Advertisement

ಮತ್ತೆ ಚೀನ-ಅಮೆರಿಕ ವ್ಯಾಪಾರ ಸಮರ

05:30 PM Sep 19, 2018 | Team Udayavani |

ವಾಷಿಂಗ್ಟನ್‌/ಬೀಜಿಂಗ್‌: ಅಮೆರಿಕ ಮತ್ತು ಚೀನ ನಡುವಿನ ತೆರಿಗೆ ಸಮರ ತಾರಕಕ್ಕೇರಿದ್ದು, ಮತ್ತೆ ಚೀನದ 14.53 ಲಕ್ಷ ಕೋಟಿ ರೂ. ಮೌಲ್ಯದ ವಸ್ತುಗಳ ಮೇಲೆ ಅಮೆರಿಕ ಶೇ.10 ರಷ್ಟು ಶುಲ್ಕ ಹೇರಿದೆ. ಇದಷ್ಟೇ ಅಲ್ಲ, ಈ ವರ್ಷಾಂತ್ಯಕ್ಕೆ ಈ ತೆರಿಗೆ ಪ್ರಮಾಣವನ್ನು ಶೇ.25ಕ್ಕೆ ಏರಿಕೆ ಮಾಡುವುದಾಗಿಯೂ ಟ್ರಂಪ್‌ ಆಡಳಿತ ಎಚ್ಚರಿಸಿದೆ. ಅಮೆರಿಕದ ಈ ಸ್ವಯಂ ಸುರಕ್ಷತಾ ನೀತಿ ವಿರುದ್ಧ ಕಿಡಿಕಾರಿರುವ ಚೀನ, ಇದೇ ರೀತಿಯಲ್ಲೇ ಅಮೆರಿಕದ ವಸ್ತುಗಳಿಗೆ ತಾವೂ ತೆರಿಗೆ ಹೇರಲು ಸಿದ್ಧರಿದ್ದೇವೆ ಎಂದು ತಿರುಗೇಟು ನೀಡಿದೆ. 

Advertisement

ಈ ವರ್ಷಾರಂಭದಲ್ಲೇ 50 ಲಕ್ಷ ಕೋಟಿ ಡಾಲರ್‌ ಮೌಲ್ಯದ ವಸ್ತುಗಳ ಮೇಲೆ ತೆರಿಗೆ ಹೇರಿಕೆ ಮಾಡಿದ್ದ ಟ್ರಂಪ್‌, ಇಡೀ ಜಗತ್ತಿನ ಕಣ್ಣಿಗೆ ತುತ್ತಾಗಿದ್ದರು. ಅಲ್ಲದೆ ಈಗ ನಡೆಯುತ್ತಿರುವುದು ವಿಶ್ವದ ಮೊದಲ ಮತ್ತು ಎರಡನೇ ಅತಿದೊಡ್ಡ ಆರ್ಥಿಕ ಶಕ್ತಿಗಳ ನಡುವೆ ಯುದ್ಧ. ಇದರ ಅಡ್ಡಪರಿಣಾಮಗಳು ಇಡೀ ಜಗತ್ತಿನ ಮೇಲೆ ಆಗಬಹುದು ಎಂಬ ಆತಂಕವೂ ಎದುರಾಗಿದೆ. ಸೆ. 24ರಿಂದ ಶೇ.10ರ ತೆರಿಗೆ ದರ ಆನ್ವಯವಾಗಲಿದ್ದು, 2019ರ ಜ.1ಕ್ಕೆ ಶೇ.25ಕ್ಕೆ ಏರಿಕೆಯಾಗಲಿದೆ ಎಂದೂ ಟ್ರಂಪ್‌ ಆಡಳಿತ ತಿಳಿಸಿದೆ. ಸುಮಾರು 6000 ವಸ್ತುಗಳ ಮೇಲೆ ಈ ದರ ವ್ಯತಿರಿಕ್ತ ಪರಿಣಾಮ ಬೀರಲಿದೆ. 

ತಿರುಗೇಟು ನೀಡುತ್ತೇವೆ: ಅಮೆರಿಕದ ಈ ನಿರ್ಧಾರ ಚೀನದ ಕಣ್ಣು ಕೆಂಪಾಗಿಸಿದ್ದು, ಸೇರಿಗೆ ಸವ್ವಾಸೇರು ಎಂಬಂತೆ, ಅಮೆರಿಕದ 4.36 ಲಕ್ಷ ಕೋಟಿ ರೂ. ಮೌಲ್ಯದ ವಸ್ತುಗಳ ಮೇಲೆ ಹೆಚ್ಚುವರಿ ಶುಲ್ಕ ಹೇರಿದೆ. ಅಮೆರಿಕ ಇದೇ ರೀತಿ ಶುಲ್ಕ ಹೇರುತ್ತಾ ಹೋದರೆ, ನಾವೂ ಅಲ್ಲಿನ ಎಲ್ಲ ಉತ್ಪನ್ನಗಳ ಮೇಲೂ ಹೆಚ್ಚುವರಿ ಶುಲ್ಕ ಹೇರುತ್ತೇವೆ ಎಂಬ ಎಚ್ಚರಿಕೆ ಸಂದೇಶವನ್ನೂ ಚೀನ ರವಾನಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next