Advertisement

China ; ಒಲಿಂಪಿಕ್ಸ್‌ ಗಿಂತಲೂ ಮಿಗಿಲಾದ ಬೃಹತ್‌ ಕ್ರೀಡೋತ್ಸವ

11:54 PM Sep 21, 2023 | Team Udayavani |

ಹ್ಯಾಂಗ್‌ಝೂ: ಚೀನ ಮತ್ತೆ ಸುದ್ದಿಯಲ್ಲಿದೆ. ಆಗ ಕೋವಿಡ್‌ನಿಂದಾಗಿ ಚೀನ ಭಾರೀ ಸುದ್ದಿಯಲ್ಲಿದ್ದರೆ ಇದೀಗ ಒಲಿಂಪಿಕ್ಸ್‌ ಗಿಂತಲೂ ಮಿಗಿಲಾದ ಬೃಹತ್‌ ಕ್ರೀಡೋತ್ಸವವನ್ನು ಆಯೋಜಿಸುವ ಮೂಲಕ ಚೀನದ ಹ್ಯಾಂಗ್‌ಝೂ ನಗರ ವಿಶ್ವದ ಗಮನ ಸೆಳೆಯುತ್ತಿದೆ.

Advertisement

ವಿಶ್ವ ಖ್ಯಾತಿಯ ಕ್ರೀಡೆಗಳ ಜತೆ ಗ್ರಾಮೀಣ, ಸ್ಥಳೀಯ ಕ್ರೀಡೆಗಳಿಗೂ ಅವಕಾಶ ಕಲ್ಪಿಸಿದ್ದರಿಂದ ಇದೊಂದು ಬೃಹತ್‌ ಕೂಟವಾಗಿ ಪರಿಣಮಿಸಿದೆ. ಮುಂದಿನ ವರ್ಷದ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ 10,500 ಆ್ಯತ್ಲೀಟ್‌ಗಳು ಭಾಗವಹಿಸುವ ನಿರೀಕ್ಷೆಯಿದ್ದರೆ ಈ ಏಷ್ಯನ್‌ ಗೇಮ್ಸ್‌ನಲ್ಲಿ 12 ಸಾವಿರಕ್ಕಿಂತಲೂ ಹೆಚ್ಚಿನ ಆ್ಯತ್ಲೀಟ್‌ಗಳು ಶನಿವಾರದ ಉದ್ಘಾಟನ ಸಮಾರಂಭದ ವೇಳೆ ಕ್ರೀಡಾಂಗಣ ಪ್ರವೇಶಿಸಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.

ಕ್ರಿಕೆಟ್‌ ಮಾತ್ರವಲ್ಲದೇ ಹಲವು ಸ್ಥಳೀಯ ಕ್ರೀಡೆಗಳು ಈ ಬಾರಿ ಗೇಮ್ಸ್‌ ನಲ್ಲಿ ಆಡಲಾಗುತ್ತದೆ. ಡ್ರ್ಯಾಗನ್‌ ಬೋಟ್‌ ರೇಸಿಂಗ್‌, ಕಿಕ್‌ ವಾಲಿಬಾಲ್‌, ಸ್ಕ್ವಾಷ್‌, ವುಶು (ಚೈನೀಸ್‌ ಮಾರ್ಷಲ್‌ ಆರ್ಟ್ಸ್) ಮತ್ತು ಏಷ್ಯ ಖಂಡದ ಜನಪ್ರಿಯ ಕ್ರೀಡೆಯಾದ ಕಬಡ್ಡಿ ಇರಲಿದೆ. ಒಟ್ಟಾರೆ 481 ವಿವಿಧ ಕ್ರೀಡಾ ವಿಭಾಗಗಳಲ್ಲಿ ಸ್ಫರ್ಧೆ ನಡೆಯಲಿದ್ದು ಚಿಕ್ಕ ರಾಷ್ಟ್ರಗಳಿಗೂ ಪದಕ ಗೆಲ್ಲುವ ಅವಕಾಶವಿದೆ.

ಚೀನ ಬೃಹತ್‌ ದಂಡು
2008ರ ಬೀಜಿಂಗ್‌ ಒಲಿಂಪಿಕ್ಸ್‌ ಮತ್ತು 2010ರ ಗ್ವಾಂಗ್‌ಝೂ ಏಷ್ಯನ್‌ ಗೇಮ್ಸ್‌ನಂತೆ ಈ ಬಾರಿಯೂ ಹ್ಯಾಂಗ್‌ಝೂ ನಗರ ತನ್ನ ದೇಶದ ಸಾಮರ್ಥ್ಯ, ಶಕ್ತಿಯ ಪ್ರದರ್ಶನ ನೀಡಲು ಸಕಲ ರೀತಿ ಯಲ್ಲಿ ಸಿದ್ಧವಾಗಿದೆ. ಮಾತ್ರವಲ್ಲದೇ ಕಳೆದ 10 ಗೇಮ್ಸ್‌ನಲ್ಲಿ ಮಾಡಿದಂತೆ ಪದಕ ಪಟ್ಟಿಯಲ್ಲೂ ಅಗ್ರಸ್ಥಾನ ಉಳಿಸಿಕೊಳ್ಳುವ ನಿರೀಕ್ಷೆ ಇಟ್ಟು ಕೊಂಡಿದೆ. ಕಳೆದ 2018ರ ಜಕಾರ್ತ ಗೇಮ್ಸ್‌ನಲ್ಲಿ ಚೀನ 300ಕ್ಕೂ ಹೆಚ್ಚಿನ ಪದಕ ಗೆದ್ದಿದೆ. ಈ ಬಾರಿ ಗೇಮ್ಸ್‌ ತವರಿನಲ್ಲಿ ನಡೆಯುವ ಕಾರಣ ಚೀನ 886 ಆ್ಯತ್ಲೀಟ್‌ಗಳ ಬೃಹತ್‌ ತಂಡವನ್ನು ಕಣಕ್ಕೆ ಇಳಿಸುತ್ತಿದೆ. ಇದೇ ವೇಳೆ ಭಾರತವು 655 ಆ್ಯತ್ಲೀಟ್‌ಗಳ ಸಹಿತ ಒಟ್ಟಾರೆ 921 ಕ್ರೀಡಾಪಟುಗಳ ದೊಡ್ಡ ದಂಡನ್ನು ಏಷ್ಯನ್‌ ಗೇಮ್ಸ್‌ಗೆ ಕಳುಹಿಸಿದೆ.

ಮರಳಿದ ಕ್ರಿಕೆಟ್‌
2018ರ ಗೇಮ್ಸ್‌ನಲ್ಲಿ ಕೈಬಿಡಲಾಗಿದ್ದ ಕ್ರಿಕೆಟ್‌ ಸ್ಫರ್ಧೆ ಹ್ಯಾಂಗ್‌ಝೂನಲ್ಲಿ ಮರಳಿದೆ. ಟಿ20 ಮಾದರಿಯಲ್ಲಿ ಕ್ರಿಕೆಟ್‌ ಸ್ಪರ್ಧೆ ನಡೆಯಲಿದ್ದು ಭಾರತ, ಪಾಕಿಸ್ಥಾನ, ಬಾಂಗ್ಲಾ ಮತ್ತು ಶ್ರೀಲಂಕಾ ಬಲಿಷ್ಠ ತಂಡಗಳಾಗಿವೆ. ಏಷ್ಯಾಕಪ್‌ ವಿಜೇತ ಭಾರತ ತಂಡ ಇಲ್ಲಿಯೂ ಚಿನ್ನದ ಪದಕ ನಿರೀಕ್ಷೆಯಲ್ಲಿದೆ. ಆದರೆ ಇದೇ ವೇಳೆ ಭಾರತದಲ್ಲಿ ಏಕದಿನ ವಿಶ್ವಕಪ್‌ ನಡೆಯುವ ಕಾರಣ ಕೆಲವು ಪ್ರಮುಖ ಕ್ರಿಕೆಟಿಗರು ಇಲ್ಲಿ ಆಡುತ್ತಿಲ್ಲ.

Advertisement

ಉತ್ತರ ಕೊರಿಯ ತಂಡ
ಕೋವಿಡ್‌ ಸಾಂಕ್ರಮಿಕ ರೋಗದ ಬಳಿಕ ಜಾಗತಿಕ ಕ್ರೀಡಾಸ್ಪರ್ಧೆಗಳಿಂದ ದೂರ ಉಳಿದಿದ್ದ ಉತ್ತರ ಕೊರಿಯವು ಇದೀಗ 200 ಸದಸ್ಯರ ತಂಡವನ್ನು ಹ್ಯಾಂಗ್‌ಝೂಗೆ ಕಳುಹಿಸುತ್ತಿದೆ. ತಾಲಿಬಾನ್‌ ಆಡಳಿತದ ಅಫ್ಘಾನಿಸ್ಥಾನ ದಲ್ಲಿ ವನಿತಾ ಕ್ರೀಡೆ ನಿಷೇಧವಿದ್ದರೂ ಆ ದೇಶದ 17 ವನಿತಾ ಕ್ರೀಡಾಪಟುಗಳು ಸೈಕ್ಲಿಂಗ್‌, ವಾಲಿಬಾಲ್‌ ಮತ್ತು ಆ್ಯತ್ಲೆಟಿಕ್ಸ್‌ನಲ್ಲಿ ಭಾಗವಹಿಸಲಿದ್ದಾರೆ. ಒಲಿಂಪಿಕ್‌ ಕೌನ್ಸಿಲ್‌ ಆಫ್ ಏಷ್ಯಾ ಮತ್ತು ಇಂಟರ್‌ನ್ಯಾಶನಲ್‌ ಒಲಿಂಪಿಕ್‌ ಸಮಿತಿ ಅವರ ನೆರವಿಗೆ ನಿಂತಿದೆ.

Advertisement

Udayavani is now on Telegram. Click here to join our channel and stay updated with the latest news.

Next