ತನ್ನ ನೆಲದಲ್ಲಿ ವಾಕ್ ಸ್ವಾತಂತ್ರ್ಯವನ್ನೇ ಹೊಸಕಿ ಹಾಕಿರುವ ಕಮ್ಯುನಿಸ್ಟ್ ರಾಷ್ಟ್ರ ಚೀನ, ಕೋವಿಡ್ ವಿಚಾರದಲ್ಲೂ ಜನರ ಬಾಯಿ ಬಂದ್ ಮಾಡುತ್ತಿದೆ.
ನ್ಯೂಯಾರ್ಕ್‌ನಲ್ಲಿ ನೆಲೆಸಿರುವ ಚೀನದ ಸಾಮಾಜಿಕ ಕಾರ್ಯಕರ್ತೆ ಯಾಂಗ್ ಎನ್ನುವವರಿಗೆ, ಇಬ್ಬರು ಚೀನೀ ಪ್ರಜೆಗಳು ಅಲ್ಲಿನ ಸರ್ವಾಧಿಕಾರಿ ಸರಕಾರದ ವಿರುದ್ಧ ಪ್ರಕರಣ ದಾಖಲಿಸುವಂತೆ ದುಂಬಾಲು ಬಿದ್ದಿದ್ದರು.
‘ಕೋವಿಡ್ ಸೋಂಕು ತಗುಲಿದ್ದ ನನ್ನ ತಾಯಿ, ನಾಲ್ಕಾರು ಆಸ್ಪತ್ರೆ ಅಲೆದು ಸಾವನ್ನಪ್ಪಿದ್ದಾರೆ’ ಎಂದು ಅವರು ಯಾಂಗ್‌ಗೆ ಮೆಸೇಜ್ ಕಳುಹಿಸಿದ್ದರು. ಈ ರೀತಿ ಹಲವರು ಮೆಸೇಜ್‌ಗಳ ಮೂಲಕ ನೋವು ತೋಡಿಕೊಂಡಿದ್ದಾರೆ.
‘ಸಂಬಂಧಿಕರು ಕಣ್ಮರೆ ಆಗಿದ್ದಾರೆ, ಸಹಾಯ ಮಾಡಿ’ ಅಂತೆಲ್ಲ ದೂರುಗಳು ಬಂದಿವೆ. ಆದರೆ, ಇಂಥವರನ್ನು ಮತ್ತೆ ಸಂಪರ್ಕಿಸಲು ಮುಂದಾದಾಗ, ದೂರುದಾರರ ಧ್ವನಿಯೇ ಬದಲಾಗಿದೆ. ಕೆಲವರು ಮಾತೇ ಆಡುತ್ತಿಲ್ಲ. ಚೀನ ಪೊಲೀಸರು ಸಂತ್ರಸ್ತರ ಬಾಯಿ ಯನ್ನು ಬಲವಂತವಾಗಿ ಮುಚ್ಚಿಸುತ್ತಿದ್ದಾರೆ ಎನ್ನುತ್ತಾರೆ, ಯಾಂಗ್.
ನೆಗೆಟಿವ್ ಮೆಸೇಜ್ ಡಿಲೀಟ್: ಚೀನ ಜನ ಮಾತನಾಡಲು ಸಿದ್ಧರಿದ್ದಾರೆ. ಆದರೆ, ಅಲ್ಲಿಂದ ಹೊರಜಗತ್ತಿಗೆ ಯಾರೇ ರಾಷ್ಟ್ರವಿರೋಧಿ ಮೆಸೇಜ್ ಹಾಕಿದರೂ, ಸೆನ್ಸಾರ್ ಅದನ್ನು ತತ್‌ಕ್ಷಣವೇ ಡಿಲೀಟ್ ಮಾಡುತ್ತಿದೆ. ಜಗತ್ತಿನಲ್ಲಿ ಚೀನ ವಿರೋಧಿ ಅಲೆ ಹೆಚ್ಚುತ್ತಿರುವುದರಿಂದ, ತನ್ನೊಳಗಿನವರ ಆಕ್ರೋಶಗಳು ಹೊರಗಿನವರಿಗೆ ಬಲ ತುಂಬಬಾರದು ಎಂಬ ಕಾರಣಕ್ಕೆ, ಕಮ್ಯುನಿಸ್ಟ್ ರಾಷ್ಟ್ರ ಈ ರಹಸ್ಯ ತಂತ್ರ ಪ್ರಯೋಗಿಸುತ್ತಿದೆ ಎನ್ನಲಾಗಿದೆ.