Advertisement

ಮಕ್ಕಳು ಅನಾವರಣಗೊಳಿಸಿದ ಅಧ್ವಾನಪುರ

06:00 AM Jun 01, 2018 | |

ಪ್ರಸ್ತುತ ರಂಗಭೂಮಿಯ ಸಂದರ್ಭದಲ್ಲಿ ಮಕ್ಕಳ ರಂಗಭೂಮಿಯನ್ನು ಬಹಳ ಗಂಭೀರವಾಗಿ ಪರಿಗಣಿಸಿ ನಾಡಿನೆಲ್ಲೆಡೆ ಬೇಸಿಗೆಯ ರಜಾ ಅವಧಿಯಲ್ಲಿ ಮಕ್ಕಳ ರಂಗಶಿಬಿರವನ್ನು ಏರ್ಪಡಿಸಲಾಗುತ್ತಿದೆ. ಬೈಂದೂರಿನ “ಲಾವಣ್ಯ’ ಸಂಸ್ಥೆ ಏರ್ಪಡಿಸಿದ ರಂಗಶಿಬಿರದಲ್ಲಿ ರೂಪುಗೊಂಡ ನಾಟಕ ಅಧ್ವಾನಪುರ. ಎಚ್‌. ಡುಂಡಿರಾಜ್‌ ರಚಿಸಿದ ನಾಟಕದ ವಿನ್ಯಾಸ, ನಿರ್ದೇಶನ, ಸಂಗೀತವನ್ನು ನಿಭಾಯಿಸಿದವರು ವಾಸುದೇವ ಗಂಗೇರ. ರೋಶನ್‌ ಕುಮಾರ್‌ ಸಹ ನಿರ್ದೇಶನವಿತ್ತು. 

Advertisement

ವರ್ತಮಾನದ ರಾಜಕೀಯ ಭಿತ್ತಿಯಲ್ಲಿ ರಾಜಕಾರಣಿಗಳನ್ನು ಐತಿಹಾಸಿಕ ರಾಜ, ಮಂತ್ರಿಗಳಂತೆ ಚಿತ್ರಿಸಿ, ಮಹಾರಾಜರ ಅರ್ಥಾತ್‌ ವರ್ತಮಾನದ ಮುಖ್ಯಮಂತ್ರಿಗಳು ಮತ್ತು ಮಂತ್ರಿಗಳ ಲೋಲುಪತೆಯನ್ನು ಚಿತ್ರಿಸಿ ಜನರ ಅಧ್ವಾನವನ್ನು ಅನಾವರಣಗೊಳಿಸಿದ ನಾಟಕ ಇದಾಗಿದೆ. ರಾಜಕಾರಣಿಗಳು ತಮ್ಮ ಗೋಸುಂಬೆತನವನ್ನು ಪ್ರದರ್ಶಿಸಿ ಹೇಗೆ ಬಣ್ಣ ಬದಲಿಸುತ್ತಾರೆ, ಜನರನ್ನು ಮಂಕಾಗಿಸುತ್ತಾರೆ, ಒಡೆದು ಆಳುತ್ತಾರೆ ಎನ್ನುವುದೇ ಇಲ್ಲಿನ ಕಥಾವಸ್ತು.

ನಾಟಕ ಆದಿಯಿಂದಲೂ ಲವಲವಿಕೆಯಿಂದ ಸಾಗುತ್ತದೆ. ರಾಜನ ತಿಕ್ಕಲುತನ, ವೈಭವ, ಲೋಲುಪತೆಗಳನ್ನು ದೃಶ್ಯಗಳು ಸಮರ್ಥವಾಗಿ ಅಭಿವ್ಯಕ್ತಿಸಿವೆ. ಮಂತ್ರಿಗಳ ಲಾಭಕೋರತನವನ್ನು ಹಂತಹಂತದಲ್ಲೂ ಅಭಿವ್ಯಕ್ತಗೊಳಿಸಲಾಗಿದೆ. ಕಥೆಯಲ್ಲಿನ ಗೊಂಬೆ ಉತ್ತಮ ರಂಗನೆಡೆ ಮತ್ತು ಸಂಭಾಷಣೆಗಳಿಂದ ಶಿಥಿಲಗೊಳ್ಳುವ ಕಥೆಯನ್ನು ಹಾದಿಗೆ ತರುತ್ತದೆ. ಗಂಟೆ ರಾಜ ಜನರಿಗೆ ಭರಪೂರ ಭರವಸೆ ನೀಡಿ ಅಂತಿಮವಾಗಿ ಮದ್ಯದ ಅಮಲಿನಲ್ಲಿ ಅವರನ್ನು ಕೆಡಹುತ್ತಾನೆ.

ಯುವರಾಜನಾಗ ಹೊರಟ ನಿರ್ದೇಶಕ ಗೊಂಬೆಯೊಡನೆ ಸೇರಿ ಭ್ರಷ್ಟತೆ ರಹಿತವಾದ ಹೊಸ ನಾಡನ್ನು ನೈಜ ಪ್ರಜಾಪ್ರಭುತ್ವದ ಸ್ಥಾಪನೆಯ ಆಶಯದೊಂದಿಗೆ ನಿರ್ಮಿಸ ಹೊರಡುವಲ್ಲಿ ನಾಟಕ ಕೊನೆಗಾಣುತ್ತದೆ. ಉತ್ತಮ ರಂಗ ಚಲನೆ, ದೃಶ್ಯ ಸಂಯೋಜನೆ, ಅಭಿನಯ ನಾಟಕದ ಪ್ಲಸ್‌ ಪಾಯಿಂಟ್‌. ಪ್ರಸಾದನ, ಧ್ವನಿ, ಬೆಳಕು ನಾಟಕಕ್ಕೆ ಬಲ ಒದಗಿಸಿವೆ. ನಾಟಕದಲ್ಲಿ ಆಗಾಗ ಕಾಣಿಸಿಕೊಳ್ಳುವ ನೃತ್ಯಗಳು ನಾಟಕಕ್ಕೆ ಪೂರಕವಾಗಿವೆ. ಮಧುರ ಧ್ವನಿಯ ಹಿನ್ನೆಲೆ ಸಂಗೀತವು ವೈವಿದ್ಯತೆಯೊಂದಿಗೆ ನಾಟಕಕ್ಕೆ ಶಕ್ತಿ ತುಂಬಿದೆ.

ಮೂಲಕಥೆಯ ಕಿರು ಎಳೆಯನ್ನಷ್ಟೇ ಆಧಾರವಾಗಿಸಿಕೊಂಡು ಪ್ರದರ್ಶನದ ಅನುಕೂಲತೆಗೆ ಅನುಸಾರವಾಗಿ ನಿರ್ದೇಶಕರು ಸಾಕಷ್ಟು ಬದಲಾವಣೆಗಳನ್ನು ಮಾಡಿಕೊಂಡಿದ್ದಾರೆ. ರಾಜನ ಲೋಲುಪತೆಯ ಅಭಿವ್ಯಕ್ತಿಗಾಗಿ ಬಳಸಿದ ಅಶ್ಲೀಲ ಅರ್ಥ ಧ್ವನಿಸುವ ವಾಗ್ಬಾಣಗಳು ಹಾವಭಾವಗಳು ಸೌಜನ್ಯದ ಸೀಮೆಯನ್ನು ಮೀರಿ ಮುಜುಗರಕ್ಕೆ ಎಡೆಮಾಡಿವೆ. ಮಕ್ಕಳ ಮನೋಭೂಮಿಕೆಗೆ ಅನುಕೂಲವಲ್ಲದ ಕಥಾವಸ್ತುವನ್ನು ಆಯ್ಕೆ ಮಾಡಿದ್ದರಲ್ಲಿ ನಿರ್ದೇಶಕರು ಮಿತಿಗೊಳಗಾಗಿದ್ದಾರೆ. ಕೆಲ ಹಾಡುಗಳು ಮೂಲ ಕಥಾವಸ್ತುವಿನೊಂದಿಗೆ ಬೆರೆಯದೆ, ರಂಜನೆಯನ್ನು ನೀಡಿದವೇ ಹೊರತು ಕಥಾ ಸಂವಹನಕ್ಕೆ ಪೂರಕವಾಗದೆ ಹೋದವು. ಒಟ್ಟಿನಲ್ಲಿ ನಲವತ್ತಕ್ಕೂ ಹೆಚ್ಚು ಮಕ್ಕಳು ನಟನೆಯ ಪಾಠಗಳನ್ನು ಅಲ್ಪಾವಧಿಯ ಶಿಬಿರದಲ್ಲಿ ಲವಲವಿಕೆಯಿಂದ ಕಲಿತುಕೊಳ್ಳುವ ಮೂಲಕ ಶಿಬಿರ ಸಾರ್ಥಕ ಎನಿಸಿದೆ..

Advertisement

 ಮಂಜುನಾಥ ಶಿರೂರು 

Advertisement

Udayavani is now on Telegram. Click here to join our channel and stay updated with the latest news.

Next