ಮಹಾನಗರ: ಜಿ.ಪಂ.ಸಾರ್ವ ಜನಿಕ ಶಿಕ್ಷಣ ಇಲಾಖೆ, ಉಪನಿರ್ದೇಶಕರ ಕಚೇರಿ, ಕರ್ನಾಟಕ ರಾಜ್ಯ ಜಿಲ್ಲಾ ದೈಹಿಕ ಶಿಕ್ಷಕರ ಸಂಘ ಮತ್ತು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಂಗಳಜ್ಯೊತಿ ಸಮಗ್ರ ಶಾಲೆ ಸಂಯುಕ್ತ ಆಶ್ರಯದಲ್ಲಿ 7ನೇ ರಾಜ್ಯ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಮಟ್ಟದ ವಿಶೇಷ ಸಾಮರ್ಥ್ಯದ ಮಕ್ಕಳ ಕ್ರೀಡಾ ಕೂಟ 2018 ವಾಮಂಜೂರು ಎಸ್‌ಡಿಎಂ ಮಂಗಳ ಜ್ಯೊತಿ ಶಾಲಾ ಕ್ರೀಡಾಂಗಣದಲ್ಲಿ ಜರಗಿತು.
ಮೇಯರ್ ಕವಿತಾ ಸನಿಲ್ ಉದ್ಘಾಟಿಸಿ, ಈ ಮಕ್ಕಳು ಸಾಧನೆ ಮಾಡಲು ಹೆಚ್ಚು ಪ್ರೋತ್ಸಾಹ ನೀಡಬೇಕು ಎಂದರು. ಶಾಸಕ ಮೊಯಿದಿನ್ ಬಾವಾ ಅಧ್ಯಕ್ಷತೆ ವಹಿಸಿದ್ದರು. ಕಾರ್ಪೊರೇಟರ್ ಭಾಸ್ಕರ್ ಕೆ. ಧ್ವಜಾರೋಹಣ ಮಾಡಿದರು. ತಾ.ಪಂ.ಅಧ್ಯಕ್ಷ ಮಹಮದ್ ಮೋನು ಬಹುಮಾನ ವಿತರಿಸಿದರು.
ಎಸ್‌ಡಿಎಂ ಮಂಗಳಜ್ಯೊತಿ ಸಮಗ್ರ ಶಾಲೆಯ ಕಾರ್ಯದರ್ಶಿ ಪ್ರೊ| ಎ. ರಾಜೇಂದ್ರ ಶೆಟ್ಟಿ, ಖಜಾಂಚಿ ಡಾ| ದೇವರಾಜ್, ಆಡಳಿತಾಧಿಕಾರಿ ಗಣೇಶ್ ಭಟ್, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ರಘುನಾಥ್, ದೈಹಿಕ ಶಿಕ್ಷಣ ಪರಿವೀಕ್ಷಕರಾದ ಗುರುನಾಥ್ ಬಾಗೇವಾಡಿ, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಎಚ್. ನಾಯಕ್, ಹೈಸ್ಕೂಲು ವಿಭಾಗದ ಮುಖ್ಯಸ್ಥ ಅಶೋಕ್ ಕುಮಾರ್, ಪ್ರಾಥಮಿಕ ವಿಭಾಗದ ಮುಖ್ಯಸ್ಥೆ ಮಾರ್ಯೆಟ್ ಮಸ್ಕರೇನ್ಹಸ್, ಶೇಖರ್ ಕಡ್ತಲ, ಅಲೋಶಿಯಸ್ ಡಿ’ಸೋಜಾ, ಶಿವಶಂಕರ ಭಟ್ ಉಪಸ್ಥಿತರಿದ್ದರು. ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ವೈ. ಶಿವರಾಮಯ್ಯ ಸ್ವಾಗತಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಪಿ. ಜ್ಞಾನೇಶ್ ವಂದಿಸಿದರು. ಅಜಿತ್ ಕುಮಾರ್ ಕೊಕ್ರಾಡಿ ನಿರೂಪಿಸಿದರು.
ಕ್ರೀಡಾಸ್ಪೂರ್ತಿ ಮೆರೆದು ಖುಶಿ ಪಟ್ಟ ಮಕ್ಕಳು
ಅಂವೈಕಲ್ಯ ಮೆಟ್ಟಿ ನಿಂತು ಕ್ರೀಡಾಸ್ಫೂರ್ತಿ ತೋರಿದ ವಿದ್ಯಾರ್ಥಿ ಗಳು ನಾನಾ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಸೋಲು-
ಗೆಲುವಿನ ನಡುವೇ ಖುಷಿ ಪಟ್ಟರು.
ರಾಜ್ಯದ 30 ಜಿಲ್ಲೆಗಳಿಂದ ಸುಮಾರು 700ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ರನ್ನಿಂಗ್ ರೇಸ್, ಉದ್ದ ಜಿಗಿತ, ಗುಂಡೆಸೆತ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ವಿವಿಧ ರೀತಿಯ ದೈಹಿಕ ನ್ಯೂನತೆಗಳಿದ್ದರೂ ಕ್ರೀಡಾ ಸ್ಪರ್ಧೆಗಳಲ್ಲಿ ತಾವು ಯಾರಿಗೂ ಕಮ್ಮಿ ಇಲ್ಲ ಎಂಬಂತೆ ಉತ್ಸಾಹದಿಂದ ಪಾಲ್ಗೊಂಡರು.
ಗುಂಡೆಸೆತದಲ್ಲಿ ಪ್ರಥಮ ಸ್ಥಾನದ ಪಡೆದ ಧಾರವಾಡ ಚೇತನಾ ಪಬ್ಲಿಕ್ ಸ್ಕೂಲ್‌ನ ಅಶ್ಮೀರಾ ಅವರು, ದೈಹಿಕ ನ್ಯೂನತೆಗಳು ಸಾಧನೆಗೆ ಅಡ್ಡಿ ಅಲ್ಲ. ಗುಂಡೆಸೆತದಲ್ಲಿ ಹಲವು ಬಾರಿ ಬಹುಮಾನ ಗಳಿಸಿದ್ದೇನೆ. ಈ ಬಾರಿಯ ಸ್ಪರ್ಧೆಯಲ್ಲಿ ಮೊದಲ ಸ್ಥಾನ ಕಾಯ್ದುಕೊಂಡಿರುವುದು ಖುಷಿ ಮತ್ತು ಸ್ಫೂರ್ತಿ ತಂದಿದೆ ಎಂದಿದ್ದಾರೆ.