ಗಡಿ ವಿಚಾರದಲ್ಲಿ ಎಚ್ಚರದಿಂದ ಇರುತ್ತೇವೆ’ ಎಂದಿದ್ದಾರೆ.
ಮಾಧ್ಯಮಗಳಿಗೆ ಹೇಳಿಕೆ ನೀಡಿ, ಟೀಕೆಗಳನ್ನು ಮಾಡುವ ಮೂಲಕ ಗೌರವ ಕಳೆದುಕೊಳ್ಳುತ್ತಾರಷ್ಟೆ. ಶಾಂತಿಯ ಮಾರ್ಗದ ಮೂಲಕ ನಾವು ಗಡಿ ವಿವಾದ ಬಗೆಹರಿಸಿಕೊಂಡಿದ್ದೇವೆ. ಜೊತೆಗೆ ಇದು ನಮಗೆ ಗೌರವ ತಂದುಕೊಟ್ಟಿದೆ.
– ಸುನಿಲ್ ಲಾಂಬಾ, ನೌಕಾದಳ ಸ್ಟಾಫ್ ಅಡ್ಮಿರಲ್ ಮುಖ್ಯಸ್ಥ