ಬೀಜಿಂಗ್: ಕಳೆದ ವರ್ಷ ಪೂರ್ವ ಲಡಾಖ್ ನ ಗಾಲ್ವಾನ್ ಕಣಿವೆ ಪ್ರದೇಶದಲ್ಲಿ ಭಾರತೀಯ ಸೇನೆ ಮತ್ತು ಚೀನಾ ಸೈನಿಕರ ನಡುವೆ ನಡೆದ ಘರ್ಷಣೆಯಲ್ಲಿ ಐದು ಸೇನಾ ಅಧಿಕಾರಿಗಳು ಹಾಗೂ ಸೈನಿಕರು ಸಾವನ್ನಪ್ಪಿರುವುದಾಗಿ ಇದೇ ಮೊದಲ ಬಾರಿಗೆ ಶುಕ್ರವಾರ(ಫೆ.19, 2021) ಚೀನಾ ಲಿಬರೇಶನ್ ಆರ್ಮಿ ಬಹಿರಂಗ ಹೇಳಿಕೆ ನೀಡಿದೆ.
ಇದನ್ನೂ ಓದಿ:ಮುಂಬಯಿ ಷೇರುಪೇಟೆ ಸೂಚ್ಯಂಕ ಮತ್ತೆ 250 ಅಂಕ ಕುಸಿತ, 15,050ಕ್ಕೆ ಕುಸಿದ ನಿಫ್ಟಿ
2020ರ ಜೂನ್ ನಲ್ಲಿ ಭಾರತೀಯ ಸೇನೆ ಜತೆ ನಡೆದ ಗಡಿ ವಿವಾದದ ಘರ್ಷಣೆಯಲ್ಲಿ ಚೀನಾ ಸೇನೆಯ ಐದು ಅಧಿಕಾರಿಗಳು ಮತ್ತು ಸೈನಿಕರು ಸಾವನ್ನಪ್ಪಿರುವುದಾಗಿ ಪೀಪಲ್ಸ್ ಲಿಬರೇಶನ್ ಆರ್ಮಿಯ ಅಧಿಕೃತ ಸುದ್ದಿ ಪತ್ರಿಕೆ ವರದಿ ಮಾಡಿದೆ. ಆದರೆ ಸಾವನ್ನಪ್ಪಿರುವ ಸೈನಿಕರ ಸಂಖ್ಯೆ ಎಷ್ಟು ಎಂಬುದನ್ನು ಸ್ಪಷ್ಟಪಡಿಸಿಲ್ಲ.
ಲಡಾಖ್ ನ ಗಾಲ್ವಾನ್ ಕಣಿವೆ ಪ್ರದೇಶದಲ್ಲಿ ನಡೆದ ಘರ್ಷಣೆಯಲ್ಲಿ ಪೀಪಲ್ ಲಿಬರೇಶನ್ ಆರ್ಮಿಯ ರೆಜಿಮೆಂಟಲ್ ಕಮಾಂಡರ್ ಕ್ವಿ ಫಬಾವೊ, ಚೆನ್ ಹಾಂಗ್ ಜುನ್, ಚೆನ್ ಕ್ಸಿಯಾನ್ ರಾಂಗ್, ಕ್ಸಿಯಾವೊ ಸಿಯುವಾನ್ ಮತ್ತು ವಾಂಗ್ ಝೌರಾನ್ ಸಾವನ್ನಪ್ಪಿರುವುದಾಗಿ ಪಿಎಲ್ ಎ ಡೈಲಿ ತಿಳಿಸಿರುವುದಾಗಿ ಗ್ಲೋಬಲ್ ಟೈಮ್ಸ್ ವರದಿ ಮಾಡಿದೆ.
ಲಡಾಖ್ ನ ಗಾಲ್ವಾನ್ ಕಣಿವೆ ಪ್ರದೇಶದಲ್ಲಿ ನಡೆದ ಘರ್ಷಣೆಯಲ್ಲಿ ಭಾರತದ 20 ಮಂದಿ ಸೈನಿಕರು ಹುತಾತ್ಮರಾಗಿದ್ದರು. ಆದರೆ ಚೀನಾ ಸೇನೆ ಮಾತ್ರ ಈವರೆಗೂ ತನ್ನ ಸೈನಿಕರ ಸಾವಿನ ಕುರಿತು ಯಾವುದೇ ಅಂಕಿಅಂಶವನ್ನು ಬಹಿರಂಗಪಡಿಸಿಲ್ಲವಾಗಿತ್ತು. ಫೆ.10ರಂದು ರಷ್ಯಾದ ನ್ಯೂಸ್ ಏಜೆನ್ಸಿ ಟಾಸ್, ಘರ್ಷಣೆಯಲ್ಲಿ ಚೀನಾದ 45 ಸೈನಿಕರು ಸಾವನ್ನಪ್ಪಿರುವುದಾಗಿ ವರದಿ ಮಾಡಿದ ನಂತರ ಚೀನಾ ಸೇನೆ ಈ ಹೇಳಿಕೆ ನೀಡಿದೆ.