ಚಿಂಚೋಳಿ: ತಾಲೂಕಿನಲ್ಲಿ ದಿನೇ-ದಿನೇ ಹೆಚ್ಚುತ್ತಿರುವ ಬಿಸಿಲಿನ ತಾಪದಿಂದಾಗಿ ಮುಲ್ಲಾಮಾರಿ ನದಿ ಸಂಪೂರ್ಣ ಬತ್ತಿದೆ. ಅಲ್ಲಲ್ಲಿ ನಿಂತುಕೊಂಡಿದ್ದ ನೀರು ಹೊಲಸು ವಾಸನೆ ಮತ್ತು ಹಸಿರು ಬಣ್ಣಕ್ಕೆ ತಿರುಗಿದೆ. ಇದರಿಂದ ಕುಡಿಯಲು ಯೋಗ್ಯವಲ್ಲದ ಕಾರಣ ಪಟ್ಟಣದ ಸಾರ್ವಜನಿಕರಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ.
ತಾಲೂಕಿನ ನಾಗರಾಳ ಗ್ರಾಮದ ಬಳಿಯಲ್ಲಿ ಇರುವ ಕೆಳದಂಡೆ ಮುಲ್ಲಾಮಾರಿ ಜಲಾಶಯದಿಂದ ಪ್ರತಿ ವರ್ಷ ಬೇಸಿಗೆ ದಿನಗಳಲ್ಲಿ ಹದಿನೈದು ದಿನಕ್ಕೊಮ್ಮೆ ನದಿಗೆ ನೀರು ಹರಿದು ಬಿಡಲಾಗುತ್ತಿತ್ತು. ಇದರಿಂದ ನದಿ ಪಾತ್ರದ ಗ್ರಾಮಗಳಾದ ಚಿಮ್ಮನಚೋಡ, ತಾಜಲಾಪೂರ, ಕನಕಪೂರ, ಗಾರಂಪಳ್ಳಿ, ಗೌಡನಹಳ್ಳಿ, ನಿಮಾಹೊಸಳ್ಳಿ, ಚಿಂಚೋಳಿ, ಅಣವಾರ, ಪರದಾರ ಮೋತಕಪಳ್ಳಿ, ಗರಗಪಳ್ಳಿ, ಇರಗಪಳ್ಳಿ, ಕರ್ಚಖೇಡ ಮತ್ತು ಜಟ್ಟುರ, ಹಲಕೋಡ, ಪೋತಂಗಳು ಸೇರಿದಂತೆ ಸೇಡಂ ತಾಲೂಕಿನ ಅನೇಕ ಗ್ರಾಮಗಳಿಗೆ ಕುಡಿಯುವ ನೀರು ಉಪಯೋಗವಾಗುತ್ತಿತ್ತು.
ಆದರೆ ತಾಲೂಕಿನಲ್ಲಿ ಭೀಕರ ಬರಗಾಲ ಆವರಿಸಿಕೊಂಡಿದೆ. ದನಕರುಗಳಿಗೆ ಅಡವಿಯಲ್ಲಿ ಕುಡಿಯಲು ನೀರಿಲ್ಲ. ಆಹಾರಕ್ಕೆ ಮೇವು-ಹುಲ್ಲು ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ನದಿಯಲ್ಲೂ ನೀರಿಲ್ಲದ ಕಾರಣ ಅನೇಕ ಗ್ರಾಮಸ್ಥರು ತೊಂದರೆ ಪಡಬೇಕಾಗಿದೆ. ಫೆ.11ರಿಂದ ಕೇವಲ ಒಂದು ವಾರ ನದಿಗೆ ನೀರು ಬಿಟ್ಟದ್ದರಿಂದ ಈಗ ಮತ್ತೆ ನದಿಯಲ್ಲಿ ನೀರಿಲ್ಲದಂತಾಗಿದೆ. ಕೊಳವೆಬಾವಿ ಮತ್ತು ಸಾರ್ವಜನಿಕ ಬಾವಿಗಳು ಬತ್ತುತ್ತಿವೆ. ಕೂಡಲೇ ಮುಲ್ಲಾಮಾರಿ ನದಿಗೆ ನೀರು ಹರಿದು ಬಿಡುವಂತೆ ಈ ಭಾಗದ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಚಿಂಚೋಳಿ- ಚಂದಾಪುರ ಅವಳಿ ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡುವುದಕ್ಕಾಗಿ ಹನುಮಾನ ಮಂದಿರ ಹಿಂಭಾಗದಲ್ಲಿ ಮುಲ್ಲಾಮಾರಿ ನದಿಗೆ ಅಡ್ಡಲಾಗಿ ನಿರ್ಮಿಸಿದ ಬ್ಯಾರೇಜ್‌ನಲ್ಲಿ ನೀರಿನ ಪ್ರಮಾಣ ಕಡಿಮೆ ಇದೆ. ಇದರಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡಲು ಆಗುತ್ತಿಲ್ಲ. ಚಂದಾಪುರ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ.
.ಸಂತೋಷ ಗುತ್ತೆದಾರ,
ಆರೋಗ್ಯ ರಕ್ಷಕ ಸಮಿತಿ ನಿರ್ದೇಶಕ