Advertisement

ಚಿಮ್ನಿ ಗುಡಿಸುವ ಮಕ್ಕಳು 

03:50 AM Feb 26, 2017 | |

ಉತ್ತರ ಭೂಗೋಲದ ಹಲವೆಡೆ ವರ್ಷದ ಬಹುಭಾಗವೂ ಭಾರೀ ಚಳಿಯಿರುವುದರಿಂದ ಮನೆಯನ್ನು ಬೆಚ್ಚಗಿರಿಸುವ ವ್ಯವಸ್ಥೆ ಅಗತ್ಯವಾಗುತ್ತದೆ. ವಿದ್ಯುತ್ಛಕ್ತಿಯ ಶೋಧನೆಗೆ ಹಿಂದೆ, ಈಗಲೂ ವಿದ್ಯುತ್ಛಕ್ತಿ ಇಲ್ಲದೆಡೆ, ಮನೆಯೊಳಗೇ ಅಗ್ಗಿಷ್ಟಿಕೆ ಉರಿಸುವುದು ಕ್ರಮ. ಇದಕ್ಕೆ ಕಟ್ಟಿಗೆ ಅಥವಾ ಇದ್ದಿಲನ್ನು ಬಳಸುತ್ತಿದ್ದರು. ಬೆಂಕಿ ಸರಾಗವಾಗಿ ಉರಿಯಲು ಗಾಳಿ ಅದರ ಮೇಲೆ ಸುಗಮವಾಗಿ ಹಾದು ಹೋಗಲೆಂದು ಉರಿವ ಒಲೆ ಮೇಲೊಂದು ಸಪುರವಾದ ಕೊಳವೆಯನ್ನು ಹೊಂದಿಸಲಾಗುತ್ತಿತ್ತು. ಈ ಕೊಳವೆಗೆ ಚಿಮ್ನಿ ಎಂದು ಹೆಸರು. ಕೆಲವು ಮನೆಗಳಲ್ಲಿ ಇದು ನೇರವಾಗಿದ್ದರೆ, ಮನೆಗಳ ಆಕಾರವನ್ನು ಹೊಂದಿಕೊಂಡು ಇನ್ನು ಕೆಲವೆಡೆ ಇದು ಓರೆಕೋರೆಯಾಗಿ ಇರುತ್ತಿತ್ತು. ಸದಾ ಕಾಲ ಬೆಂಕಿ ಉರಿಯುತ್ತಿದ್ದ ಕಾರಣ ಚಿಮ್ನಿಯ ಒಳಭಾಗದಲ್ಲಿ ಬೂದಿ ಮತ್ತು ಮಸಿ ತುಂಬುವುದು ಸಹಜವೇ. ಇದನ್ನು ಕಾಲ ಕಾಲಕ್ಕೆ ಗುಡಿಸಿ ಸ್ವತ್ಛಗೊಳಿಸದಿದ್ದರೆ ಮಸಿಯಲ್ಲಿರುವ ದ್ರವ್ಯಕ್ಕೆ ಬೆಂಕಿ ಹಿಡಿದು ಇಡೀ ಮನೆ ಹೊತ್ತಿ ಉರಿಯುವ ಅಪಾಯವಿತ್ತು. ಹದಿನೆಂಟನೆಯ ಶತಮಾನದಲ್ಲಿ ಕೈಗಾರಿಕಾ ಕ್ರಾಂತಿ ಶುರುವಾಗಿ ನಗರ ಪ್ರದೇಶಗಳಿಗೆ ಜನ ಹೆಚ್ಚೆಚ್ಚು ವಲಸೆ ಬರತೊಡಗಿದ್ದರಿಂದ ಇಂಥ ಚಿಮ್ನಿ ಮನೆಗಳ ಸಂಖ್ಯೆ ಜಾಸ್ತಿಯಾಯಿತು. ಆಗ ಹುಟ್ಟಿಕೊಂಡದ್ದು ಚಿಮ್ನಿ ಸ್ವೀಪಿಂಗ್‌ ಎಂಬ ಒಂದು ಹೊಸ ಉದ್ಯೋಗ. ಇದರಲ್ಲಿ ತೊಡಗಿದವರನ್ನು ಚಿಮ್ನಿ-ಸ್ವೀಪ್ಸ್‌ ಅಥವಾ ಚಿಮ್ನಿ-ಸ್ವೀಪರ್ ಎಂದು ಕರೆಯಲಾಗುತ್ತಿತ್ತು. ಒಂದೊಂದು ಪ್ರದೇಶಕ್ಕೂ ಒಬ್ಬೊಬ್ಬ ಮಾಸ್ಟರ್‌ ಸ್ವೀಪ್‌ ಇರುತ್ತಿದ್ದ. ಅವನ ಕೈಕೆಳಗೆ ಕೆಲವು ಮರಿ ಸ್ವೀಪ್ಸ್‌ .  ಮರಿ ಸ್ವೀಪ್ಸ್‌ ಎಂದರೆ ಚಿಕ್ಕ ಬಾಲಕರು. ಇವರು ನಿರ್ಗತಿಕರಾಗಿ, ಅನಾಥರಾಗಿ ಈ ಕೆಲಸಕ್ಕೆ ಬಂದವರಾಗಿದ್ದರು. ಒಂದೋ ಇವರ ಹೆತ್ತವರು ಇವರನ್ನು ಮಾರಿಬಿಟ್ಟಿದ್ದರು, ಇಲ್ಲವೇ ಆಗಿನ ಕಾಲದಲ್ಲಿ ಪ್ರಚಲಿತವಿದ್ದ  “ವರ್ಕ್‌ಹೌಸ್‌’ ಎಂಬ ಸರಕಾರಿ ಶ್ರಮಾಲಯಗಳಿಂದ ಇವರನ್ನು ಹಾರಿಸಿ ತರಲಾಗುತ್ತಿತ್ತು. ಈ ಚಿಮ್ನಿ ಸ್ವೀಪ್ಸ್‌ ಗಳ ಕೈಯಲ್ಲೊಂದು ಪೊರಕೆ ಮತ್ತು ಮಸಿ ತುಂಬುವ ಚೀಲ, ಮೈಗೆ ಕಪ್ಪಾದ ಒಂದು ನಿಲುವಂಗಿಯ ಥರದ್ದು. ಎಂದೂ ತೊಳೆಯದ ಅದೇ ಬಟ್ಟೆಯಲ್ಲಿ ಅವರು ನಿದ್ದೆ ಮಾಡುತ್ತಿದ್ದುದು ಕೂಡ. ಒಬ್ಬೊಬ್ಬ ಮಾಸ್ಟರ್‌ ಸ್ವೀಪ್‌ಗ್ಳ ಕೈಕೆಳಗೂ ಇಂಥ ಕೆಲವು ಮರಿ ಸ್ವೀಪ್‌ಗ್ಳಿದ್ದರು. ನಿಜವಾಗಿಯೂ ಚಿಮ್ನಿಗಳನ್ನು ಗುಡಿಸುತ್ತಿದ್ದುದು ಈ ಮರಿಗಳೇ. 

Advertisement

ಯಾಕೆ ಈ ಬಾಲಕರನ್ನು ಇಂಥ ಕಠಿಣವೂ ಅಪಾಯಕಾರಿಯೂ ಆದ ಕೆಲಸಕ್ಕೆ ಇಳಿಸುತ್ತಿದ್ದರು ಎಂದು ಕೇಳಬಹುದು. ಮೊದಲನೆಯದಾಗಿ, ಶಿಶು ಶೋಷಣೆ ಅಂದಿನ ಕಾಲದಲ್ಲಿ ಸಾಮಾನ್ಯವಾಗಿತ್ತು; ಎರಡನೆಯದಾಗಿ, ಅತ್ಯಂತ ಬಡವರು ತಮ್ಮ ಮಕ್ಕಳನ್ನು ಸಾಕಲಾರದೆ ಮಾರಿಬಿಡುವುದೂ ಸಾಮಾನ್ಯವಾಗಿತ್ತು. ಮಾಸ್ಟರ್‌ ಸ್ವೀಪ್ಸ್‌ ಇಂಥವರನ್ನು ಕಲೆಹಾಕಿ ಅವರಿಗೆ ತರಬೇತಿ ನೀಡಿ ದುಡಿಸಿ ಹಣ ಸಂಪಾದಿಸುತ್ತಿದ್ದರು. ಚಿಮ್ನಿ ಗುಡಿಸುವುದು ಆ ಕಾಲದಲ್ಲಿ ಬಹಳ ಬೇಡಿಕೆಯಲ್ಲಿದ್ದ ಉದ್ಯಮವಾಗಿತ್ತು. ಇದಕ್ಕೆ ಬಾಲಕರೇ ಯಾಕೆ ಎಂದರೆ, ಚಿಮ್ನಿಗಳ ಒಳಕ್ಕೆ ದೊಡ್ಡವರಿಂದ ನುಗ್ಗುವುದು ಸಾಧ್ಯವಿರುತ್ತಿರಲಿಲ್ಲ. 

ಈ ಚಿಮ್ನಿ ಸ್ವೀಪರ್ ಬಗ್ಗೆ ನನಗೆ ಮೊತ್ತ ಮೊದಲು ತಿಳಿದುದು ನಾನು ಎಂ.ಎ. ಮಾಡುತ್ತಿದ್ದಾಗ ಪಠ್ಯವಾಗಿದ್ದ ಚಾರ್ಲ್ಸ್‌ ಲ್ಯಾಂಬ್‌ನ ಪ್ರಬಂಧಗಳಿಂದ. 18-19ನೆಯ ಶತಮಾನದ ಚಾರ್ಲ್ಸ್‌ ಲ್ಯಾಂಬ್‌ ಮತ್ತು ಅವನ ಅಕ್ಕ ಮೇರಿ ಲ್ಯಾಂಬ್‌ ಇಂಗ್ಲಿಷ್‌ ಸಾಹಿತ್ಯದಲ್ಲಿ ಚಿರಂತನ ಹೆಸರುಗಳು. ಟೇಲ್ಸ್‌ ಫ‌ಮ್‌ ಶೇಕ್ಸ್‌ಪಿಯರ್‌ ಎಂಬ ಸುಪ್ರಸಿದ್ಧ ಪುಸ್ತಕ ಬರೆದವರು ಅವರೇ. ಚಾರ್ಲ್ಸ್‌ ಲ್ಯಾಂಬ್‌ ಎಸ್ಸೆಗಳಿಗಾಗಿಯೂ ಪ್ರಸಿದ್ಧ. The Praise of Chimney-sweepers ಎಂಬ ಅವನದೊಂದು ಪ್ರಬಂಧ (ಎಸ್ಸೆ) ಇದೆ. ಅದರಲ್ಲವನು ತನ್ನದೇ ವಿಶಿಷ್ಟ ಶೈಲಿಯಲ್ಲಿ ಈ ಮುಗ್ಧ ಬಾಲಕಾರ್ಮಿಕರ ಬಗ್ಗೆ ಆದ್ರìವಾಗಿ ಬರೆಯುತ್ತಾನೆ. 

ಈ ಪುಟ್ಟ ಜಾಡಮಾಲಿಗಳನ್ನು ತಾನು ಕಾಣಲು ಬಯಸುತ್ತೇನೆ; ದೊಡ್ಡ ಮಾಲಿಗಳನ್ನಲ್ಲ, ಇನ್ನೂ ತಾಯ ಮಾಸು ಕದಪಿನಿಂದ ಮಾಯದವರನ್ನು. ನಸುಕಿಗೆ ಅಥವಾ ಅದಕ್ಕೂ ಮೊದಲೇ. ತಮ್ಮ ಕಸುಬಿನ ಕೂಗನ್ನು ಗುಬ್ಬಿ ಹಕ್ಕಿಗಳಂತೆ, “ಪೀಪ್‌ ಪೀಪ್‌’ ಎಂದು ಕೂಗುತ್ತ, ಎನ್ನುತ್ತಾನೆ ಲ್ಯಾಂಬ್‌. ಈ ಮಾಸಲು ಚುಕ್ಕೆಗಳ ಬಗ್ಗೆ, ಈ ಮುಗ್ಧ ಕಪ್ಪುಗಳ ಬಗ್ಗೆ, ತನಗೆ ಪ್ರತ್ಯೇಕವಾದ ಒಲವಿದೆ, ಎನ್ನುತ್ತಾನೆ. ನಮ್ಮದೇ ಮೂಲದ ಈ ಎಳೆ ಆಫ್ರಿಕನ್ನ‌ರನ್ನು ನಾನು ಗೌರವಿಸುತ್ತೇನೆ; ಕಪ್ಪು ಗೌನು ತೊಟ್ಟು , ಆದರೆ ಗರ್ವ ತೋರದೆ, ಇನ್ನೇನು ಚರ್ಚಿನ ಪುರೋಹಿತರೇ ಆಗಿ ತಮ್ಮ ಪುಟ್ಟ ಪ್ರವಚನವೇದಿಕೆಗಳ ಮೇಲಿಂದ (ಅರ್ಥಾತ್‌ ಚಿಮ್ನಿ ತುದಿಗಳಿಂದ), ಚುಚ್ಚುವ ಚಳಿಗಾಳಿ ಡಿಸೆಂಬರಿನ ಬೆಳಗಾತ, ಮನುಕುಲಕ್ಕೆ ಸಹನೆಯ ಪಾಠ ಬೋಧಿಸುವ ಇವರ ಕುರಿತಾಗಿ. (ಇವರೇನೂ ಆಫ್ರಿಕನ್ನರಲ್ಲ, ಮಸಿ ಹಿಡಿದು ಕರ್ರಗಿದ್ದಾರೆ ಅಷ್ಟೆ.) 

ತಾನು ಮಗುವಾಗಿದ್ದಾಗ ಇವರ ಕೆಲಸ ನೋಡುವುದು ಎಷ್ಟು ಅದ್ಭುತವಾಗಿತ್ತು ಎಂದು ಲ್ಯಾಂಬ್‌ ನೆನೆದುಕೊಳ್ಳುತ್ತಾನೆ. ತನಗಿಂತ ಹೆಚ್ಚೇನೂ ದೊಡ್ಡವನಲ್ಲದ ಒಬ್ಬ ಪುಟಾಣಿ, ಅದು ಹೇಗೋ ಗೊತ್ತಿಲ್ಲ, ನರಕದ ಸುರಂಗದಂತಿರುವ ಕೊಳವೆಯನ್ನು ಹೊಕ್ಕು, ಇನ್ನೇನು ಆ ಕರಾಳ ಗಹ್ವರಗಳಲ್ಲಿ, ಕಪ್ಪು ಕತ್ತಲುಗಳಲ್ಲಿ ಕಳೆದು ಹೋದನೇ ಎಂದು ಎದೆ ಢವ ಢವ ಎಂದು ಬಡಿದುಕೊಳ್ಳುತ್ತಿರುವಾಗ, ಮಾಯಕದಲ್ಲಿ ಎಂಬಂತೆ ಎಲ್ಲಿಂದಲೋ ಅವನು ಪ್ರತ್ಯಕ್ಷವಾಗುತ್ತಿದ್ದ, ತನ್ನ ಕಸಬರಿಕೆಯನ್ನು ಒಂದು ಧ್ವಜದಂತೆ ಎತ್ತಿ ಹಿಡಿದುಕೊಂಡು, ದುರ್ಗವೊಂದನ್ನು ಗೆದ್ದು ಬಂದವನ ಹಾಗೆ!

Advertisement

    ಅಂಥವನ ಕಂಡರೆ ಒಂದು ಪೆನ್ನಿ ಕೊಡಿ, ಇಲ್ಲ ಎರಡು ಪೆನ್ನಿ ಕೊಡಿ ಎನ್ನುತ್ತಾನೆ. “Reader, if thou meetest one of these small gentry in thy early rambles, it is good to give him a penny. It is better to give him two-pence. ” 

    ಇತಿಹಾಸ ಪ್ರಸಿದ್ಧ ಅರುಂಡೇಲ್‌ ಮಹಲಿನಲ್ಲಿ ಹೀಗೆ ಒಮ್ಮೆ ಕಳೆದು ಹೋದ ಚಿಮ್ನಿ ಹುಡುಗನೊಬ್ಬ ಬಹಳಷ್ಟು ಹುಡುಕಿದ ಮೇಲೆ ಮಧ್ಯಾಹ್ನದ ಹೊತ್ತಿನಲ್ಲಿ ಅಲ್ಲಿನ ಒಂದಾನೊಂದು ಮಲಗುಕೋಣೆಯ ಹಂಸತೂಲಿಕಾತಲ್ಪದಂಥ ಸುಪ್ಪತ್ತಿಗೆಯಲ್ಲಿ ತನ್ನ ಮಸಿಹಿಡಿದ ತಲೆಯನ್ನಿರಿಸಿ ಸುಖನಿದ್ರೆಯಲ್ಲಿ ತಲ್ಲೀನನಾದುದು ಕಂಡುಬಂದ ಘಟನೆಯೊಂದನ್ನೂ ಲ್ಯಾಂಬ್‌ ಬಹಳ ಆಪ್ತವಾಗಿ ವಿವರಿಸುತ್ತಾನೆ. ಇಂಥದೊಂದು ದೃಶ್ಯ ಯಾರದೇ ಮನ ಕರಗಿಸುವಂಥದು. 
    ಲ್ಯಾಂಬಿಗಿಂತಲು ಮೊದಲು ಈ ಪಾಪದ ಕಂದಮ್ಮಗಳ ಬಗ್ಗೆ ಎರಡೆರಡು ಕವಿತೆಗಳನ್ನು ಬರೆದವನು ಲ್ಯಾಂಬಿನ ಹಿರಿಯ ಸಮಕಾಲೀನ ವಿಲಿಯಂ ಬ್ಲೇಕ್‌: Songs of Innocenceನಲ್ಲಿ ಒಂದು (When my mother died) ಮತ್ತು Songs of Experienceನಲ್ಲಿ ಇನ್ನೊಂದು (A little black thing among the snow). ಎರಡೂ ಕವಿತೆಗಳಲ್ಲಿ ಲ್ಯಾಂಬಿನಂಥದೇ ಆದ್ರìತೆ ಕಾಣಿಸುತ್ತದೆ. ಮೊದಲ ಕವಿತೆಯ ಆರಂಭವನ್ನು ನೋಡಿ:
When my mother died I was very young, 
And my father sold me while yet my tongue 
Could scarcely cry ” ‘weep! ‘weep! ‘weep! ‘weep!” 
So your chimneys I sweep & in soot I sleep

 ಎಂಬ ಪದ ಎರಡನೆಯ ಕವಿತೆಯ ಆರಂಭದಲ್ಲೂ ಬರುತ್ತದೆ: 
A little black thing among the snow, 
Crying “weep! ‘weep!” in notes of woe! 
“Where are thy father and mother? say?” 
“They are both gone up to the church to pray. 
 ಇದರಲ್ಲೊಂದು ಕಾವ್ಯಾತ್ಮಕ ವ್ಯಂಗ್ಯವನ್ನು ಬ್ಲೇಕ್‌ ತಂದಿದ್ದಾನೆ: ಈ ಹುಡುಗರು ಬೀದಿ ಅಲೆಯುತ್ತ ನಿಜಕ್ಕೂ ಕೂಗುವುದು sweep O sweep ಎಂಬ ತಮ್ಮ ಕಸುಬುಗಾರಿಕೆಯ ಪದವನ್ನು; ಆದರೆ ಅದರೊಳಗೆ sweep O sweep ಯಾವಾಗಲೂ ಇರುತ್ತದೆ ಎನ್ನುವುದು ಬ್ಲೇಕ್‌ನ ಎಚ್ಚರಿಕೆ! 

    ಕಾಲಕ್ರಮೇಣ ಈ ಶಿಶು ಶೋಷಣೆ ಯುರೋಪಿನಲ್ಲೂ ಇತರ ದೇಶಗಳಲ್ಲೂ ಇಲ್ಲವಾಗಿದೆ; ಅದಕ್ಕೆ ಕಾರಣ ಜನರ ಮನೋಧರ್ಮ ಬದಲಾದುದು, ಕಾನೂನುಗಳು ಬಂದುದು ಮಾತ್ರವೇ ಅಲ್ಲ; ವಿದ್ಯುತ್ತಿನ ಶೋಧನೆಯಿಂದ ಮನೆಗಳನ್ನು ಹೊಸ ರೀತಿಯಿಂದ ಬೆಚ್ಚಗೆ ಇಟ್ಟುಕೊಳ್ಳಲು ಸಾಧ್ಯವಾದುದು ಕೂಡ ಕಾರಣ. ಲ್ಯಾಂಬಿನಲ್ಲಾಗಲಿ, ಬ್ಲೇಕಿನಲ್ಲಾಗಲಿ ಕರುಣೆಯಿದೆಯಾದರೂ ಚಿಮ್ನಿ ಗುಡಿಸುವುದರ ವಿರುದ್ಧ ರೊಚ್ಚೇನೂ ಇಲ್ಲ; ಆಗಿನ ಕಾಲದಲ್ಲಿ ಅದಕ್ಕೆ ಪರ್ಯಾಯ ಮಾರ್ಗವೊಂದನ್ನು ಊಹಿಸುವುದು ಕಷ್ಟಸಾಧ್ಯವಾಗಿತ್ತು. ಈಗ ಇದೆಲ್ಲ ಚರಿತ್ರೆಗೆ ಸರಿದಿದ್ದರೂ ಚರಿತ್ರೆಯನ್ನು ಮರೆಯಬಾರದು. ನಾವು ಚರಿತ್ರೆಯನ್ನು ಮರೆತರೆ ಚರಿತ್ರೆ ನಮ್ಮನ್ನು ಮರೆಯುತ್ತದೆ. 

ಕೆ. ವಿ. ತಿರುಮಲೇಶ್‌

Advertisement

Udayavani is now on Telegram. Click here to join our channel and stay updated with the latest news.

Next